ವಾಷಿಂಗ್ಟನ್: ಜಗತ್ತಿನಾದ್ಯಂತ ಕೋವಿಡ್-19 ಭೀತಿ ಹೆಚ್ಚಾಗುತ್ತಲೇ ಇದ್ದು ಹಲವು ದೇಶಗಳು ಈ ಮಾರಕ ವೈರಸ್ ಅನ್ನು ತಹಬದಿಗೆ ತರಲು ಪ್ರಯತ್ನಿಸುತ್ತಲೇ ಇವೆ. ದುರಂತದ ಸಂಗತಿಯೆಂದರೇ ಕಳೆದ 36 ಗಂಟೆಗಳಲ್ಲಿ ವಿಶ್ವದಾದ್ಯಂತ 1ಲಕ್ಷಕ್ಕಿಂತ ಹೆಚ್ಚು ಜನರು ಈ ಸೋಂಕಿಗೆ ಒಳಗಾಗಿದ್ದಾರೆ. ಇದೊಂದು ದಾಖಲೆಯಾಗಿದ್ದು, ಸಾವಿನ ಪ್ರಮಾಣ ಕೂಡ ಏರಿಕೆಯಾಗುತ್ತಲೇ ಇದೆ.
ವಿಶ್ವದಾದ್ಯಂತ 6,63,7403 ಜನರು ಈ ಸೋಂಕುವಿಗೆ ಈಗಾಗಲೇ ತುತ್ತಾಗಿದ್ದಾರೆ. ಮಾತ್ರವಲ್ಲದೆ 30,879 ಜನರು ಬಲಿಯಾಗಿದ್ದಾರೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.
ಇಟಲಿಯಲ್ಲಿ ಈ ವೈರಸ್ ಅಕ್ಷರಶಃ ಮರಣ ಮೃದಂಗವನ್ನೇ ಬಾರಿಸಿದ್ದು 10 ಸಾವಿರಕ್ಕಿಂತ ಹೆಚ್ಚು ಜನರು ಬಲಿಯಾಗಿದ್ದಾರೆ. 2019ರ ಡಿಸೆಂಬರ್ ನಲ್ಲಿ ಕಂಡುಬಂದ ಈ ವೈರಸ್ 61 ದಿನಗಳಲ್ಲಿ 1ಲಕ್ಷ ಜನರಿಗೆ ಹರಡಿತ್ತು. ನಂತರ ಕೇವಲ 11 ದಿನದಲ್ಲಿ 1 ಲಕ್ಷ ಜನ ಈ ಸೋಂಕುವಿಗೆ ತುತ್ತಾಗಿದ್ದರು. ಬರಬರುತ್ತಾ 3-4 ದಿನದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಜನರಿಗೆ ಹರಡಲು ಕಾರಣವಾಯಿತು.
ಇದೀಗ ಕೇವಲ 36 ಗಂಟೆಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಜನರು ಈ ಸೋಂಕುವಿಗೆ ತುತ್ತಾಗಿರುವುದು ಮಾರಣಾಂತಿಕವಾಗಿ ಪರಿಣಮಿಸಿದೆ.
ಅಮೆರಿಕಾದಲ್ಲೂ ಕೂಡ ಸೋಂಕಿತರ ಪ್ರಮಾಣ ದಿನೇ ದಿನೇ ದ್ವಿಗುಣಗೊಳ್ಳುತ್ತಿದ್ದು ಇಟಲಿಯನ್ನು ಮೀರಿಸಿದೆ. ಆದರೇ ಇಟಲಿಯಲ್ಲಿ ಸಾವಿನ ಪ್ರಮಾಣ ಉಳಿದ ದೇಶಗಳಿಗಿಂತಲೂ ಹೆಚ್ಚಿದೆ. ಸ್ಪೇನ್, ಜರ್ಮನಿ, ಇರಾನ್ , ಫ್ರಾನ್ಸ್ ನಲ್ಲೂ ಈ ಮಾರಕ ವೈರಾಣು ಮರಣ ಮೃದಂಗವನ್ನೇ ಬಾರಿಸಿದೆ.