Advertisement

ಅಂಡಾರು: ಆಯರೆಬೆಟ್ಟು ಮುಳುಗು ಸೇತುವೆ ಕುಸಿತ

06:00 AM Aug 17, 2018 | |

ಅಜೆಕಾರು: ವರಂಗ ಗ್ರಾ. ಪಂ. ವ್ಯಾಪ್ತಿಯ ಅಂಡಾರು ಗ್ರಾಮದ ಆಯರ ಬೆಟ್ಟು ಪರಿಸರದ ಮಳುಗು ಸೇತುವೆ ಭಾರೀ ಮಳೆಗೆ ಕುಸಿತಗೊಂಡಿದ್ದು ಸ್ಥಳೀಯರಿಗೆ ಸಂಪರ್ಕ ಕಡಿತದ ಭೀತಿ ಎದುರಾಗಿದೆ.

Advertisement

ಸುಮಾರು 2 ದಶಕಗಳ ಹಿಂದೆ ನಿರ್ಮಾಣ ವಾದ ಈ ಮುಳುಗು ಸೇತುವೆಯು ಸ್ಥಳೀಯರಿಗೆ ಮಳೆಗಾಲದಲ್ಲಿ ಸಂಚರಿಸಲು ಏಕೈಕ ರಸ್ತೆಯಾಗಿದೆ. ಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಗೆ ಪ್ರವಾಹ ಬಂದು ಮುಳುಗು ಸೇತುವೆ ಕುಸಿತಗೊಂಡಿದೆ. ಈ ಭಾಗದಲ್ಲಿ ಇನ್ನೂ ಒಂದೆರಡು ತಿಂಗಳು ಭಾರೀ ಮಳೆಯಾಗುವುದರಿಂದ ಮುಳುಗು ಸೇತುವೆ ಸಂಪೂರ್ಣ ಕೊಚ್ಚಿ ಹೋಗುವ ಆತಂಕ ಸ್ಥಳಿಯರದ್ದು. ಆಯರಬೆಟ್ಟು, ಪೈತಾಳ ದರ್ಖಾಸು, ಪರಿಶಿಷ್ಟ ಪಂಗಡ ಕಾಲನಿ, ಪಕ್ಕಿಬೈಲು ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಮುಳುಗು ಸೇತುವೆ ಕುಸಿತದಿಂದ ಸಮಸ್ಯೆ ಎದುರಾಗಿದೆ.

ಸುಮಾರು 80 ಮನೆಗಳು ಈ ಪರಿಸರ ದಲ್ಲಿದ್ದು ಮಲೆಕುಡಿಯ ಸಮುದಾಯದ ಜನತೆಯೇ ಬಹುತೇಕರಾಗಿದ್ದಾರೆ.ಅಂಡಾರು ಪೇಟೆಯಿಂದ ಪೈತಾಳ ಭಾಗವನ್ನು ಸಂಪರ್ಕಿಸುವ ಏಕೈಕ ರಸ್ತೆ ಇದಾಗಿದ್ದು ಸಂಪೂರ್ಣ ಕುಸಿತಗೊಂಡಲ್ಲಿ ಈ ಭಾಗದ ಜನತೆ ಸಂಪರ್ಕ ಕಳೆದು ಕೊಳ್ಳಲಿದ್ದಾರೆ.

ಸಂಪೂರ್ಣ ಕುಸಿತದ ಮೊದಲು ಶಾಶ್ವತವಾದ ಸೇತುವೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಹಾಗೂ ಇಲಾಖಾ ಅಧಿಕಾರಿಗಳು ಸ್ಪಂದಿಸಬೇಕಾಗಿದೆ ಎಂಬುದು ಸ್ಥಳೀಯರ ಮನವಿಯಾಗಿದೆ. ಈ ಬಗ್ಗೆ  ಹೊಸ ಸೇತುವೆ ನಿರ್ಮಾಣದ ಬಗ್ಗೆ ಈಗಾಗಲೇ ಗ್ರಾಮ ಪಂಚಾಯತ್‌, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳಿಗೆ  ಸ್ಥಳೀಯರು ಮನವಿ ಸಲ್ಲಿಸಿದ್ದಾರೆ.

ಹಲವು ವರ್ಷಗಳಿಂದ ಮನವಿ
ಮುಳುಗು ಸೇತುವೆಗೆ ಮುಕ್ತಿಗೊಳಿಸಿ ವಿಶಾಲ ಸೇತುವೆ ನಿರ್ಮಿಸುವಂತೆ ಕಳೆದ 5- 6 ವರ್ಷಗಳಿಂದ ಸ್ಥಳೀಯರು 
ಜನಪ್ರತಿನಿಧಿಗಳಿಗೆ, ಇಲಾಖಾ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದರೂ ಸೇತುವೆ ನಿಮಾಣಗೊಂಡಿಲ್ಲ. 2 ವರ್ಷಗಳ ಹಿಂದೆ ಮೋರಿ ಅಳವಡಿಸಿ ಮುಳುಗು ಸೇತುವೆಯ ಎತ್ತರ ಏರಿಸುವ ಯೋಜನೆ ರೂಪಿಸಲಾಗಿತ್ತು ಆದರೆ ಇದು ತಾತ್ಕಾಲಿಕ ವ್ಯವಸ್ಥೆಯಾಗಿರುದನ್ನು ಮನಗಂಡ ಸ್ಥಳೀಯರು ವಿಶಾಲ ಸೇತುವೆಗೆ ಬೇಡಿಕೆ ಇಟ್ಟಿದ್ದರು.

Advertisement

ಹಲವು ಅವಘಡ
ಮಳೆಗಾಲ ಪ್ರಾರಂಭಗೊಂಡ ಕೂಡಲೇ ಈ ಪ್ರದೇಶದಲ್ಲಿ ಪ್ರತಿ ನಿತ್ಯ ನೆರೆ ಬಂದು ಮುಳುಗು ಸೇತುವೆ ಮುಳುಗುವುದರಿಂದ ಅವಘಡ ನಿರಂತರವಾಗುತ್ತಿದೆ. ಕಳೆದ ಒಂದು ವಾರದ ಅವಧಿಯಲ್ಲಿ 2 ಅವಘಡಗಳು ನಡೆದಿವೆ.

ಸ್ಥಳೀಯ ವಿದ್ಯಾರ್ಥಿನಿಯೋರ್ವಳು ಸೇತುವೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ತಡೆಗೋಡೆ ಇಲ್ಲದೆ ನದಿಗೆ ಬಿದ್ದು ಕೊಚ್ಚಿಕೊಂಡು ಹೋಗುತ್ತಿದ್ದಾಗ ರಿûಾಚಾಲಕರೋರ್ವರು ಗಮನಿಸಿ ರಕ್ಷಿಸಿದ್ದರು. ಇನ್ನೊಂದು ಪ್ರಕರಣದಲ್ಲಿ ಸೇತುವೆಯ ಮೇಲೆ ರಾತ್ರಿ ವೇಳೆ ನೀರು ಹರಿಯುತ್ತಿರುವುದು ಗಮನಕ್ಕೆ ಬಾರದೆ ಬೈಕ್‌ ಸವಾರರು ಬೈಕ್‌ ಸಹಿತ ಕೊಚ್ಚಿಕೊಂಡು ಹೋಗಿದ್ದರು ಸಹ ಅಪಾಯದಿಂದ ಪಾರಾಗಿದ್ದರು.

ಶಾಶ್ವತ ಸೇತುವೆ ನಿರ್ಮಾಣಕ್ಕೆ 
ಅಂದಾಜುಪಟ್ಟಿ 

ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು ಅತ್ಯವಶ್ಯಕವಾಗಿರುವ ಆಯರಬೆಟ್ಟು ಮುಳುಗು ಸೇತುವೆಯನ್ನು ತೆರವುಗೊಳಿಸಿ ಶಾಶ್ವತ  ಸೇತುವೆ ನಿರ್ಮಾಣಕ್ಕೆ ಸುಮಾರು 40ಲಕ್ಷ ರೂ ವೆಚ್ಚ ತಗಲಬಹುದು. ಈ ಬಗ್ಗೆ  ಅಂದಾಜು ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ಸದಾನಂದ ನಾಯಕ್‌
ಸಹಾಯಕ ಇಂಜಿನಿಯರ್‌ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪ ವಿಭಾಗ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next