Advertisement
ದುರಂತ ಸಂಭವಿಸುವ ವೇಳೆ ಬ್ರಿಡ್ಜ್ ನಲ್ಲಿ 500ಕ್ಕೂ ಅಧಿಕ ಮಂದಿ ಇದ್ದರು ಎಂದು ಹೇಳಲಾಗಿದೆ. ಅದು ಕುಸಿದು ಬಿದ್ದ ವೇಳೆ 100 ಮಂದಿ ನೀರು ಪಾಲಾಗಿದ್ದಾರೆ. 40 ಮಂದಿಯನ್ನು ಸ್ಥಳದಲ್ಲೇ ಇದ್ದವರು ಪಾರು ಮಾಡಿದ್ದಾರೆ.ಕುಸಿದು ಬಿದ್ದ ಕೇಬಲ್ ಬ್ರಿಡ್ಜ್ ಅನ್ನು ಹಿಡಿದುಕೊಂಡು ನೇತಾಡುತ್ತಿದ್ದ ಹತ್ತು ಮಂದಿಯನ್ನು ಪಾರು ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಎರಡು ತಂಡಗಳು ಸ್ಥಳಕ್ಕೆ ಧಾವಿಸಿ, ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ನಿರತವಾಗಿವೆ. ದುರಂತದ ಬಗ್ಗೆ ಮಾಹಿತಿ ದೊರೆಯುತ್ತಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವೈದ್ಯರು ಮತ್ತು ಸಿಬ್ಬಂದಿಯ ಸ್ಥಳಕ್ಕೆ ಧಾವಿಸಿದ್ದಾರೆ.
ಕೇವಲ ನಾಲ್ಕು ದಿನಗಳ ಹಿಂದಷ್ಟೇ ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಕೇಬಲ್ ಬ್ರಿಡ್ಜ್ ಅನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಬಳಕೆಗಾಗಿ ಮುಕ್ತಗೊಳಿಸಲಾಗಿತ್ತು. “ಕಳೆದ ವಾರವಷ್ಟೇ ಅದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಅದು ಕುಸಿದು ಬಿದ್ದಿರುವುದರಿಂದ ಆಘಾತ ಉಂಟಾಗಿದೆ. ಅದರ ಸಂಪೂರ್ಣ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಲಿದೆ’ ಗುಜರಾತ್‌ನ ಉದ್ಯೋಗ ಮತ್ತು ಕಾರ್ಮಿಕ ಸಚಿವ ಬೃಜೇಶ್ ಮೆರ್ಜಾ ಹೇಳಿದ್ದಾರೆ. ಪ್ರಮುಖರ ಶೋಕ
ಸದ್ಯ ಗುಜರಾತ್ ಪ್ರವಾಸದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿ ಘಟನೆಗೆ ದುಃಖ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜತೆಗೆ ಮಾತನಾಡಿ ಅಗತ್ಯ ನೆರವು ನೀಡುವ ವಾಗ್ಧಾನ ಮಾಡಿದ್ದಾರೆ. ಅಸುನೀಗಿದ ವ್ಯಕ್ತಿಗಳ ಕುಟುಂಬಕ್ಕೆ ತಲಾ 2 ಲಕ್ಷ ರೂ., ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನೂ ಪ್ರಕಟಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪ್ರಮುಖರು ದುಖ ವ್ಯಕ್ತಪಡಿಸಿದ್ದಾರೆ.