ಹೊಸದಿಲ್ಲಿ/ ಚಂಡೀಗಢ: ಪಂಚರಾಜ್ಯ ಚುನಾವಣೆಗಳು ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಕಸರತ್ತು ಆರಂಭಿಸಿವೆ. ಪಂಜಾಬ್ ನಲ್ಲಿ ಈ ಬಾರಿ ಅಧಿಕಾರದ ಚುಕ್ಕಾಣಿ ಪಡೆಯಲು ಸಿದ್ದತೆ ನಡೆಸಿರುವ ಅರವಿಂದ ಕೇಜ್ರಿವಾಲ್ ರ ಆಮ್ ಆದ್ಮಿ ಪಕ್ಷ ಹೊಸ ಬಗೆಯ ಯೋಜನೆಯನ್ನು ಮುಂದಿಟ್ಟುಕೊಂಡಿದೆ.
ಫೆಬ್ರವರಿ 14 ರಂದು ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಆಮ್ ಆದ್ಮಿ ಪಕ್ಷದ ಸಮೀಕ್ಷೆಗೆ ಎಂಟು ಲಕ್ಷಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.
ಆಪ್ ತನ್ನ “ಜಂತಾ ಚುನೇಗಿ ಅಪ್ನಾ ಸಿಎಂ” ಡ್ರೈವ್ ಅಡಿಯಲ್ಲಿ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಕೇವಲ 24 ಗಂಟೆಗಳಲ್ಲಿ, ಪಂಜಾಬ್‌ನಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಎಎಪಿ ಬಿಡುಗಡೆ ಮಾಡಿದ ಫೋನ್ ಸಂಖ್ಯೆಗೆ ಎಂಟು ಲಕ್ಷಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ ಎಂದು ಆಪ್ ಹಿರಿಯ ನಾಯಕ ಹರ್ಪಾಲ್ ಸಿಂಗ್ ಚೀಮಾ ಶುಕ್ರವಾರ ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಸಂದೇಶಗಳು, ನಾಲ್ಕು ಲಕ್ಷಕ್ಕೂ ಹೆಚ್ಚು ಫೋನ್ ಕರೆಗಳು, 50,000 ಕ್ಕೂ ಹೆಚ್ಚು ಟೆಕ್ಸ್ಟ್ ಸಂದೇಶಗಳು ಮತ್ತು ಒಂದು ಲಕ್ಷಕ್ಕೂ ಹೆಚ್ಚು ಧ್ವನಿ ಸಂದೇಶಗಳು ಈ ಸಂಖ್ಯೆಗೆ ಬಂದಿವೆ ಎಂದು ಹರ್ಪಾಲ್ ಚೀಮಾ ಹೇಳಿದರು.
ಇದನ್ನೂ ಓದಿ:ರಹಾನೆ- ಪೂಜಾರ ಭವಿಷ್ಯದ ಬಗ್ಗೆ ಹೇಳುವುದು ನನ್ನ ಕೆಲಸವಲ್ಲ: ವಿರಾಟ್
ಸಂಪೂರ್ಣ ಮಾಹಿತಿ ಸಂಗ್ರಹಿಸಿ ಕಂಪೈಲ್ ಮಾಡಿದ ನಂತರ ಎಎಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿದೆ ಎಂದು ಹೇಳಿದರು.