Advertisement

ಮೊಗರ್ಪಣೆ ಸೇತುವೆ ಮೇಲ್ಪದರ ಶಿಥಿಲ; ಇಲಾಖೆ ಮೌನ

02:30 AM Jul 03, 2018 | Karthik A |

ಸುಳ್ಯ: ಕಾಂತಮಂಗಲ ಸೇತುವೆ ದುಃಸ್ಥಿತಿ ಕಣ್ಣೆದುರು ಇರುವಾಗಲೇ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಮೊಗರ್ಪಣೆ ಸೇತುವೆಯೂ ನಿರ್ವಹಣೆ ಕೊರತೆಯಿಂದ ಶಿಥಿಲಗೊಳ್ಳುವ ಹಂತಕ್ಕೆ ತಲುಪಿದೆ. ಸುಳ್ಯ ನಗರದ ವ್ಯಾಪ್ತಿಯಲ್ಲೇ ಈ ಸೇತುವೆ ಇದೆ. ಮೊಗರ್ಪಣೆ ಮಸೀದಿ ಸನಿಹದಲ್ಲಿ ಕೆಲ ವರ್ಷಗಳ ಹಿಂದೆಯಷ್ಟೇ ಈ ಸೇತುವೆ ನಿರ್ಮಿಸಲಾಗಿದೆ. ಪಯಸ್ವಿನಿಗೆ ಸೇರುವ ಕೂಗಳತೆ ದೂರದಲ್ಲಿ ಕಂದಡ್ಕ ಹೊಳೆಗೆ ಅಡ್ಡಲಾಗಿ ಇದನ್ನು ನಿರ್ಮಿಸಲಾಗಿದೆ. ಲಕ್ಷಾಂತರ ರೂ. ವೆಚ್ಚದ ಸೇತುವೆ ನಿರ್ವಹಣೆ ಬಗ್ಗೆ ಇಲಾಖೆಗಳು ಕಾರ್ಯೋನ್ಮುಖ ಆಗದಿರುವುದೇ ಶಿಥಿಲಕ್ಕೆ ಕಾರಣ.

Advertisement

ಸಂಪರ್ಕ ಸೇತುವೆ
ಮಾಣಿ-ಮೈಸೂರು ಸಂಪರ್ಕಿಸುವ ರಸ್ತೆಯಲ್ಲಿ ಇರುವ ಈ ಸೇತುವೆ ಕೆಲ ವರ್ಷಗಳ ಹಿಂದೆ ಮೇಲ್ದರ್ಜೆಗೆ ಏರಿಸಿ ನಿರ್ಮಿಸಲಾಗಿತ್ತು. ಶತಮಾನ ಕಂಡಿರುವ ಹಿಂದಿನ ಸೇತುವೆ ಸ್ಥಳದ ಸನಿಹದಲ್ಲಿ ಎತ್ತರವಾಗಿ ಇದನ್ನು ನಿರ್ಮಿಸಲಾಗಿತ್ತು. ಮಾಣಿ-ಮೈಸೂರು ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಆಗಿ ಪರಿವರ್ತನೆಗೊಳ್ಳುವ ಹಿನ್ನೆಲೆಯಲ್ಲಿ ಈ ಸೇತುವೆ ಇನ್ನಷ್ಟು ಮಹತ್ವ ಪಡೆದುಕೊಂಡಿತ್ತು.


ಶಿಥಿಲವಾದ ಮೇಲ್ಪದರ

ಸೇತುವೆ ಮೇಲ್ಪದರ ಶಿಥಿಲಗೊಂಡು, ಕಬ್ಬಿಣದ ಸರಳುಗಳು ಕಾಣುತ್ತಿವೆ. ಆರಂಭದಲ್ಲಿ ಒಂದು ಭಾಗದಲ್ಲಿ ಇದ್ದ ಈ ಸಮಸ್ಯೆ ಈಗ ಇಡೀ ಸೇತುವೆಯನ್ನು ಆವರಿಸಿಕೊಂಡಿದೆ. ಸೇತುವೆಯ ಎರಡು ಬದಿಯಲ್ಲಿ ಪೈಪ್‌ ಲೈನ್‌ ಮತ್ತು ಪಾದಚಾರಿಗಳ ನಡಿಗೆಗೆ ಅನುಕೂಲವಾಗಲೆಂದು ನಿರ್ಮಿಸಿದ ದಿಡ್ಡಿನ ಮೇಲೆ ವಾಹನ ಹಾದು ಹೋಗಿ ಹಾನಿ ಉಂಟಾಗಿದೆ. ಮಳೆಗಾಲದ ಅಬ್ಬರ, ವಾಹನ ಓಡಾಟದ ಪರಿಣಾಮ, ಸಮಸ್ಯೆ ಇನ್ನಷ್ಟು ಬಿಗಾಡಿಸುವ ಸಾಧ್ಯತೆ ಹೆಚ್ಚಿದೆ ಅನ್ನುತ್ತಿದೆ ಸದ್ಯದ ಚಿತ್ರಣ.


ವಾಹನ ಓಡಾಟ ಹೆಚ್ಚಳ

ಬೆಂಗಳೂರು, ಮೈಸೂರು, ಮಡಿಕೇರಿ ಮೊದಲಾದ ಭಾಗಗಳಿಂದ ಮಂಗಳೂರಿಗೆ ನೂರಾರು ವಾಹನಗಳು ಸಂಚರಿಸುತ್ತವೆ. ಚಾರ್ಮಾಡಿ, ಶಿರಾಡಿ ಘಾಟಿ ರಸ್ತೆಗಳು ಹದಗೆಟ್ಟ ಸಂದರ್ಭದಲ್ಲಿ ಇಲ್ಲಿ ಸಂಚಾರ ದಟ್ಟಣೆ ದುಪ್ಪಟ್ಟಾಗುತ್ತದೆ. ನೂರಾರು ಘನ ವಾಹನಗಳು ಇದೇ ಸೇತುವೆಯನ್ನು ಆಶ್ರಯಿಸಿವೆ. ಆಪತ್ಕಾಲದಲ್ಲಿ ಬೆಂಗಳೂರಿಗೆ ತೆರಳಲು ಇರುವ ಪರ್ಯಾಯ ರಸ್ತೆಯೆಂದು ಗುರುತಿಸಿದೆ.

ಇಲಾಖೆ ಮೌನ
ಮಾಣಿ-ಸಂಪಾಜೆ ತನಕದ ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗಿ ಪರಿರ್ವತನೆಗೊಳ್ಳದಿರುವ ಕಾರಣ, ಈಗಲೂ ಈ ರಸ್ತೆ ರಾಜ್ಯ ಸರಕಾರದ ಕೆ.ಆರ್‌.ಡಿ.ಸಿ.ಎಲ್‌. ಸುಪರ್ದಿಯಲ್ಲಿದೆ. ನಿರ್ವಹಣೆ ಸಮರ್ಪಕ ಆಗಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತ ಡಿ.ಎಂ. ಶಾರೀಕ್‌ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ನಗರ ಪಂಚಾಯತ್‌ ವ್ಯಾಪ್ತಿಯೊಳಗೆ ಈ ಸೇತುವೆ ಪ್ರದೇಶ ಸೇರಿದ್ದರೂ, ತುರ್ತು ಸ್ಪಂದನೆಗೆ ಇಲ್ಲಿನ ಆಡಳಿತವೂ ಮುಂದಾಗಿಲ್ಲ. ದಿನಂಪ್ರತಿ ಇಲಾಖೆ ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಅದಾಗ್ಯೂ ಸಮಸ್ಯೆ ಬಗ್ಗೆ ಗಮನವೇ ಹರಿಸಿಲ್ಲ. ಸಣ್ಣ ಸಮಸ್ಯೆ ಎಂದೂ ಮೌನವಾದರೆ, ಕಾಂತಮಂಗಲದ ಸ್ಥಿತಿಯೇ ಇಲ್ಲಿಗೂ ಬರಬಹುದು ಅನ್ನುತ್ತಾರೆ ಸವಾರರು.

Advertisement


ಅಪಾಯ ಕಟ್ಟಿಟ್ಟ ಬುತ್ತಿ

ಪುತ್ತೂರು ಭಾಗದಿಂದ ಸುಳ್ಯ, ಮಡಿಕೇರಿಗೆ ತೆರಳಲು ಈ ರಸ್ತೆಯಲ್ಲೇ ಸಂಚರಿಸುತ್ತೇವೆ. ಕೆಲ ದಿನಗಳ ಹಿಂದೆ ಸಣ್ಣದಾದ ಬಿರುಕು ಇತ್ತು. ಈಗ ದೊಡ್ಡದಾಗಿದೆ. ತತ್‌ಕ್ಷಣ ದುರಸ್ತಿ ಮಾಡದಿದ್ದರೆ ಆಪತ್ತು ಕಟ್ಟಿಟ್ಟ ಬುತ್ತಿ. 
– ನೂರುದ್ದಿನ್‌ ಸಾಲ್ಮರ, ನ್ಯಾಯವಾದಿ

ದುರಸ್ತಿಗೆ ಕ್ರಮ
ಮೊಗರ್ಪಣೆ ಸೇತುವೆ ಮೇಲ್ಪದರ ಶಿಥಿಲಗೊಂಡಿರುವ ವಿಚಾರ ಗಮನಕ್ಕೆ ಬಂದಿದೆ. ತತ್‌ಕ್ಷಣ ಅದರ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. 
– ಲಿಂಗೇಗೌಡ, ಸಹಾಯಕ ಕಾರ್ಯಪಾಲ ಎಂಜಿನಿಯರ್‌, ಕೆ.ಆರ್‌.ಡಿ.ಸಿ.ಎಲ್‌.

— ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next