Advertisement

ಹಳ್ಳಿಗಳಿಗೆ ದಾಂಗುಡಿ ಇಟ್ರಾ ಎಂಟು ಸಾವಿರ ಮಂದಿ !

05:03 PM Mar 31, 2020 | Suhan S |

ಬಾಗಲಕೋಟೆ: ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಣೆ ಹಿನ್ನೆಲೆಯಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ದುಡಿಯಲು ಹೋಗಿದ್ದ ಜನರು ಜಿಲ್ಲೆಗೆ ದಾಂಗುಡಿ ಇಟ್ಟಿದ್ದಾರೆ. ಹೀಗಾಗಿ ಹಳ್ಳಿ ಜನರಲ್ಲೂ ಕೋವಿಡ್ 19 ಭೀತಿ ದಿನೇ ದಿನೇ ಹೆಚ್ಚಾಗುತ್ತಿದೆ.

Advertisement

ಹೌದು, ಕಳೆದ ನಾಲ್ಕು ದಿನಗಳಲ್ಲಿ ಬೇರೆ ರಾಜ್ಯ, ಜಿಲ್ಲೆಗಳಿಂದ ಸುಮಾರು 8520 ಜನರು ಬಂದಿದ್ದಾರೆ. ಮಹಾರಾಷ್ಟ್ರ, ಕಾಸರಗೋಡು ಮುಂತಾದೆಡೆಯಿಂದ ಬಂದವರ ಆರೋಗ್ಯ ತಪಾಸಣೆ ಮಾಡಿ, ವಿವಿಧ ವಸತಿ ನಿಲಯಗಳಲ್ಲಿ ನಿಗಾ ಇಡಲಾಗಿದೆ.

ಕಳ್ಳ ದಾರಿ ಹುಡುಕಿಕೊಂಡ್ರು: ಆದರೆ, ಈ ಲೆಕ್ಕವೂ ಹೊರತುಪಡಿಸಿ, ಹಲವರು ತಮ್ಮ ತಮ್ಮ ಊರು ಸೇರಿದ್ದು, ಎಲ್ಲಿ ಕೋವಿಡ್ 19 ಹಬ್ಬಿ ಬಿಡುತ್ತದೆ ಎಂದು ಜನರು ಗಾಬರಿಗೊಂಡಿದ್ದಾರೆ. ಅದೃಷ್ಟವಶಾತ್‌ ಸಧ್ಯ ಜಿಲ್ಲೆಯಲ್ಲಿ ಕೋವಿಡ್ 19 ವೈರಸ್‌ ಕಂಡು ಬಂದಿಲ್ಲ. ಕೆಲವೆಡೆ ವದಂತಿ ಹಬ್ಬಿಸಿದ್ದು, ಅಂತವರ ವಿರುದ್ಧ ಪ್ರಕರಣಗಳೂ ದಾಖಲಾಗಿವೆ.  ಈ ವೈರಸ್‌ ಅತಿಹೆಚ್ಚು ಕಾಣಿಸಿಕೊಂಡ ಕೇರಳ ಹಾಗೂ ಮಹಾರಾಷ್ಟ್ರದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸಿದ್ದು, ಗ್ರಾಮೀಣ ಜನರ ಭೀತಿ ಹೆಚ್ಚಾಗಲು ಕಾರಣವಾಗಿದೆ.

ಬೇರೆ ರಾಜ್ಯದಿಂದ 1698 ಜನ: ಆಂಧ್ರದಿಂದ 633, ಮಹಾರಾಷ್ಟ್ರದಿಂದ 470, ಗೋವಾ-232, ಕೇರಳ-115, ರಾಜಸ್ತಾನ-35, ಉತ್ತರಪ್ರದೇಶ-37 ಜನ ಸೇರಿದಂತೆ ದೇಶದ 24 ರಾಜ್ಯಗಳಲ್ಲಿ ವಿವಿಧ ಕೆಲಸಕ್ಕಾಗಿ ಹೋಗಿದ್ದ 1698 ಜನರು ಮರಳಿ ಜಿಲ್ಲೆಗೆ ಬಂದಿದ್ದಾರೆ. ಇವರೆಲ್ಲರನ್ನೂ ತಪಾಸಣೆಗೆ ಒಳಪಡಿಸಿ, ಮನೆಯಲ್ಲಿರುವಂತೆ ಸೂಚನೆ ನೀಡಿಲಾಗಿದೆ. ಆಯಾ ಗ್ರಾಪಂ ಟಾಸ್ಕ್ಪೋರ್ಸ್‌ ಸಮಿತಿ, ಜಿಲ್ಲಾಡಳಿತ ಹಾಗೂ ಜಿ.ಪಂ.ಗೆ ದೊರೆತ ಈ ಅಂಕಿ-ಸಂಖ್ಯೆಯ ಹೊರತಾಗಿಯೂ ಹಲವಾರು ಜನರು ಜಿಲ್ಲೆಗೆ ಬಂದಿದ್ದಾರೆ. ಕೇರಳದಿಂದ ಬಂದವರ ಬಗ್ಗೆಯೇ ಜನರಿಗೆ ತೀವ್ರ ಭೀತಿ ಎದುರಾಗಿದೆ. ಎಚ್ಚರಿಕೆ ವಹಿಸುತ್ತಿಲ್ಲ ಜನ: ಕೊರೊನಾ ಕುರಿತು ಬಹುತೇಕರು ಗಂಭೀರವಾಗಿ ಪರಿಗಣಿಸಿಲ್ಲ. ಅಗತ್ಯವಿಲ್ಲದಿದ್ದರೂ ಜನರು ಹೊರ ಬರುತ್ತಲೇ ಇದ್ದಾರೆ. ಇದರಿಂದ ತುರ್ತು ಅಗತ್ಯಕ್ಕಾಗಿ ಹೊರ ಬರುವ ಜನರೂ, ಪೊಲೀಸರಿಂದ ಲಾಠಿ ಏಟು ತಿನ್ನುವ ಪರಿಸ್ಥಿತಿ ಬಂದಿದೆ. ನವನಗರದಲ್ಲಿ ಯುವಕನೊಬ್ಬ ಔಷಧ ತರಲು ಅಂಗಡಿಗೆ ಬಂದಾಗ, ಪಿಎಸ್‌ಐ ಮನಸೋಇಚ್ಛೆ ಹೊಡೆದಿದ್ದು, ತಲೆಗೆ 12 ಹೊಲಿಗೆ ಬಿದ್ದಿವೆ. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಸಮಸ್ಯೆ ಅನುಭವಿಸುವ ಪರಿಸ್ಥಿತಿ ಬಂದಿದೆ.

ಜಿಲ್ಲೆಯ 198 ಗ್ರಾ.ಪಂ. ವ್ಯಾಪ್ತಿಯ ವಿವಿಧ ಹಳ್ಳಿಗಳಿಗೆ 8520 ಜನ ಬಂದಿದ್ದಾರೆ. ಅವರ ತಪಾಸಣೆ ಮಾಡಿದ್ದು, ಮನೆಯಲ್ಲಿರಲು ಸೂಚನೆ ನೀಡಿದ್ದೇವೆ. ಜನರು ಇದನ್ನು ಗಂಭೀರವಾಗಿ ತಗೆದುಕೊಳ್ಳಬೇಕು. – ಗಂಗೂಬಾಯಿ ಮಾನಕರ, ಜಿ.ಪಂ. ಸಿಇಒ

Advertisement

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next