ನವದೆಹಲಿ:ದೇಶದಲ್ಲಿ ಈವರೆಗೆ ಒಟ್ಟು 2,24,301 ಮಂದಿ ಕೋವಿಡ್ ಲಸಿಕೆಯನ್ನು ಪಡೆದಿದ್ದು, ಇದರಲ್ಲಿ ಕೇವಲ 447 ಮಂದಿಗೆ ಅಡ್ಡಪರಿಣಾಮ ಬೀರಿರುವುದು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಜನವರಿ 16ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೋವ್ಯಾಕ್ಸಿನ್ ಲಸಿಕೆ ವಿತರಣೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದ್ದರು. ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ ಸುದ್ದಿಗಾರರ ಜತೆ ಮಾತನಾಡುತ್ತ, ಕೋವಿಡ್ ಲಸಿಕೆ ಪಡೆದ 447 ಮಂದಿಯಲ್ಲಿ ಅಡ್ಡಪರಿಣಾಮ ಕಂಡು ಬಂದಿದ್ದು, ಇದರಲ್ಲಿ ಕೇವಲ ಮೂರು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ.
ಭಾನುವಾರ(ಜನವರಿ 17) ಕೇವಲ ಆರು ರಾಜ್ಯಗಳಲ್ಲಿ ಲಸಿಕೆ ವಿತರಣೆ ಅಭಿಯಾನ ನಡೆದಿದ್ದು, 553 ಕೇಂದ್ರಗಳಲ್ಲಿ ಒಟ್ಟು 17,072 ಮಂದಿ ಫಲಾನುಭವಿಗಳು ಲಸಿಕೆ ಪಡೆದಿರುವುದಾಗಿ ಹೇಳಿದರು. ಆಂಧ್ರಪ್ರದೇಶದ 308 ಕೇಂದ್ರ, ಅರುಣಾಚಲ ಪ್ರದೇಶದ 14 ಕೇಂದ್ರ, ಕರ್ನಾಟಕದ 64 ಕೇಂದ್ರ, ಕೇರಳದಲ್ಲಿ ಒಂದು, ಮಣಿಪುರದಲ್ಲಿ ಒಂದು ಹಾಗೂ ತಮಿಳುನಾಡಿನ 165 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಅಭಿಯಾನ ನಡೆದಿತ್ತು.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಸಾವಿರ ಮುಖ್ಯಮಂತ್ರಿ ಬಂದರೂ ಬೆಳಗಾವಿ ಕರ್ನಾಟದಲ್ಲೇ ಇರುತ್ತದೆ: ಸವದಿ
ಜನವರಿ 17ರಿಂದ ಈವರೆಗೆ 2,24,301 ಮಂದಿ ಫಲಾನುಭವಿಗಳು ಕೋವಿಡ್ ಲಸಿಕೆ ಪಡೆದಿದ್ದು, ಮೊದಲ ದಿನದ(ಜನವರಿ 16) ಅಭಿಯಾನದಲ್ಲಿ 2,07,229 ಮಂದಿ ಲಸಿಕೆ ಪಡೆದುಕೊಂಡಿರುವುದಾಗಿ ವಿವರಿಸಿದ್ದಾರೆ.
ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ಗಿಂತಲೂ ಭಾರತದಲ್ಲಿ ಕೇವಲ ಒಂದೇ ದಿನದಲ್ಲಿ ಅಭಿಯಾನದಲ್ಲಿ ಅತೀ ಪ್ರಮಾಣದಲ್ಲಿ ಜನರು ಲಸಿಕೆ ಪಡೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ದೇಶದ ಏಕತೆಗೆ ಮಾರಕ: ಉದ್ಧವ್ ಠಾಕ್ರೆ ಮಾತಿಗೆ ಯಡಿಯೂರಪ್ಪ ಖಂಡನೆ