Advertisement
ಟರ್ಕಿ ಮತ್ತು ಸಿರಿಯಾದಲ್ಲಿ ಇದುವರೆಗೆ ನಾಲ್ಕು ಪ್ರಬಲ ಭೂಕಂಪಗಳು ಮತ್ತು ಹಲವು ಪಶ್ಚಾತ್ ಕಂಪನಗಳಾಗಿವೆ. ಮಂಗಳವಾರವೂ ಒಂದು ಬಾರಿ ಭೂಮಿ ಕಂಪಿಸಿದ್ದು, ಜನರು ಸಾವಿನ ಭೀತಿಯಿಂದಲೇ ದಿನ ದೂಡುತ್ತಿದ್ದಾರೆ. ಟರ್ಕಿ ಮತ್ತು ಸಿರಿಯಾ ಸೇರಿ ಈವರೆಗೆ 6,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
Related Articles
Advertisement
ಕಟ್ಟಡಗಳ ಕೆಳಗೆ ಸಿಲುಕಿರುವ ಕುಟುಂಬಸ್ಥರನ್ನು ಬದುಕಿಸಲು ಜನರು ಒದ್ದಾಡುತ್ತಿದ್ದಾರೆ. ನುರ್ಗುಲ್ ಅಟಾಯ್ ಎಂಬಾಕೆಯ ಮನೆ ಕುಸಿದು ಬಿದ್ದಿದ್ದು, ಅದರಡಿ ಅವರ ತಾಯಿ ಸಿಲುಕಿದ್ದಾರೆ. ಆಕೆಯ ರೋದನ ಕೇಳುತ್ತಿದೆ, ಆದರೆ ರಕ್ಷಣೆ ಮಾಡಲಾಗುತ್ತಿಲ್ಲ ಎಂದು ಅಟಾಯ್ ನೋವು ತೋಡಿಕೊಂಡಿದ್ದಾರೆ.
ಸಿರಿಯಾದಲ್ಲೂ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅಲ್ಲಿ ಸುಮಾರು 800 ಮಂದಿ ಅಸುನೀಗಿದ್ದು, 2,200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಲ್ಲಿಯೂ ಸಾವಿನ ಸಂಖ್ಯೆ ಗಣನೀಯವಾಗಿ ಏರಬಹುದು ಎಂದು ಹೇಳಲಾಗುತ್ತಿದೆ.
ಧನ್ಯವಾದ ಹೇಳಿದ ಟರ್ಕಿ, ಸಿರಿಯಾ|ಭೂಕಂಪವಾದ ಕೆಲವೇ ತಾಸುಗಳಲ್ಲಿ ಭಾರತ ನೆರವಿಗೆ ಧಾವಿಸಿದೆ. ಭಾರತವೇ ನಿಜವಾದ “ದೋಸ್ತ್’ ಎನ್ನುವುದು ಇದಕ್ಕೇ ಎಂದು ಭಾರತದಲ್ಲಿರುವ ಟರ್ಕಿಯ ರಾಯಭಾರಿ ಹೇಳಿದ್ದಾರೆ. ಇನ್ನೊಂದೆಡೆ ಸಿರಿಯಾ ಕೂಡ ಭಾರತಕ್ಕೆ ಧನ್ಯವಾದ ತಿಳಿಸಿದೆ. ಕಿಡಿಗೇಡಿ ಪಾಕ್
ಪಾಕಿಸ್ಥಾನ ಆರ್ಥಿಕ ಹಿಂಜರಿತದಲ್ಲಿ ಮುಳುಗೇಳುತ್ತಿದ್ದರೂ ಅದಕ್ಕೆ ಇನ್ನೂ ಬುದ್ಧಿ ಬಂದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಮಂಗಳವಾರ ಬೆಳಗ್ಗೆ ರಕ್ಷಣ ಸಾಮಗ್ರಿ ಮತ್ತು ರಾಷ್ಟ್ರೀಯ ವಿಪತ್ತು ದಳದ ಸಿಬಂದಿಯೊಂದಿಗೆ ಟರ್ಕಿಗೆ ಹೊರಟಿದ್ದ ಭಾರತೀಯ ವಾಯು ಸೇನಾ ವಿಮಾನಕ್ಕೆ ಪಾಕ್ ತನ್ನ ವಾಯು ಪ್ರದೇಶ ಪ್ರವೇಶ ನಿರ್ಬಂಧಿಸಿದೆ. ಹೀಗಾಗಿ ಐಎಎಫ್ ವಿಮಾನ ಬೇರೊಂದು ಮಾರ್ಗದಲ್ಲಿ ಟರ್ಕಿ ತಲುಪಿತು. ಎರಡು ವಿಮಾನ ರವಾನೆ
ಟರ್ಕಿಯಲ್ಲಿ ರಕ್ಷಣ ಕಾರ್ಯಾಚರಣೆಗಾಗಿ ಭಾರತದಿಂದ ನಾಲ್ಕು ಯುದ್ಧ ವಿಮಾನಗಳಲ್ಲಿ ಪರಿಹಾರ ಸಾಮಗ್ರಿಗಳು, ಶ್ವಾನಗಳ ಜತೆಗೆ ಎನ್‌ಡಿಆರ್‌ಎಫ್ ಸಿಬಂದಿ ತೆರಳಿ ಕೆಲಸ ಆರಂಭಿಸಿದ್ದಾರೆ. ಐಎಎಫ್ನ ಸಿ-17 ಸಾರಿಗೆ ವಿಮಾನವು ಶೋಧ ಮತ್ತು ಪರಿಹಾರ ಸಿಬಂದಿ, ವಿಶೇಷವಾಗಿ ತರಬೇತಿ ಪಡೆದಿರುವ ಶ್ವಾನಗಳ ತಂಡ, ಡ್ರಿಲ್ಲಿಂಗ್ ಯಂತ್ರ, ಪರಿಹಾರ ಸಾಮಗ್ರಿ, ಔಷಧಗಳನ್ನು ಹೊತ್ತೂಯ್ದಿದೆ. ಇನ್ನೊಂದು ಐಎಎಫ್- ಎಂಸಿಸಿ ಸಿ-17 ಯುದ್ಧ ವಿಮಾನವು ಸೇನಾ ವೈದ್ಯಕೀಯ ಸಿಬಂದಿಯ ಜತೆಗೆ ಇತರ ಪರಿಹಾರ ಕಾರ್ಯಾಚರಣೆ ವಸ್ತುಗಳೊಂದಿಗೆ ತೆರಳಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಭಾರತದಿಂದ ಒಟ್ಟು 99 ಮಂದಿಯ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದೆ. ಸಹಾಯವಾಣಿ ಸ್ಥಾಪಿಸಿದ ಕರ್ನಾಟಕ
ಟರ್ಕಿಯಲ್ಲಿರುವ ಕನ್ನಡಿಗರ ನೆರವಿಗಾಗಿ ಕರ್ನಾಟಕ ಸರಕಾರ ಸಹಾಯವಾಣಿ ಸ್ಥಾಪಿಸಿದೆ. ಟರ್ಕಿಯಲ್ಲಿರುವವರ ಕುರಿತಂತೆ ಯಾವುದಾದರೂ ಮಾಹಿತಿ ಇದ್ದರೆ ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಿಕೊಂಡಿದೆ.
0801070,08022340676