Advertisement

ಉಡುಪಿ ಜಿಲ್ಲೆಯಲ್ಲಿ 30 ಸಾವಿರಕ್ಕೂ ಅಧಿಕ ಕರೆಗಳಿಗೆ ಸ್ಪಂದನೆ

10:54 PM May 17, 2020 | Sriram |

ಉಡುಪಿ: ಕೋವಿಡ್-19 ಸಹಾಯವಾಣಿ 1077 ರಾಷ್ಟ್ರದಾದ್ಯಂತ ದಿನದ 24 ಗಂಟೆಗಳ ಕಾಲವೂ ನಿರಂತರ ಸೇವೆ ನೀಡುತ್ತಿದ್ದು ಅವಿಭಜಿತ ದ.ಕ. ಜಿಲ್ಲೆಯಲ್ಲಿರುವ ಸಹಾಯವಾಣಿ ಕೇಂದ್ರ (ಕಂಟ್ರೋಲ್‌ ರೂಂ ) ಇದುವರೆಗೆ 62 ಸಾವಿರಕ್ಕೂ ಅಧಿಕ ಕರೆಗಳಿಗೆ ಸ್ಪಂದನೆ ನೀಡಿದೆ.

Advertisement

ಲಾಕ್‌ಡೌನ್‌ ಆರಂಭಗೊಂಡ ದಿನಗಳಲ್ಲಿ ಅಗತ್ಯ ವಸ್ತುಗಳು, ತುರ್ತು ವೈದ್ಯಕೀಯ ಕಾರಣಕ್ಕಾಗಿ ಪಾಸ್‌ ಮೊದಲಾದ ನೆರವಿಗಾಗಿ ಜಿಲ್ಲೆಯ ಜನರಿಂದ ಕರೆಗಳು ಬರುತ್ತಿದ್ದವು. ಇತರ ಜಿಲ್ಲೆ, ರಾಜ್ಯಗಳ ವಲಸೆ ಕಾರ್ಮಿಕರ ಸಂಚಾರಕ್ಕೆ ಸರಕಾರ ಅವಕಾಶ ಮಾಡಿಕೊಟ್ಟ ಅನಂತರ ಕಾರ್ಮಿಕರಿಂದ ಪ್ರತಿನಿತ್ಯ 1,000ದಿಂದ 1,500ಕ್ಕೂ ಅಧಿಕ ಕರೆಗಳು ಬರಲಾರಂಭಿಸಿದವು. ಪ್ರಸ್ತುತ ದಿನಕ್ಕೆ 500ಕ್ಕೂ ಅಧಿಕ ಕರೆಗಳು ಬರುತ್ತಿವೆ.

ಸೇವೆಗೆ ಹಲವು ಸಿಬಂದಿ
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೂರು ಪಾಳಿಯಲ್ಲಿ ಸಿಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಬ್ಬರು ನೋಡಲ್‌ ಅಧಿಕಾರಿಗಳು, ತಹಶೀಲ್ದಾರ್‌ ಉಸ್ತುವಾರಿಯಲ್ಲಿ ಒಟ್ಟು 10 ಮಂದಿ ಸಿಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಊಟ, ಪಾಸ್‌ಗೆ ಬೇಡಿಕೆ
ಇ-ಪಾಸ್‌ ಇಲ್ಲದೆ ಬೇರೆ ರಾಜ್ಯಗಳಿಂದ ಬಂದು ಜಿಲ್ಲೆಯ ಗಡಿಯಲ್ಲಿ ಸಿಲುಕಿಕೊಂಡಿದ್ದ ಅನೇಕ ಮಂದಿ ಸಹಾಯವಾಣಿಗೆ ಕರೆ ಮಾಡಿಸಹಾಯ ಯಾಚಿಸಿದ್ದರು. ಅವರಿಗೆ ತುರ್ತಾಗಿ ಇ-ಪಾಸ್‌ ಒದಗಿಸಿಕೊಡಲಾಗಿದೆ. ಗಡಿಯಲ್ಲಿ ಬಾಕಿಯಾಗಿ ಊಟವೂ ಇಲ್ಲದೆ ಸಂಕಷ್ಟದಲ್ಲಿದ್ದ ಹತ್ತಾರು ಮಂದಿಗೆ ಇಲಾಖೆ, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ತುರ್ತಾಗಿ ಊಟದ ವ್ಯವಸ್ಥೆ ಕೂಡ ಮಾಡಿಕೊಡಲಾಗಿದೆ. ರೈಲಿನಲ್ಲಿ ಉತ್ತರ ಪ್ರದೇಶ, ಝಾರ್ಖಂಡ್‌ ಮೊದಲಾದ ಹೊರ ರಾಜ್ಯಗಳಿಗೆ . ಜಿಲ್ಲೆಯಿಂದ ಇ -ಪಾಸ್‌ ಪಡೆಯದೆ ತೆರಳಿದ್ದವರ ಮಾಹಿತಿಯನ್ನು ಕೂಡ ಸಹಾಯವಾಣಿ ಸಂಗ್ರಹಿಸಿದೆ. ಕಾರ್ಮಿಕರು ರೈಲು ಹತ್ತಿದ ಅರ್ಧ ಗಂಟೆಯಲ್ಲಿಯೇ ಅವರ ಕುರಿತಾದ ಸಮಗ್ರ ಮಾಹಿತಿಯನ್ನು ಅವರ ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಲಾಗಿದೆ.

ಕರೆ ಮಾಡಿದವರ ಸಂಖ್ಯೆಯನ್ನು ಸಂಗ್ರಹಿಸಿಟ್ಟು ಅನಂತರ ಅವರು ಕೇಳಿದ ರೈಲುಗಳ ಸಮಯ, ಮತ್ತಿತರ ಹಲವು ಮಾಹಿತಿಗಳನ್ನು ಅನಂತರ ಕರೆ ಮಾಡಿ ತಿಳಿಸಲಾಗುತ್ತದೆ. ಕಂಟ್ರೋಲ್‌ ರೂಮ್‌ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುತ್ತಿರುವುದರಿಂದ
ಇದು ತುಂಬಾ ಉಪಯುಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸೇವಾಸಿಂಧು ಗೊಂದಲ ಅಧಿಕ
ಪ್ರಸ್ತುತ ಮಹಾರಾಷ್ಟ್ರ ಹಾಗೂ ಇತರ ಕೆಲವು ರಾಜ್ಯಗಳಲ್ಲಿರುವ ಜಿಲ್ಲೆಯ ನಿವಾಸಿಗಳು ಇ-ಪಾಸ್‌ಗಾಗಿ ಹೆಚ್ಚೆಚ್ಚು ಕರೆಗಳನ್ನು ಮಾಡುತ್ತಿದ್ದಾರೆ. ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿ ಇನ್ನೂ ಇ-ಪಾಸ್‌ ಸಿಗದಿರುವ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಕೆಲವರು ಸೇವಾ ಸಿಂಧುವಿನಲ್ಲಿ ಎಲ್ಲ ಮಾಹಿತಿಗಳನ್ನು ನೀಡದೆ ಇರುವುದರಿಂದ ಅವರಿಗೆ ಇ-ಪಾಸ್‌ ದೊರೆಯು ವುದಿಲ್ಲ. ಇನ್ನು ಕೆಲವರು ಗುರುತು ಕಾರ್ಡ್‌ ವಿವರ ನೀಡಿರುವುದಿಲ್ಲ. ಇನ್ನು ಕೆಲವರು ಸೇವಾಸಿಂಧುವಿನಲ್ಲಿ ನೋಂದಣಿ ಮಾಡಿದ ಕೂಡಲೇ ಜಿಲ್ಲೆಯತ್ತ ಪ್ರಯಾಣ ಬೆಳೆಸಿ ಅರ್ಧದಲ್ಲಿ ತೊಂದರೆಗೀಡಾಗಿ ಕರೆ ಮಾಡುತ್ತಾರೆ. ಅವರಿಗೆ ಸಮರ್ಪಕವಾದ ಸ್ಪಂದನೆ ನೀಡುತ್ತೇವೆ ಎನ್ನುತ್ತಾರೆ ಸಹಾಯವಾಣಿಯ ಸಿಬಂದಿ.

ಎಲ್ಲ ಜಿಲ್ಲೆಗಳಲ್ಲಿಯೂ ಸಹಾಯವಾಣಿ
1077 ಕೋವಿಡ್-19 ಸಹಾಯವಾಣಿ ನಮ್ಮ ರಾಜ್ಯದಲ್ಲಿಯೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ದಿನದ 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಆಯಾ ಜಿಲ್ಲೆಯವರು ನೇರವಾಗಿ 1077ಕ್ಕೆ ಕರೆ ಮಾಡಿದರೆ ಅದೇ ಜಿಲ್ಲೆಗೆ ಕರೆ ಸಂಪರ್ಕವಾಗುತ್ತದೆ. ಬೇರೆ ರಾಜ್ಯ ಅಥವಾ ಬೇರೆ ಜಿಲ್ಲೆಯವರು ಇನ್ನೊಂದು ರಾಜ್ಯ, ಜಿಲ್ಲೆಗೆ ಕರೆ ಮಾಡುವುದಾದರೆ ಅಲ್ಲಿನ ಎಸ್‌ಟಿಡಿ ಕೋಡ್‌ ಹಾಕಿ ಅನಂತರ ಸಹಾಯವಾಣಿ ಸಂಖ್ಯೆ ನಮೂದಿಸಿ ಕರೆ ಮಾಡಬೇಕು. ಉದಾಹರಣೆಗೆ ದ.ಕ ಜಿಲ್ಲೆಯವರು ಬೇರೆ ಜಿಲ್ಲೆ ಅಥವಾ ರಾಜ್ಯದಲ್ಲಿದ್ದರೆ 0824-1077, ಉಡುಪಿ ಜಿಲ್ಲೆಯವರು ಬೇರೆ ಜಿಲ್ಲೆ, ರಾಜ್ಯಗಳಲ್ಲಿದ್ದರೆ 0820-1077 ಹೀಗೆ ಕರೆ ಮಾಡಬೇಕು.

ಬಹುತೇಕ ಸಮಸ್ಯೆಗಳಿಗೆ ಪರಿಹಾರ
ಕೋವಿಡ್-19 ಸಂಬಂಧಿಸಿದ ಬಹುತೇಕ ಎಲ್ಲ ಸಂಕಷ್ಟಗಳಿಗೂ ಸಹಾಯವಾಣಿ ನೆರವಾಗುತ್ತಿದೆ. ಪ್ರಸ್ತುತ ಸಹಾಯವಾಣಿಗೆ ದಿನಕ್ಕೆ 500ರಷ್ಟು ಕರೆಗಳು ಬರುತ್ತಿವೆ. ಇದರಲ್ಲಿ ಸೇವಾ ಸಿಂಧುಪಾಸ್‌ಗೆ ಸಂಬಂಧಿಸಿದ ಕರೆಗಳು ಅಧಿಕ ಇವೆ. ಅವರಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡಲಾಗುತ್ತಿದೆ. ಕೆಲವು ಮಂದಿ ಕಾರ್ಮಿಕರಿಗೆ ನಮ್ಮ ರಾಜ್ಯದ ಪೋರ್ಟಲ್‌ ಅರ್ಜಿಯಲ್ಲಿ ಹಿಂದಿ ಭಾಷೆ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ಇಂತಹ ಕಾರ್ಮಿಕರಿಗೂ ಸಹಾಯವಾಣಿ ನೆರವಾಗುತ್ತಿದೆ.
-ದಿನೇಶ್‌ ಕುಮಾರ್‌, ರವಿ,
ಅಧಿಕಾರಿಗಳು, ಕೋವಿಡ್-19 ಸಹಾಯವಾಣಿ ದ.ಕ., ಉಡುಪಿ ಜಿಲ್ಲೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next