ಮೆಕ್ಸಿಕೋ ಸಿಟಿ: ಕೋವಿಡ್ ಶಂಕಿತರ ಪರೀಕ್ಷೆ ವೇಳೆ ಶೇ.50ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡುಬಂದ ಸುದ್ದಿ ಮೆಕ್ಸಿಕೋದಿಂದ ವರದಿಯಾಗಿದ್ದು, ಇದು ಜಗತ್ತಿನಲ್ಲೇ ಅತಿ ಹೆಚ್ಚು ಎಂದು ಹೇಳಲಾಗಿದೆ.
ಲಾಕ್‌ಡೌನ್ ಸಡಿಲಿಕೆ ವೇಳೆ ಜನ ಸಮುದಾಯದ ಪರೀಕ್ಷೆ ನಡೆಸಿ, 100ಕ್ಕೆ ಎಷ್ಟು ಪಾಸಿಟಿವ್ ಪ್ರಕರಣಗಳಿವೆ ಎಂದು ಲೆಕ್ಕಾಚಾರ ಹಾಕಲಾಗುತ್ತದೆ. ಅದರಂತೆ ಶೇ.10ಕ್ಕಿಂತ ಕಡಿಮೆಯಿದ್ದರೆ ಸುರಕ್ಷಿತ, ಶೇ.10ರಷ್ಟಾದರೆ ಅಪಾಯ ಮತ್ತು ಶೇ.20ರಷ್ಟಿದ್ದರೆ ತೀವ್ರ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಮೆಕ್ಸಿಕೋ ದೇಶದಲ್ಲಿ ಈ ಪ್ರಮಾಣ ಶೇ.50ರಷ್ಟು ಇದ್ದು ಪರಿಸ್ಥಿತಿ ತೀವ್ರ ಗಂಭೀರವಾಗಿರುವುದನ್ನು ತೋರಿಸಿದೆ.
ಈ ಮೊದಲು ಮೆಕ್ಸಿಕೋದಲ್ಲಿ ಕೋವಿಡ್ ಪರೀಕ್ಷೆ ಮಾಡಬೇಕು ಎಂದು ಬಂದಿದ್ದ ಶಂಕಿತರ ಪರೀಕ್ಷೆ ಮಾತ್ರ ನಡೆಯುತ್ತಿತ್ತು. ಎಲ್ಲರ ಪರೀಕ್ಷೆ ನಡೆಸುವುದು ವೃಥಾ ಖರ್ಚು ಮತ್ತು ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಆರೋಗ್ಯ ಇಲಾಖೆ ಉಪಕಾರ್ಯದರ್ಶಿ ಹೇಳಿದ್ದರು.
ಲ್ಯಾಟಿನ್ ಅಮೆರಿಕದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಕೋವಿಡ್ ಸೋಂಕು ಶೇಕಡಾ ಪ್ರಮಾಣ ಕಂಡುಬರುತ್ತಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನು ನೀಡಿತ್ತು. ಆರ್ಜೆಂಟೀನಾ ಮತ್ತು ಚಿಲಿಯಲ್ಲಿ 10ರಲ್ಲಿ 3 ಮಂದಿಗೆ ಕೋವಿಡ್ ಕಂಡುಬರುತ್ತಿದೆ. ಮೆಕ್ಸಿಕೋ ನೆರೆಯ ದೇಶಗಳಲ್ಲೆಲ್ಲ ಕೋವಿಡ್ ಸೋಂಕು ಏರುತ್ತಿದೆ. ಅಮೆರಿಕದ ಸಾಂಕ್ರಾಮಿಕ ಕಾಯಿಲೆ ತಡೆ ಇಲಾಖೆ ಪ್ರಕಾರ ಅಲ್ಲೀಗ ಸೋಂಕು ಪೀಡಿತರ ಪ್ರಮಾಣ ಶೇ.8ರಷ್ಟಿದೆ. ಆದರೆ ಇಡೀ ಸಮುದಾಯವನ್ನು ಪರಿಶೀಲಿಸಿದರೆ ಸೋಂಕಿನ ಪ್ರಮಾಣ 10 ಪಟ್ಟು ಹೆಚ್ಚಿರಬಹುದು ಎಂದು ಹೇಳಲಾಗಿದೆ.
ಸರಕಾರದ ದಾಖಲೆಗಳ ಪ್ರಕಾರ ಮೆಕ್ಸಿಕೋದಲ್ಲಿ 2.26 ಲಕ್ಷ ಪ್ರಕರಣಗಳು ಕಂಡುಬಂದಿದ್ದು, 27 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದರೂ ನಾವು ಪ್ರತಿಯೊಂದು ಪ್ರಕರಣಗಳನ್ನು ಲೆಕ್ಕಹಾಕುತ್ತ ಕೂರುವುದಿಲ್ಲ ಎಂದು ಮೆಕ್ಸಿಕೋ ಸರಕಾರ ಹೇಳಿದೆ.