Advertisement
ಸದ್ಯದ ಅಂದಾಜಿನಂತೆ ಉಡುಪಿ ಜಿಲ್ಲೆಯಲ್ಲಿ 2 ದಿನಗಳ ಮಳೆಯಿಂದ 100 ಕೋ.ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ. ಮಂಗಳ ವಾರ ಸಂಪೂರ್ಣ ಮಾಹಿತಿ ಲಭ್ಯ ವಾಗಬಹುದು. ನೆರೆ, ಪ್ರವಾಹ ಪೀಡಿತ ಪ್ರದೇಶ ಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದ್ದು, ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 32 ಮನೆಗಳಿಗೆ ಮತ್ತು ಸುಮಾರು 199.2 ಹೆಕ್ಟೇರ್ ಪ್ರದೇಶದಲ್ಲಿ ಕೃಷಿಗೆ ಹಾನಿಯಾಗಿದೆ.
ಬಂಗಾಲಕೊಲ್ಲಿಯಲ್ಲಿ ವಾಯು ಭಾರ ಕುಸಿತ ಮತ್ತು ಮೇಲ್ಮೆ„ಸುಳಿಗಾಳಿ ಇರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ ಜಿಲ್ಲೆಯ ಹಲವೆಡೆ ಸೋಮವಾರ ಸಂಜೆಯಿಂದ ಮತ್ತೆ ಮಳೆ ಆರಂಭವಾಗಿದ್ದು, ಆತಂಕ ಮೂಡಿಸಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೆ .22ಕ್ಕೆ ರೆಡ್, ಸೆ. 23ಕ್ಕೆ ಆರೆಂಜ್ ಮತ್ತು ಸೆ. 24ಕ್ಕೆ ಎಲ್ಲೊ ಅಲರ್ಟ್ ಘೋಷಿಸಲಾಗಿದೆ. ರವಿವಾರ ಬೆಳಗ್ಗೆ 8.30ರಿಂದ ಸೋಮವಾರ ಬೆಳಗ್ಗೆ 8.30ರ ಮಧ್ಯೆ 24 ತಾಸುಗಳ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ 27 ಸೆಂ.ಮೀ. ಮಳೆಯಾಗಿದ್ದು, ಇದು ಈ ಅವಧಿಯಲ್ಲಿ ದೇಶದ ಅತ್ಯಧಿಕ ಮಳೆಯಾಗಿದೆ.