Advertisement

ವೈದ್ಯರ ನಿರ್ಲಕ್ಷ್ಯಕ್ಕೆ 60ಕ್ಕೂ ಅಧಿಕ ಕುರಿಗಳ ಸಾವು

05:03 PM Dec 20, 2019 | Suhan S |

ಗದಗ: ಇಲ್ಲಿನ ಪಶು ವೈದ್ಯರ ನಿರ್ಲಕ್ಷ್ಯದಿಂದ ಸುಮಾರು 60ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, ಕೂಡಲೇ ತಪ್ಪಿತಸ್ಥ ಪಶು ವೈದ್ಯರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕುರಿಗಾಹಿಗಳು ಗುರುವಾರ ಮೃತ ಕುರಿಗಳ ಕಳೆಬರದೊಂದಿಗೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ತಾಲೂಕಿನ ಕಳಸಾಪುರ ಗ್ರಾಮದ ಈರಪ್ಪ ಕನ್ಯಾಳ ಎಂಬುವರಿಗೆ ಸೇರಿದ್ದ ಕುರಿಗಳು ಮೃತಪಟ್ಟಿವೆ. ಕುರಿಗಳು ನಿತ್ರಾಣಗೊಂಡ ಬಗ್ಗೆ ಪಶು ವೈದ್ಯರಿಗೆ ಮಾಹಿತಿ ನೀಡಿದರೂ, ಸ್ಥಳಕ್ಕೆ ಬಾರದಿದ್ದರಿಂದ ಕುರಿಗಳು ಸಾವನ್ನಪ್ಪಿವೆ ಎಂದು ಆರೋಪಿಸಿ, ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲು ಮೃತ ಕುರಿಗಳನ್ನು ಟ್ರಾಕ್ಟರ್‌ನಲ್ಲಿ ಹಾಕಿಕೊಂಡು ಬಂದಿದ್ದರು. ಆದರೆ, ರಾಜ್ಯಾದ್ಯಂತ 144 ಸೆಕ್ಷನ್‌ ಜಾರಿಯಲ್ಲಿರುವುದನ್ನು ಅರಿತು ಮೌನಕ್ಕೆ ಶರಣಾದರು. ಅಲ್ಲದೇ ಘಟನೆಗೆ ಕಾರಣರಾದ ಪಶು ವೈದ್ಯರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪಶು ವೈದ್ಯರ ವಿರುದ್ಧ ಲಂಚಾರೋಪ: ಇದಕ್ಕೂ ಮುನ್ನ ಮೃತಪಟ್ಟಿರುವ 50ಕ್ಕೂ ಹೆಚ್ಚು ಕುರಿಗಳೊಂದಿಗೆ ಕುರಿಗಾರರು ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ್ದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಜಿಪಂ ಸದಸ್ಯ ವಾಸಣ್ಣ ಕುರಡಗಿ ಕುರಿಗಾಹಿಗಳ ಅಹವಾಲು ಆಲಿಸಿದರು.

ಕುರಿಗಾರರ ದೂರಿನಿಂದ ಸಿಡಿಮಿಡಿಗೊಂಡ ಜಿಪಂ ಸದಸ್ಯ ವಾಸಣ್ಣ ಕುರಡಗಿ ಅಧಿಕಾರಿಗಳಿಗೆ ಫೋನ್‌ ಮಾಡಿ ತರಾಟೆಗೆ ತೆಗೆದುಕೊಂಡರು. ಅಲ್ಲದೇ ತಕ್ಷಣವೇ ಜಿಪಂಗೆ ಬರುವಂತೆ ಸೂಚಿಸಿದರು. ನಂತರ ಕುರಿಗಾಹಿಗಳಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next