Advertisement

ತುಳು ಭಾಷೆಯಲ್ಲಿದೆ 6 ಸಾವಿರಕ್ಕೂ ಹೆಚ್ಚು ಪುಟ; ನಾಲ್ಕು ವರ್ಷ ಪೂರೈಸಿದ ತುಳು ವಿಕಿಪೀಡಿಯ

01:14 PM Aug 08, 2020 | mahesh |

ಮಹಾನಗರ: ತುಳು ಭಾಷೆ, ಸಂಸ್ಕೃತಿ ಹೆಚ್ಚಿಸುವ ನಿಟ್ಟಿನಲ್ಲಿ ಇರುವ ಪ್ರಮುಖ ತಾಣವಾದ ತುಳು ವಿಕಿಪೀಡಿಯ ಆ. 5ಕ್ಕೆ ನಾಲ್ಕು ವರ್ಷ ಪೂರೈಸಿ 5ನೇ ವರ್ಷಕ್ಕೆ ಕಾಲಿಟ್ಟಿದೆ. ತುಳು ವಿಕಿಪೀಡಿಯಾದಲ್ಲಿ ಸದ್ಯ 1,350ಕ್ಕೂ ಮಿಕ್ಕಿ ಪರಿಪೂರ್ಣ ಲೇಖನಗಳ ಸಂಗ್ರಹ ಒಳಗೊಂಡಿದ್ದು, 6 ಸಾವಿರಕ್ಕೂ ಹೆಚ್ಚು ಪುಟಗಳಿವೆ.

Advertisement

ತುಳು ಭಾಷೆ ಬೆಳೆಸಿ, ತುಳು ಭಾಷೆ ಯಲ್ಲಿಯೇ ಲೇಖನಗಳ ಸಂಗ್ರಹ ಮಾಡುವ ಉದ್ದೇಶದಿಂದ ಈಗಾಗಲೇ ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡ ತಂಡ ಕಟ್ಟಲಾಗಿದೆ. ಅದೇರೀತಿ, ಕೆಲವೊಂದು ಕಾಲೇಜುಗಳಲ್ಲಿ “ವಿಕಿಪೀಡಿಯ ಸ್ಟೂಡೆಂಟ್‌ ಅಸೋಸಿಯೇಶನ್‌’ ಕೂಡ ನಿರ್ಮಿ ಸಲಾಗಿದೆ. ಈ ತಂಡದ ವಿದ್ಯಾರ್ಥಿಗಳು ತುಳು ಸಹಿತ ಇತರ ಭಾಷೆಗಳಲ್ಲಿ ಲೇಖನಗಳನ್ನು ವಿಕಿಪೀಡಿಯಕ್ಕೆ ಸಂಪಾದನೆ ಮಾಡುತ್ತಾರೆ. ಕರಾವಳಿಯಲ್ಲಿ ತುಳು ಭಾಷೆ ಇದೀಗ ಪಠ್ಯದ ವಿಷಯವಾಗಿದೆ. ವಿದ್ಯಾರ್ಥಿಗಳು ತುಳು ಭಾಷೆಯಲ್ಲಿಯೂ ಪರೀಕ್ಷೆ ಬರೆಯುತ್ತಿದ್ದಾರೆ.

ದೇಶದುದ್ದಗಲಕ್ಕೂ ಇರುವ ಮಂದಿಗೆ ಆನ್‌ಲೈನ್‌ನಲ್ಲಿ ತುಳು ಭಾಷೆಯ ಗುಣಮಟ್ಟದ ಲೇಖನಗಳು ಸಿಗಬೇಕು. ಇದಕ್ಕೆ ಹೆಚ್ಚಿನ ತುಳು ಲೇಖನಗಳು ವಿಕಿಪೀಡಿಯ ಸೇರಬೇಕೆಂಬ ಉದ್ದೇಶದಿಂದ ತಂಡವೊಂದು ಈಗಾಗಲೇ ವಿದ್ವಾಂಸರ ಮನೆಗಳಿಗೆ ತೆರಳಿ ಅವರ ಸಲಹೆ ಪಡೆಯುತ್ತಿದೆ.  ಮೊದಲನೇ ಹಂತದಲ್ಲಿ ವಿದ್ವಾಂಸರಾದ ಪ್ರೊ| ಅಮೃತ ಸೋಮೇಶ್ವರ, ಪ್ರೊ| ಬಿ.ಎ. ವಿವೇಕ್‌ ರೈ, ಪ್ರೊ| ಎ.ವಿ. ನಾವಡ ಮೊದಲಾದವರ ಮನೆಗೆ ತೆರಳಿ ವಿಕಿಪೀಡಿಯಾ ಯೋಜನೆಗಳನ್ನು ವಿವರಿಸಿ, ಅವರ ಬಳಿ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ.

2007ರಲ್ಲಿ ಆರಂಭ
ತುಳು ವಿಕಿಪೀಡಿಯಾದಲ್ಲಿ ಸುಮಾರು 1,382ಕ್ಕೂ ಹೆಚ್ಚಿನ ಲೇಖನಗಳಿವೆ. 2007ರಲ್ಲಿ ಅಂತರ್ಜಾಲದಲ್ಲಿ ತುಳು ವಿಕಿಪೀಡಿಯ ಪ್ರಾರಂಭವಾಯಿತು. 2014ರ ಮಾರ್ಚ್‌ನಲ್ಲಿ ಇದರಲ್ಲಿ 135 ಲೇಖನಗಳಿದ್ದವು. ಡಿಸೆಂಬರ್‌ ವೇಳೆಗೆ ಈ ಸಂಖ್ಯೆ 750ಕ್ಕೆ ಏರಿಕೆಯಾಯಿತು. 2015 ಫೆ. 2ರಂದು ತುಳುವಿನ 789 ಲೇಖನ ಲಭ್ಯವಿದ್ದವು. 2014ರ ಡಿಸೆಂಬರ್‌ನಲ್ಲಿ ಅಡ್ಯಾರಿನಲ್ಲಿ ನಡೆದ ವಿಶ್ವ ತುಳುವೆರೆ ಪರ್ಬದ ಬಳಿಕ ತುಳು ವಿಕಿಪೀಡಿಯ ಆಸಕ್ತರ ಸಂಖ್ಯೆ ಹೆಚ್ಚಿತು. ಮಂಗಳೂರು, ಉಡುಪಿಯಲ್ಲಿ ಹಲವು ಕಾರ್ಯಾಗಾರ, ಸಂಪಾದನೋತ್ಸವಗಳು ನಡೆದ ಬಳಿಕ ಲೇಖನಗಳ ಸಂಖ್ಯೆ ಹೆಚ್ಚಳದಿಂದ 2016ರ ಆಗಸ್ಟ್‌ 5ರಿಂದ ಸ್ವತಂತ್ರ ವಿಶ್ವಕೋಶವಾಗಿ ರೂಪುಗೊಂಡಿತು. ಪ್ರಸ್ತುತ 1,350ಕ್ಕೂ ಹೆಚ್ಚು ಪರಿಪೂರ್ಣ ಲೇಖನಗಳಿವೆ.

ತುಳು ಭಾಷೆಯ ಪದದ ಅರ್ಥ, ಸಮಾನಾರ್ಥಕ ಪದ, ತುಳು ಭಾಷೆಗೆ ಇತರ ಭಾಷೆಯಲ್ಲಿ ಅರ್ಥ ತಿಳಿಸುವಂತಹ ತುಳು ಭಾಷೆಯ ವಿಕ್ಷನರಿ ಕೆಲಸಗಳು ಕೆಲವು ವರ್ಷಗಳಿಂದ ಪ್ರಾರಂಭವಾಗಿದೆ. ಈಗಾಗಲೇ ತುಳು ವಿಕ್ಷನರಿಯಲ್ಲಿ 700ಕ್ಕೂ ಮಿಕ್ಕಿ ಪದಗಳನ್ನು ಅಪ್‌ಲೋಡ್‌ ಮಾಡಲಾಗಿದೆ.

Advertisement

ಮತ್ತಷ್ಟು ಮಂದಿ ತೊಡಗಬೇಕು
ತುಳು ವಿಕಿಪೀಡಿಯಾ ನಾಲ್ಕು ವರ್ಷ ಪೂರೈಸಿ, 5ನೇ ವರ್ಷಕ್ಕೆ ಕಾಲಿಟ್ಟಿದೆ. ಈಗಾಗಲೇ ಸುಮಾರು 1,382ಕ್ಕೂ ಮಿಕ್ಕಿ ಲೇಖನ, 6 ಸಾವಿರಕ್ಕೂ ಮಿಕ್ಕಿ ಪುಟ, 700ಕ್ಕೂ ಹೆಚ್ಚು ವಿಕ್ಷನರಿಗಳಿವೆ. ತುಳು ವಿಕಿಪೀಡಿಯಾಕ್ಕೆ ಸುಮಾರು 30ಕ್ಕೂ ಮಿಕ್ಕಿ ಮಂದಿ ಸಕ್ರಿಯ ಬರಹಗಾರರಿದ್ದು, ಮತ್ತಷ್ಟು ಮಂದಿ ವಿಕಿಪೀಡಿಯ ಬರವಣಿಗೆಯಲ್ಲಿ ಆಸಕ್ತಿ ವಹಿಸಬೇಕು.
 - ಡಾ| ವಿಶ್ವನಾಥ ಬದಿಕಾನ, ಕರಾವಳಿ ವಿಕಿಮೀಡಿಯನ್ಸ್‌ ಯೂಸರ್‌ ಗ್ರೂಪ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next