Advertisement

Over Speed: ರಾಜ್ಯದ ರಸ್ತೆಗಳಲ್ಲಿ130ಕಿ.ಮೀ.ಕ್ಕಿಂತ ವೇಗಮಿತಿ ಮೀರಿದರೆ ಕೇಸ್‌!

10:31 AM Jul 28, 2024 | Team Udayavani |

ರಾಮನಗರ: ರಾಜ್ಯದ ಯಾವುದೇ ರಸ್ತೆಯಲ್ಲಿ 130 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ವಾಹನ ಚಾಲನೆ ಮಾಡಿದರೆ ಆ. 1ರಿಂದ ಪ್ರಕರಣ ದಾಖಲಾಗಲಿದೆ. ಈ ಅಪರಾಧಕ್ಕೆ 2 ಸಾವಿರ ರೂ.ವರೆಗೆ ದಂಡ ಅಥವಾ 6 ತಿಂಗಳು ಜೈಲು ಶಿಕ್ಷೆ ಆಗಬಹುದು.

Advertisement

ಸಂಚಾರ ಪೊಲೀಸರು ಅಥವಾ ಟ್ರಾಫಿಕ್‌ ಇಂಟರ್‌ ಸೆಪ್ಟರ್‌ ಮೂಲಕ ಅತೀ ವೇಗದ ವಾಹನ ಚಾಲನೆ ಗುರುತಿಸುವುದಲ್ಲ. ಬದಲಾಗಿ ಸ್ಪಾಟ್‌ ಮತ್ತು ಸೆಕ್ಷನಲ್‌ ಸ್ವರೂಪ- ಹೀಗೆ ಎರಡು ರೀತಿಯಲ್ಲಿ ಅತೀ ವೇಗದ ವಾಹನ ಚಾಲನೆಯನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗುತ್ತದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಮಿತಿಮೀರಿದ ವೇಗದ ಚಾಲನೆ ಪೊಲೀಸರಿಗೆ ದೊಡ್ಡ ತಲೆನೋವು ಉಂಟು ಮಾಡಿತ್ತು. ಇದರಿಂದ ಅಪಘಾತಗಳು ಹೆಚ್ಚಿದ್ದವು. ಇದಕ್ಕೆ ದಂಡ ವಿಧಿಸುವ ಕ್ರಮ ಅನುಸರಿಸಲಾಗಿತ್ತಾದರೂ ಕೆಲವು ವಾಹನ ಚಾಲಕರು ಕೆಮರಾ ಇರುವಲ್ಲಿ ಮಾತ್ರ ನಿಧಾನವಾಗಿ ಚಲಿಸಿ, ಆ ಸ್ಥಳ ದಾಟಿದ ಮೇಲೆ ವೇಗ ಹೆಚ್ಚಿಸುವುದು ಸೇರಿದಂತೆ ಹಲವು ಕಣ್ತಪ್ಪಿಸುವ ತಂತ್ರಗಳನ್ನು ಅನುಸರಿಸುತ್ತಿದ್ದರು. ಹೀಗಾಗಿ ವಾಹನ ಸವಾರರು ಚಾಪೆ ಕೆಳೆಗೆ ತೂರಿದರೆ ಪೊಲೀಸರು ರಂಗೋಲಿ ಕೆಳಗೆ ತೂರಲು ಹೊರಟಿದ್ದಾರೆ.

ಆ. 1ರಿಂದ ಎಫ್‌ಐಆರ್‌
ಮಿತಿಮೀರಿದ ವೇಗಕ್ಕೆ ಕಡಿವಾಣ ಹಾಕುವುದಕ್ಕಾಗಿ 130 ಕಿ.ಮೀ.ಗಿಂತ ವೇಗವಾಗಿ ವಾಹನ ಚಾಲನೆ ಮಾಡಿದಲ್ಲಿ ಅದನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ವಾಹನ ಚಾಲನೆ ಎಂದು ಪರಿಗಣಿಸಿ ಅಂತಹ ವಾಹನಗಳ ಮಾಲಕರ ವಿರುದ್ಧ ಆ. 1ರಿಂದ ಎಫ್‌ಐಆರ್‌ ದಾಖಲಿಸಲಾಗುತ್ತದೆ.

ಏನಿದು ಸ್ಪಾಟ್‌ ಮತ್ತು ಸೆಕ್ಷನಲ್‌ ಮಾಪನ?
ಸ್ಪಾಟ್‌ ಅಂದರೆ, ಆ ಕ್ಷಣದಲ್ಲಿ ಎಷ್ಟು ವೇಗದಲ್ಲಿ ವಾಹನ ಸಾಗುತ್ತಿದೆ ಎಂಬುದನ್ನು ಕೆಮರಾ ನೆರವಿನಿಂದ ಮಾಪನ ಮಾಡುವುದು. ಸೆಕ್ಷನಲ್‌ ಅಂದರೆ, ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ವಾಹನ ಎಷ್ಟು ಸಮಯದಲ್ಲಿ ಬಂತು ಎಂಬುದನ್ನು ಅಳೆದು ವೇಗವನ್ನು ಲೆಕ್ಕ ಹಾಕುವುದು. ಕೆಮರಾ ಕಂಡಾಗ ವಾಹನವನ್ನು ನಿಧಾನ ಮಾಡಿ, ಕೆಮರಾ ಮರೆಯಾಗುತ್ತಲೇ ವೇಗ ಹೆಚ್ಚಿಸುವ ವಾಹನ ಚಾಲಕರಿಗೆ ಕಡಿವಾಣ ಹಾಕಲು ಈ ವಿನೂತನ ಉಪಾಯವನ್ನು ಪೊಲೀಸರು ಹೂಡಿದ್ದಾರೆ.

Advertisement

“ಶೇ. 99ರಷ್ಟು ಅಪಘಾತಗಳು ಮಿತಿಮೀರಿದ ವೇಗದ ಸಂಚಾರದಿಂದಲೇ ಸಂಭವಿಸುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಆ. 1ರಿಂದ 130 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು. ಸ್ಪಾಟ್‌ ಸ್ಪೀಡ್‌ ಮತ್ತು ಸೆಕ್ಷನಲ್‌ ಸ್ಪೀಡ್‌ ಎಂದು ಎರಡು ರೀತಿಯಲ್ಲಿ ವಾಹನಗಳ ವೇಗವನ್ನು ಅಳೆಯಲಾಗುವುದು.” – ಅಲೋಕ್‌ ಕುಮಾರ್‌, ಎಡಿಜಿಪಿ, ಸಂಚಾರ ಮತ್ತು ರಸ್ತೆ ಸುರಕ್ಷೆ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next