Advertisement

ರಾಜಸ್ಥಾನ ವಲಸೆ ಕಾರ್ಮಿಕರ ಪಾಲಿಗೆ ವರದಾನವಾದ ಮನ್ ನರೇಗಾ ಯೋಜನೆ

07:30 PM Jun 08, 2020 | Hari Prasad |

ಜೈಪುರ: ದೇಶವ್ಯಾಪಿ ಲಾಕ್ ಡೌನ್ ಪರಿಸ್ಥಿತಿ ವಲಸೆ ಕಾರ್ಮಿಕರ ಪಾಲಿಗೆ ಸಂಕಟಗಳ ಸರಮಾಲೆಯನ್ನೇ ತಂದೊಡ್ಡಿದೆ.

Advertisement

ಪ್ರಾರಂಭದಲ್ಲಿ ದೇಶದ ವಿವಿಧ ನಗರಗಳಲ್ಲಿ ದುಡಿಯುತ್ತಿದ್ದ ವಲಸೆ ಕಾರ್ಮಿಕರ ಅನ್ನದ ಬಟ್ಟಲನ್ನು ಕೋವಿಡ್ ಸಂಬಂಧಿತ ಲಾಕ್ ಡೌನ್ ಕಿತ್ತುಕೊಂಡಿತು.

ಬಳಿಕ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹಿಂದಿರುಗಲು ಪರಿಪಾಟಲು ಪಡುವಂತಾಯಿತು.

ಆದರೆ ಇವೆಲ್ಲಾ ಸಂಕಷ್ಟಗಳ ನಡುವೆಯೂ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರಿಗೆ ವರದಾನವಾಗಿರುವುದು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನ್ ನರೇಗಾ).

ಈ ಯೋಜನೆಯಡಿಯಲ್ಲಿ ಕಾರ್ಮಿಕರನ್ನು ನೋಂದಾಯಿಸಿಕೊಂಡು ಕೆಲಸಕೊಟ್ಟಿರುವ ರಾಜ್ಯಗಳಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ. ಇಲ್ಲಿ ಪ್ರತೀ ದಿನ 50 ಲಕ್ಷ ಕಾರ್ಮಿಕರು ಈ ಯೋಜನೆಯಡಿಯಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಇವರಲ್ಲಿ ಸುಮಾರು 13 ಲಕ್ಷ ಮಂದಿ ವಲಸೆ ಕಾರ್ಮಿಕರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ರಾಜಸ್ಥಾನದ ಗ್ರಾಮೀಣ ಭಾಗಗಳಲ್ಲಿ ಕೆಲಸವಿಲ್ಲದೇ ಸಂಕಷ್ಟಕ್ಕೊಳಗಾಗಿದ್ದ ಲಕ್ಷಾಂತರ ಕಾರ್ಮಿಕರ ಪಾಲಿಗೆ ಈ ಯೋಜನೆ ಸಂಜೀವಿನಿಯಾಗಿ ಪರಿಣಮಿಸಿದೆ. ಈ ಆಸಕ್ತಿದಾಯಕ ಮಾಹಿತಿಯನ್ನು ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರೂ ಆಗಿರುವ ಸಚಿನ್ ಪೈಲಟ್ ಅವರು ತಿಳಿಸಿದ್ದಾರೆ.

ಏಪ್ರಿಲ್ ತಿಂಗಳಿನಲ್ಲಿ ರಾಜ್ಯದಲ್ಲಿ ಕೇವಲ 62,000 ಕಾರ್ಮಿಕರು ಮಾತ್ರವೇ ಈ ಯೋಜನೆಯಡಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು ಆದರೆ ಅದೇ ಸಂಖ್ಯೆ ಜೂನ್ 8ರ ಹೊತ್ತಿಗೆ 50.20 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಸಚಿನ್ ಪೈಲಟ್ ಮಾಹಿತಿ ನೀಡಿದ್ದಾರೆ.

ರಾಜಸ್ಥಾನದ ಭಿಲ್ವಾರ ಜಿಲ್ಲೆಯೊಂದರಲ್ಲೇ 4.11 ಲಕ್ಷ ದಿನಗೂಲಿ ಕಾರ್ಮಿಕರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಬಳಿಕ ಡುಂಗರ್ ಪುರದಲ್ಲಿ 3.55 ಲಕ್ಷ, ಬನ್ಸ್ವಾರಾದಲ್ಲಿ 3.5 ಲಕ್ಷ ಹಾಗೂ ಅಜ್ಮೇರ್ ನಲ್ಲಿ 2.67 ಲಕ್ಷ ಕಾರ್ಮಿಕರು ಮನ್ ನರೇಗಾ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡು ಉದ್ಯೋಗವನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next