ನವದೆಹಲಿ: ದೇಶದ ಶೇ.21ರಷ್ಟು ಮಂದಿಗೆ ಕೊರೊನಾ ಸೋಂಕು ಬಂದು ಗುಣವಾಗಿರುವ ಸಾಧ್ಯತೆ ಇದೆ. ಹತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯೋಮಿತಿಯವರ ಮೇಲೆ ನಡೆಸಲಾಗಿರುವ ಅಧ್ಯಯದಲ್ಲಿ ಈ ಅಂಶ ಕಂಡುಕೊಳ್ಳಲಾಗಿದೆ ಎಂದು ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ಹೇಳಿದ್ದಾರೆ. ಡಿ.18- ಜ.8ರ ನಡುವೆ ದೇಶದ 70 ಜಿಲ್ಲೆಗಳ 700 ಗ್ರಾಮಗಳಲ್ಲಿ ನಡೆಸಲಾಗಿರುವ ಸೀರೋ ಸರ್ವೆಯಲ್ಲಿ ಈ ಅಂಶ ದೃಢಪಟ್ಟಿದೆ.
25,598 ಮಂದಿಯ ಪೈಕಿ 18 ವರ್ಷಕ್ಕಿಂತ ಮೇಲ್ಪಟ್ಟ ಶೇ.21.4 ಮಂದಿ ವೈರಸ್‌ಗೆ ತುತ್ತಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. 10-17 ವರ್ಷ ವಯೋಮಿತಿ ಒಳಗಿನ ಶೇ.25.3 ಮಂದಿಗೆ ಕೂಡ ಸೋಂಕು ಬಂದು ಹೋಗಿರಬಹುದೆಂದು ಅಭಿಪ್ರಾಯಪಡಲಾಗಿದೆ. ನಗರ ಪ್ರದೇಶಗಳ ಕೊಳೆಗೇರಿಗಳ ಪೈಕಿ ಶೇ.31.7 ಮಂದಿ ಕೂಡ ಇದೇ ಅನುಭವ ವ್ಯಕ್ತಪಡಿಸಿದ್ದಾರೆ ಎಂದು ಬಲರಾಮ್ ಭಾರ್ಗವ.
ಇದನ್ನೂ ಓದಿ:ಪರಿಷತ್ ಸಭಾಪತಿ ಸ್ಥಾನಕ್ಕೆ ಕೆ. ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ
ಸುಧಾರಿಸಿದೆ: ದೇಶದಲ್ಲಿ ಸೋಂಕಿನ ಪರಿಸ್ಥಿತಿ ಸುಧಾರಿಸಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ತಿಳಿಸಿದ್ದಾರೆ. ಒಟ್ಟಾರೆ ಪ್ರಕರಣದ ಕ್ಯುಮ್ಯುಲೇಟಿವ್ (ಸಂಚಿತ) ಪಾಸಿಟಿವಿಟಿ ಪ್ರಕರಣ ಶೇ.5.42 ಆಗಿದೆ. 47 ಜಿಲ್ಲೆಗಳಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. 251 ಜಿಲ್ಲೆಗಳಲ್ಲಿ 3 ವಾರಗಳಲ್ಲಿ ಹೊಸ ಸಾವು ವರದಿಯಾಗಿಲ್ಲ ಎಂದಿದ್ದಾರೆ. ಇದುವರೆಗೆ 49,93,427 ಮಂದಿಗೆ ಲಸಿಕೆ ಹಾಕಲಾಗಿದೆ ಎಂದರು.
ಕೇರಳ ದ್ವಿತೀಯ: ದೇಶದ ಸೋಂಕು ಪೀಡಿತ ರಾಜ್ಯಗಳ ಪಟ್ಟಿಯಲ್ಲಿ ಕೇರಳ ದ್ವಿತೀಯ ಸ್ಥಾನಕ್ಕೆ ತಲುಪಿದೆ. ಇದುವರೆಗೆ ಆ ಸ್ಥಾನದಲ್ಲಿದ್ದ ಕರ್ನಾಟಕ ತೃತೀಯ ಸ್ಥಾನಕ್ಕೆ ಇಳಿದಿದೆ. ಕೇರಳದಲ್ಲಿ 9.44 ಲಕ್ಷ ಕೇಸುಗಳಿದ್ದರೆ, ಕರ್ನಾಟಕದಲ್ಲಿ 9.40 ಲಕ್ಷ ಕೇಸುಗಳಿವೆ.