Advertisement

ಮಿತಿ ಮೀರಿದೆ ಬೀದಿ ನಾಯಿಗಳ ಹಾವಳಿ

12:30 PM Jul 02, 2019 | Suhan S |

ರಾಮನಗರ: ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರುತ್ತಿದೆ. ಜಿಲ್ಲೆಯ ನಗರ, ಪಟ್ಟಣ, ಹೋಬಳಿ, ಗ್ರಾಮಗಳಲ್ಲಿ ಇದೇ ಪರಿಸ್ಥಿತಿ. ಆಹಾರ ಅರಸಿ ಬರುವ ಕಾಡಾನೆಗಳು ತೋಟ, ಗದ್ದೆಗಳನ್ನು ನಾಶ ಪಡಿಸುತ್ತಿವೆ. ಇನ್ನೊಂದೆಡೆ ನಾಯಿಗಳನ್ನ ತಿನ್ನಲು ಚಿರತೆಗಳು ದಾಂಗುಡಿ ಇಡುತ್ತಿವೆ.

Advertisement

2018ರ ಜನವರಿಯಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ 10,492 ಮಂದಿಗೆ ಬೀದಿ ನಾಯಿಗಳು ಕಚ್ಚಿ ಗಾಯ ಮಾಡಿವೆ. ರಾಮನಗರ ತಾಲೂಕಿನಲ್ಲಿ 3,344 ಮಂದಿಗೆ, ಚನ್ನಪಟ್ಟಣದಲ್ಲಿ 2,027, ಕನಕಪುರದಲ್ಲಿ 3,418 ಮತ್ತು ಮಾಗಡಿಯಲ್ಲಿ 1,703 ಮಂದಿಗೆ ಬೀದಿ ನಾಯಿಗಳು ಕಚ್ಚಿವೆ ಎಂದು ಆರೋಗ್ಯ ಇಲಾಖೆ ಅಧಿಕೃತ ಅಂಕಿ ಅಂಶಗಳನ್ನು ನೀಡಿದೆ.

2019ರ ಜನವರಿಯಿಂದ ಮಾರ್ಚ್‌ ಅಂತ್ಯದವರೆಗೆ ರಾಮನಗರದಲ್ಲಿ 199, ಚನ್ನಪಟ್ಟಣದಲ್ಲಿ 172, ಕನಕಪುರದಲ್ಲಿ 182 ಮತ್ತು ಮಾಗಡಿಯಲ್ಲಿ 191 ಮಂದಿ ಒಟ್ಟು 744 ಮಂದಿಗೆ ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿವೆ.

ಎಬಿಸಿ ಕಾಯ್ದೆ 2001ರ ಭಯ?: ಆರ್ಥಿಕ ಪರಿಸ್ಥಿತಿಯ ಜೊತೆಗೆ ಪ್ರಾಣಿ ದಯಾ ಸಂಘಗಳ ಸಮಸ್ಯೆಯೂ ಇದೆ ಎನ್ನುತ್ತಾರೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು. ಬಹುತೇಕ ಎಲ್ಲಾ ಸಂಸ್ಥೆಗಳ ಅಧಿಕಾರಿಗಳು ಪ್ರಾಣಿ ದಯಾ ಸಂಘದ ಕಾರ್ಯಕರ್ತರ ಹೋರಾಟದ ನೆಪವೊಡ್ಡಿ ಸುಮ್ಮನಾಗುತ್ತಿದ್ದಾರೆ. ಅನಿಮಲ್ ಬರ್ತ್‌ ಕಂಟ್ರೋಲ್ (ಡಾಗ್ಸ್‌) ಆಕ್ಟ್ (ಎಬಿಸಿ) 2001ನ್ನು ಉಲ್ಲೇಖೀಸಿ, ತಮ್ಮ ಅಸಹಾಯಕತೆಯನ್ನು ಅಧಿಕಾರಿಗಳು ತೋಡಿಕೊಳ್ಳುತ್ತಿದ್ದಾರೆ.

ನಾಯಿಗಳಿಂದ ಕಚ್ಚಿಸಿಕೊಂಡ ನಾಗರಿಕರು ರೇಬಿಸ್‌ ನಿರೋಧಕ ಚುಚ್ಚು ಮದ್ದು ಚುಚ್ಚಿಸಿಕೊಂಡು ಹೈರಾಣಾಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬಿಸ್‌ ಚುಚ್ಚು ಮದ್ದು ಲಭ್ಯವಿದೆ ಎಂದು ಜಿಲ್ಲಾ ವೈದ್ಯಾಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಆದರೆ, ಈ ಬಗ್ಗೆಯೂ ದೂರುಗಳು ಕೇಳಿ ಬರುತ್ತಿವೆ.

Advertisement

ಟೆಂಡರ್‌ಗೆ ಸ್ಪಂದನೆ ಸಿಗ್ತಿಲ್ಲ: ನಗರಸಭೆ ವ್ಯಾಪ್ತಿಯಲ್ಲಿ 2 ಸಾವಿರಕ್ಕೂ ಹೆಚ್ಚು ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಬೀದಿ ನಾಯಿಗಳ ನಿಯಂತ್ರಣ ಸಮಿತಿ ರಚಿಸಲಾಗಿದೆ.

ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಿ, ಸುರಕ್ಷಿತವಾಗಿ ಅದೇ ಸ್ಥಳದಲ್ಲಿ ಬಿಡಲು ಟೆಂಡರ್‌ ಕರೆದರೂ ಯಾರೂ ಟೆಂಡರ್‌ನಲ್ಲಿ ಭಾಗವಹಿಸುತ್ತಿಲ್ಲ. ಪ್ರತಿಯೊಂದು ಬೀದಿ ನಾಯಿಯ ಚಿಕಿತ್ಸೆಗೆ ಅಂದಾಜು 900 ರೂ. ಖರ್ಚಾಗಲಿದ್ದು, ವಾಹನ ಸೌಲಭ್ಯ, ಸ್ಥಳಾವಕಾಶ ಮತ್ತಿತರ ವೆಚ್ಚಗಳು ಸೇರಿ ಹಲವಾರು ಲಕ್ಷ ರೂ. ಬೇಕಾಗಿದೆ. ಈ ವೆಚ್ಚವನ್ನು ಸ್ಥಳೀಯ ಸಂಸ್ಥೆಗಳು ತಮ್ಮ ನಿಧಿಯಿಂದಲೇ ಬಳಸಬೇಕಾಗಿದೆ. ಸರ್ಕಾರದಿಂದ ಅನುದಾನ ಸಿಗೋಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಗಳು ಮೌನಕ್ಕೆ ಶರಣಾಗಿವೆ.

ನಾಯಿಗಳ್ಳೋ, ನರಿಗಳ್ಳೋ?: ಕೆಲವು ಹಳ್ಳಿಗಳಲ್ಲಿ ನಾಯಿಗಳು ಕೋಳಿ, ಕುರಿಯನ್ನು ಕಚ್ಚಿ ತಿನ್ನುತ್ತಿವೆ ಎಂಬ ದೂರುಗಳಿವೆ. ಇವೇನು ನಾಯಿಗಳ್ಳೋ ಅಥವಾ ನರಿಗಳ್ಳೋ ಎಂದು ಗ್ರಾಮೀಣ ಪ್ರದೇಶದ ನಾಗರಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ನಗರ, ಪಟ್ಟಣ, ಗ್ರಾಮ ಎನ್ನುವ ಭೇದ ಭಾವವಿಲ್ಲದೆ, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯ ಪಡುತ್ತಿದ್ದಾರೆ.

ಬಿಡಾಡಿ ದನಗಳಿಗಿಲ್ಲ ಗೋ ಶಾಲೆ!: ಬಿಡಾಡಿ ದನಗಳಿಗೆ ಸರ್ಕಾರದ ವತಿಯಿಂದ ಗೋ ಶಾಲೆಗಳಿಲ್ಲ ಎಂದು ಗುರುತಿಸಿಕೊಳ್ಳಲು ಇಚ್ಚಿಸದ ಪಶುವೈದ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೆಲವು ಖಾಸಗಿ ಗೋ ಶಾಲೆಗಳಿವೆ. ಕೆಲವು ಸಾರ್ವಜನಿಕರು ಬಿಡಾಡಿ ದನಗಳನ್ನು ಈ ಗೋ ಶಾಲೆಗಳಿಗೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಮೇಲ್ವಿಚಾರಣೆ ಸಮಿತಿ ರಚಿಸಲಿ:

ಬೀದಿ ನಾಯಿಗಳನ್ನು ಸಾಯಿಸುವುದು ಅಪರಾಧವಾಗಿದೆ. ಪ್ರಾಣಿಗಳ ವಿರುದ್ಧ ಕ್ರೌರ್ಯ ಕಾಯ್ದೆ 1960 ಜಾರಿಯಲ್ಲಿದೆ. ಇದರೊಟ್ಟಿಗೆ ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಅನಿಮಲ್ ಬರ್ತ್‌ ಕಂಟ್ರೋಲ್ (ಎಬಿಸಿ (ನಾಯಿಗಳು) ನಿಯಮಗಳು ಜಾರಿಯಲ್ಲಿದೆ. ಇದೇ ನಿಯಮಗಳಡಿ ಮೇಲ್ವಿಚಾರಣೆ ಸಮಿತಿಗಳನ್ನು ರಚಿಸಬೇಕಾಗಿದೆ. ಆಯಾ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯ ಅಧಿಕಾರಿಗಳು, ಆರೋಗ್ಯ ಇಲಾಖೆ, ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು, ಪಶು ವೈದ್ಯರು ಹಾಗೂ ಎನ್‌ಜಿಒಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಸಂತಾಹ ಹರಣ, ನಿವರ್ಹಣೆ ಹಾಗೂ ನಿಯಂತ್ರಣ ಸಮಿತಿ ನೇತೃತ್ವದಲ್ಲಿ ನಡೆಯಬೇಕಾಗಿದೆ.
● ಬಿ.ವಿ.ಸೂರ್ಯ ಪ್ರಕಾಶ್‌
Advertisement

Udayavani is now on Telegram. Click here to join our channel and stay updated with the latest news.

Next