Advertisement

ಎಂಪಿಎಂ ಕಾರ್ಖಾನೆಯಿಂದಲೂ ಪಾವತಿಯಾಗದ ಬಾಕಿ ಹಣ 

06:20 AM Nov 24, 2018 | |

ಶಿವಮೊಗ್ಗ: ಖಾಸಗಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಬ್ಬು ಬೆಳೆಗಾರರು ಪ್ರತಿಭಟನೆ ಆರಂಭಿಸಿ ಈ ಸಮಸ್ಯೆ ಪರಿಹರಿಸಲು ಸರಕಾರ ಮಧ್ಯಪ್ರವೇಶಿಸಿದೆ. ರೈತರ ಕಬ್ಬು ಬಾಕಿ ಜತೆಗೆ ಹೆಚ್ಚುವರಿ 300 ರೂ.ಕೊಡಿಸಲು ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ, ಸರಕಾರಿ ಸ್ವಾಮ್ಯದ ಭದ್ರಾವತಿಯ ಎಂಪಿಎಂ ಕಾರ್ಖಾನೆಯಿಂದ 8 ವರ್ಷವಾದರೂ ರೈತರಿಗೆ ಬಾಕಿ ಪಾವತಿಯಾಗದ ಅಂಶ ಬೆಳಕಿಗೆ ಬಂದಿದೆ.

Advertisement

ಈ ಕಾರ್ಖಾನೆಗೆ ಬೀಗ ಬಿದ್ದು 3 ವರ್ಷ ಆಗಿದೆ. ರೈತರು ಬಾಕಿ ಕೇಳಲು ಹೋದಾಗಲೆಲ್ಲ ಬೀಗದ ಕಡೆ ಬೆಟ್ಟು ಮಾಡಿ ತೋರಿಸಲಾಗುತ್ತಿದೆ. 2010-11ರಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಪ್ರತಿ ಟನ್‌ಗೆ 100 ರೂ.ಪ್ರೋತ್ಸಾಹ ಧನ ಘೋಷಣೆ ಮಾಡಿತ್ತು. ಈ ಬಾಕಿ ಇನ್ನೂ ರೈತರ ಕೈ ಸೇರಿಲ್ಲ. ಹಂತ ಹಂತವಾಗಿ ಕಂಪನಿ ನಷ್ಟದ ಹಾದಿ ಹಿಡಿದು 3 ವರ್ಷದ ಹಿಂದೆ ಲಾಕ್‌ಔಟ್‌ ಆಯಿತು. ಒಟ್ಟು 3,500 ರೈತರ 2.92 ಕೋಟಿ ರೂ.ರೈತರಿಗೆ ಬರಬೇಕಿದ್ದು ಕೇಳಲು ಹೋದವರಿಗೆ ಇಂದು, ನಾಳೆ ಎಂದು ದಿನದೂಡಲಾಗುತ್ತಿದೆ.

2010-11ರಲ್ಲಿ ಕಬ್ಬಿಗೆ ಸರಕಾರ 1800 ರೂ.ಎಫ್‌ಆರ್‌ಪಿ ಧಾರಣೆ ನಿಗದಿ ಮಾಡಿತ್ತು. ಮಂಡ್ಯದ ಮೈ ಶುಗರ್‌ ವ್ಯಾಪ್ತಿಯ ರೈತರು ಸರಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಗಳಿಗೆ 100 ರೂ.ಹೆಚ್ಚುವರಿ ಧಾರಣೆ ನೀಡಬೇಕೆಂದು ಆಗ್ರಹಿಸಿದ್ದರು. ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದಗೌಡರು ಅದಕ್ಕೆ ಒಪ್ಪಿ ಸರಕಾರಿ ಸ್ವಾಮ್ಯದ ಮೈ ಶುಗರ್‌ ಮತ್ತು ಎಂಪಿಎಂ ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯ ರೈತರಿಗೆ ಪ್ರತಿ ಟನ್‌ಗೆ 100 ರೂ. ಪ್ರೋತ್ಸಾಹ ಧನ ಘೋಷಿಸಿದ್ದರು.

ಮೈ ಶುಗರ್‌ ಕಾರ್ಖಾನೆಗೆ ಸರಕಾರದ ಬೊಕ್ಕಸದಿಂದಲೇ ಪ್ರೋತ್ಸಾಹ ಧನ ಬಿಡುಗಡೆಯಾಗಿತ್ತು. ಆದರೆ, ಎಂಪಿಎಂ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿ ಎಂಪಿಎಂ ಕಾರ್ಖಾನೆ ತನ್ನ ಆಂತರಿಕ ಸಂಪನ್ಮೂಲದಿಂದಲೇ ಪ್ರೋತ್ಸಾಹಧನ ಬಿಡುಗಡೆಗೊಳಿಸುವಂತೆ ಆದೇಶ ನೀಡಲಾಯಿತು. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಕಾರಣ ಎಂಪಿಎಂ ಕಾರ್ಖಾನೆ ಹಣ ಬಿಡುಗಡೆ ಮಾಡಲಾಗದೆ ಕೈ ಚೆಲ್ಲಿತು. ಸದಾನಂದ ಗೌಡ, ಜಗದೀಶ ಶೆಟ್ಟರ್‌, ಸಿದ್ದರಾಮಯ್ಯ ಇವರೆಲ್ಲ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ರೈತರು ಹಲವು ಬಾರಿ ಭೇಟಿ ಮಾಡಿ ಮನವಿ ಮಾಡಿದರೂ ಫಲ ಮಾತ್ರ ಸಿಕ್ಕಿಲ್ಲ ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಈರಣ್ಣ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಎಂಪಿಎಂ ಕಾರ್ಖಾನೆ ಲಾಕ್‌ಔಟ್‌ ನಂತರ ರೈತರಿಗೆ ಬೇರೆ ದಾರಿ ಇಲ್ಲದೇ ದಾವಣಗೆರೆಯ ಕುಕ್ಕುವಾಡ ಕಾರ್ಖಾನೆಗೆ ಕಬ್ಬು ಸಾಗಿಸಬೇಕಾಯಿತು. ಹೊರ ಜಿಲ್ಲೆಗೆ ಕಬ್ಬು ಸಾಗಿಸಲು ಸಾರಿಗೆ ವೆಚ್ಚವನ್ನು ಸರಕಾರ ಕೊಡುವುದಾಗಿ ತಿಳಿಸಿದ್ದರಿಂದ ರೈತರು ಕೊಂಚ ನಿರಾಳರಾಗಿದ್ದಾರೆ.

Advertisement

ದಾವಣಗೆರೆ ಜಿಲ್ಲೆಗಳಿಗೆ ಸಾಗಿಸಲಾದ ಕಬ್ಬಿನ ಸಾರಿಗೆ ವೆಚ್ಚ 48 ಲಕ್ಷ ರೂ.ಗಳನ್ನೂ 3 ವರ್ಷದಿಂದ ಬಿಡುಗಡೆ ಮಾಡಿರಲಿಲ್ಲ. ಈ ಸಂಬಂಧ ನಿಯೋಗ ತೆರಳಿ ಮನವಿ ಸಲ್ಲಿಸಿದ ರೈತರಿಗೆ ಸ್ಪಂದಿಸಿದ ಸಿಎಂ ಕುಮಾರಸ್ವಾಮಿ ಅವರು 40 ಲಕ್ಷ ರೂ.ಗಳನ್ನು ಕಳೆದ ತಿಂಗಳು ಬಿಡುಗಡೆಗೊಳಿಸಿದ್ದಾರೆ. ಇನ್ನು 8 ಲಕ್ಷ ರೂ. ಬಾಕಿ ಇದ್ದು ಇನ್ನೊಂದು ತಿಂಗಳಲ್ಲಿ ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ. ಆದರೆ, 2017-18ನೇ ಸಾಲಿನ ಸಾರಿಗೆ ವೆಚ್ಚಕ್ಕೆ ಸಂಬಂ ಧಿಸಿದಂತೆ ಸರಕಾರ ರೈತರಿಂದ ಇದುವರೆಗೆ ಬಿಲ್‌ ಪಡೆದುಕೊಂಡಿಲ್ಲ. ಇದರ ಬಗ್ಗೆ ಗಮನ ಸೆಳೆದಾಗ ಕಾರ್ಖಾನೆಗಳ ಮೂಲಕ ಮಾಹಿತಿ ಪಡೆದು ಹಣ ಬಿಡುಗಡೆ ಮಾಡುವುದಾಗಿ ಸರಕಾರ ಹೇಳಿದೆ.

ಸರಕಾರ ಖಾಸಗಿ ಕಂಪನಿಗೂ ಮೊದಲು ತನ್ನದೇ ಒಡೆತನದ ಕಾರ್ಖಾನೆಯ ಬಾಕಿ ಪಾವತಿಸಲಿ. 8 ವರ್ಷದಿಂದ ಅನೇಕ ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ. ಚೇಂಬರ್‌ ಆಫ್‌ ಕಾಮರ್ಸ್‌ ಆಯುಕ್ತರು ಎಂಪಿಎಂ ಕಾರ್ಖಾನೆ ಟೆಂಡರ್‌ ಆದ ಮೇಲೆ, ಇಲ್ಲದಿದ್ದರೆ ಕಾರ್ಖಾನೆಯಲ್ಲಿರುವ ನಾಟಾ ಮಾರಿ ಬಾಕಿ ಕೊಡುವುದಾಗಿ ಹೇಳುತ್ತಿದ್ದಾರೆ. ಮೈ ಶುಗರ್‌ ಕಾರ್ಖಾನೆಗೆ ಕೊಟ್ಟಂತೆ ಎಂಪಿಎಂ ಕಾರ್ಖಾನೆಗೂ ಅನುದಾನ ಕೊಡಲಿ.
– ಜೆ.ಈರಣ್ಣ, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ.      

– ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next