ಉತ್ತರಾಖಂಡ: ನಮ್ಮದು ವೈವಿಧ್ಯತೆಯಿಂದ ಕೂಡಿದ ದೇಶ. ಇಲ್ಲಿ ಒಂದೊಂದು ಕಡೆ ಒಂದೊಂದು ರೀತಿಯ ಆಚರಣೆಗಳಿರುತ್ತವೆ. ಉತ್ತರಾಖಂಡ ರಾಜ್ಯದ ಚಂಪಾವತ್ ಜಿಲ್ಲೆಯಲ್ಲಿರುವ ದೈಧುರ ಎಂಬಲ್ಲಿರುವ ದೇವಿ ಮಂದಿರದಲ್ಲಿ ಪ್ರತೀ ವರ್ಷ ಕಲ್ಲೆಸೆಯುವ ಉತ್ಸವ ನಡೆಯುತ್ತದೆ. ಇದು ಅಲ್ಲಿನ ದೇವಿಯನ್ನು ಸಂತುಷ್ಟಿಗೊಳಿಸುವ ಆಚರಣೆಯಾಗಿ ಪ್ರತೀತಿಯಲ್ಲಿದೆ.
ಇಲ್ಲಿರುವ ಬಾರಾಹಿ ದೇವಿಯನ್ನು ಸಂತೃಪ್ತಿಗೊಳಿಸುವ ಸಲುವಾಗಿ ಪ್ರತೀ ವರ್ಷ ‘ಬಾಗ್ವಾಲ್’ ಕಲ್ಲೆಸೆಯುವ ಉತ್ಸವ ರಕ್ಷಾ ಬಂಧನದ ದಿನ ನಡೆಯುತ್ತದೆ.
ಆದರೆ ಪ್ರತೀ ವರ್ಷ ಈ ಉತ್ಷವದ ಸಂದರ್ಭದಲ್ಲಿ ಹಲವಾರು ಭಕ್ತರು ಗಾಯಗೊಳ್ಳುತ್ತಲೇ ಇರುತ್ತಾರೆ. ಈ ಸಲವೂ ಸಹ ಸುಮಾರು 120 ಜನ ಈ ಉತ್ಸವಾಚರಣೆಯ ವೇಳೆ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
‘ಬಾಗ್ವಾಲ್’ ಎಂಬ ಹೆಸರಿನ ಈ ಉತ್ಸವದ ಸಂದರ್ಭದಲ್ಲಿ ಎರಡು ತಂಡಗಳು ಪರಸ್ಪರ ಕಲ್ಲುಗಳನ್ನು ಎಸೆದುಕೊಳ್ಳುತ್ತವೆ. ಸಾವಿರಾರು ಜನ ಭಕ್ತರು ಈ ಉತ್ಸವದಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷವಾಗಿದೆ.
ಇಲ್ಲಿನ ಐತಿಹ್ಯದ ಪ್ರಕಾರ ಚಾಮ್ಯಾಲ್, ಗಹರ್ವಾಲ್, ಓಲ್ಗಿಯಾ ಮತ್ತು ಲಾಮ್ಗರಿಯಾ ಎಂಬ ಹೆಸರಿನ ನಾಲ್ಕು ಜನ ಜಮೀನ್ದಾರರು ಎರಡು ಗುಂಪುಗಳಾಗಿ ರೂಪುಗೊಂಡು ಪರಸ್ಪರ ಕಲ್ಲೆಸೆದುಕೊಳ್ಳುವುದಕ್ಕೆ ಪ್ರಾರಂಭಿಸಿದರಂತೆ, ಅದೇ ಪದ್ಧತಿಯು ಕಾಲಾನಂತರದಲ್ಲಿ ಸಂಪ್ರದಾಯವಾಗಿ ಮುಂದುವರಿದು ಬಂತು ಎನ್ನುತ್ತಾರೆ ಸ್ಥಳೀಯರು. ಪ್ರಧಾನ ಅರ್ಚಕರು ಸೂಚನೆ ಕೊಟ್ಟ ಬಳಿಕ ಈ ಕಲ್ಲೆಸೆಯುವಿಕೆ ನಿಲ್ಲುತ್ತದೆ.