ನವದೆಹಲಿ: ದೇಶದಲ್ಲಿ 15ರಿಂದ 18 ವರ್ಷ ವಯೋಮಿತಿಯ ಶೇ.70ಕ್ಕೂ ಅಧಿಕ ಮಕ್ಕಳಿಗೆ ಮೊದಲನೇ ಡೋಸ್ ಕೊರೊನಾ ಲಸಿಕೆ ಕೊಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಭಾನುವಾರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇದೇ ವೇಳೆ, ಲಸಿಕೆ ಪಡೆಯಲು ಬಾಕಿ ಉಳಿದವರು ಆದಷ್ಟು ಬೇಗ ಲಸಿಕೆ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.
18 ವರ್ಷ ಮೇಲ್ಪಟ್ಟವರಲ್ಲಿ ಶೇ. 96 ಮಂದಿಗೆ ಮೊದಲ ಡೋಸ್ ಆಗಿದ್ದರೆ, ಶೇ. 77 ಮಂದಿಗೆ ಎರಡೂ ಡೋಸ್ ಲಸಿಕೆ ಕೊಡಲಾಗಿದೆ. 5-15 ವರ್ಷ ವಯೋಮಿತಿಯ ಮಕ್ಕಳಿಗೆ ಲಸಿಕೆ ಕೊಡುವ ಬಗ್ಗೆ ತಜ್ಞರಿಂದ ಸಲಹೆ ಬಂದ ನಂತರವೇ ತೀರ್ಮಾನ ತೆಗೆದುಕೊಳ್ಳಲಾಗುವುದು. ಲಸಿಕೆಗೆ ಯಾವುದೇ ಕೊರತೆಯಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ 7 ಗಂಟೆಯವರೆಗೆ ದೇಶಾದ್ಯಂತ ಒಟ್ಟಾರೆಯಾಗಿ 172.81 ಕೋಟಿ ಡೋಸ್ ಲಸಿಕೆ ಹಂಚಿಕೆಯಾಗಿರುವುದಾಗಿ ಅಧಿಕೃತ ವರದಿಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಬಯೋಲಾಜಿಕಲ್-ಇ ಸಂಸ್ಥೆ ಉತ್ಪಾದಿಸಿರುವ ಕಾರ್ಬಿವ್ಯಾಕ್ಸ್ ಲಸಿಕೆಯನ್ನು 12-18 ವರ್ಷ ವಯೋಮಿತಿಯವರಿಗೆ ತುರ್ತು ಬಳಕೆಗೆ ಅನುಮತಿ ಕೊಡಬೇಕೆಂದು ಕೋರಿ ಸಂಸ್ಥೆ ಡಿಜಿಸಿಐಗೆ ಮನವಿ ಮಾಡಿದೆ.