ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಬಿರುಸಾಗಿ ಸುರಿಯುತ್ತಿದ್ದ ಮಳೆ ರವಿವಾರದಿಂದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
ಆದರೆ ಜಿಲ್ಲೆಯ ದುರ್ಗದಹಳ್ಳಿ ಗುಡ್ಡ ಎಂಬ ಪ್ರದೇಶದಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.
ಮೂಡಿಗೆರೆ ತಾಲೂಕಿನ ಎರಡು ಮೂರು ಗ್ರಾಮದಲ್ಲಿ ಜನರು ಸಿಲುಕಿದ್ದು, ಪರದಾಟ ನಡೆಸುತ್ತಿದ್ದಾರೆ. ಕಳೆದ ನಾಲ್ಕು ದಿನದಿಂದ ಇಲ್ಲಿನ ಗ್ರಾಮಸ್ಥರು ಹೊರಗಿನ ಸಂಪರ್ಕ ಕಳೆದುಕೊಂಡಿದ್ದಾರೆ.
ಕಳೆದ ಮೂರು ದಿನದಿಂದ ರಕ್ಷಣಾ ಕಾರ್ಯಾಚರಣೆ ಮಾಡಿದ್ದರೂ ಈ ಸ್ಥಳಕ್ಕೆ ಹೋಗುವುದು ಸಾಧ್ಯವಾಗಿರಲಿಲ್ಲ. ಇಂದು ಜನರನ್ನ ಸುರಕ್ಷಿತ ಸ್ಥಳಕ್ಕೆ ಕರೆ ತರಲು ಜಿಲ್ಲಾಡಳಿತ ಪ್ರಯತ್ನ ನಡೆಸುತ್ತಿದ್ದು, ದುರ್ಗದಹಳ್ಳಿಗೆ ಯೋಧರ ತಂಡ ತೆರಳುತ್ತಿದೆ.
ರಸ್ತೆಯೆಲ್ಲಾ ಕುಸಿತವಾಗಿರುವುದರಿಂದ ಸ್ಥಳಕ್ಕೆ ಹೋಗುವುದೇ ದುಸ್ತರವಾಗಿದೆ. ರಸ್ತೆಯನ್ನು ತೆರಳುಗೊಳಿಸಿಕೊಂಡು ಯೋಧರು ಸ್ಥಳಕ್ಕೆ ಹೋಗಲು ಹರಸಾಹಸ ಪಡುತ್ತಿದ್ದಾರೆ.