Advertisement

ಪೇರಡ್ಕ –ಕಾಯರಡ್ಕ ರಸ್ತೆಯಲ್ಲಿ ಶಪಿಸುತ್ತಲೇ ಸಂಚಾರ!

11:16 AM Jul 19, 2018 | Team Udayavani |

ಕಡಬ : ಕಡಬದಿಂದ ನೂಜಿಬಾಳ್ತಿಲವನ್ನು ಸಂಪರ್ಕಿಸುವ ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವ ಪೇರಡ್ಕ- ಕಾಯರಡ್ಕ ಜಿ.ಪಂ. ರಸ್ತೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಬೇಕೆಂಬ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆಗೆ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ. ಮಳೆಗಾಲದಲ್ಲಂತೂ ಇಲ್ಲಿ ಸಂಚರಿಸುವುದು ಸಾಹಸವೇ ಸರಿ. ಈ ರಸ್ತೆಯನ್ನು ಪ್ರತಿನಿತ್ಯ ಬಳಸುವ ಜನರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಶಪಿಸುತ್ತಲೇ ಸಂಚರಿಸುವುದು ಇಲ್ಲಿ ನಿತ್ಯದ ಗೋಳು.

Advertisement

ಅತ್ಯಂತ ಪ್ರಮುಖ ರಸ್ತೆ
ತಾಲೂಕು ಕೇಂದ್ರ ಕಡಬದಿಂದ ಪೇರಡ್ಕ, ನೂಜಿಬಾಳ್ತಿಲ, ಕಲ್ಲುಗುಡ್ಡೆ, ಇಚ್ಲಂಪಾಡಿ ಪ್ರದೇಶಗಳನ್ನು ಸಂಪರ್ಕಿಸುವ ಈ ರಸ್ತೆ ಸುಬ್ರಹ್ಮಣ್ಯ -ಧರ್ಮಸ್ಥಳ ರಾಜ್ಯ ಹೆದ್ದಾರಿ ಹಾಗೂ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಸದ್ರಿ ರಸ್ತೆಯ ಅಕ್ಕಪಕ್ಕದಲ್ಲಿ ಹಲವು ಶಾಲೆಗಳು ಹಾಗೂ ವಿವಿಧ ಧರ್ಮಗಳ ಆರಾಧನಾಲಯಗಳಿವೆ. ಕಡಬದ ಹೊಸಮಠ ಸೇತುವೆ ನೆರೆನೀರಿನಲ್ಲಿ ಮುಳುಗಡೆಯಾದರೆ ಸರಕಾರಿ ಬಸ್‌ ಗಳು ಸಹಿತ ಎಲ್ಲ ವಾಹನಗಳು ಉಪಯೋಗಿಸುವ ಪರ್ಯಾಯ ರಸ್ತೆಯೂ ಇದೇ ಆಗಿದೆ. ಆದರೆ ಎಲ್ಲೆಡೆ ಗ್ರಾಮೀಣ ರಸ್ತೆಗಳು ಅಭಿವೃದ್ಧಿಗೊಂಡರೂ ಈ ರಸ್ತೆಗೆ ಮಾತ್ರ ಅಭಿವೃದ್ಧಿಯ ಯೋಗ ಇನ್ನೂ ಕೂಡಿಬಂದಿಲ್ಲ. ಅಲ್ಲಲ್ಲಿ ಒಂದಿಷ್ಟು ಉದ್ದಕ್ಕೆ ಕಾಂಕ್ರೀಟ್‌ ಹಾಕಿದ್ದು ಬಿಟ್ಟರೆ ಉಳಿದೆಡೆ ಈ ರಸ್ತೆ ಅತ್ಯಂತ ಕುಲಗೆಟ್ಟಿದೆ.

ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ
ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಇಲ್ಲಿನ ಜನರು ಹಲವು ಬಾರಿ ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದರೂ ಪ್ರತಿಫಲ ಮಾತ್ರ ಶೂನ್ಯ. ರಸ್ತೆಗೆ ಸಂಬಂಧಿಸಿದ ಕುಟ್ರಾಪ್ಪಾಡಿ ಹಾಗೂ ನೂಜಿಬಾಳ್ತಿಲ ಗ್ರಾಮಸಭೆಗಳಲ್ಲಿಯೂ ಸದ್ರಿ ರಸ್ತೆಯ ಅಭಿವೃದ್ಧಿಗೆ ಆಗ್ರಹಿಸಿ ಜನರು ದನಿ ಎತ್ತಿ ಮಾತನಾಡಿದ್ದಾರೆ. ಅಲ್ಲಿ ಸಿಕ್ಕಿದ್ದು ಭರವಸೆಯೇ ಹೊರತು ಸಮಸ್ಯೆ ಬಗೆಹರಿದಿಲ್ಲ.

ಪ್ರಸ್ತುತ ಸಾಮಾಜಿಕ ಜಾಲ ತಾಣಗಳಲ್ಲಿಯೂ ರಸ್ತೆಯ ದುರವಸ್ಥೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ರಸ್ತೆಯನ್ನು ಅಭಿವೃದ್ಧಿಪಡಿಸಲು ಮುಂದಾಗದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಛೀಮಾರಿ ಹಾಕುವ ಹಾಗೂ ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ವ್ಯಂಗ್ಯೋಕ್ತಿಗಳು ಸಾಕಷ್ಟು ಸಂಖ್ಯೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡುತ್ತಿವೆ.

ದೊಡ್ಡ ಮೊತ್ತ ಬೇಕು
ಜಿ.ಪಂ. ಅನುದಾನದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಈ ರಸ್ತೆಗೆ ಅಲ್ಲಲ್ಲಿ ಕಾಂಕ್ರೀಟ್‌ ಹಾಕಲಾಗಿದೆ. ಕಳೆದ ಅವಧಿಯಲ್ಲಿ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ 5 ಲಕ್ಷ ರೂ. ಅನುದಾನ ನೀಡಿದ್ದರು. ರಸ್ತೆಯನ್ನು ಪೂರ್ಣವಾಗಿ ಅಭಿವೃದ್ಧಿಪಡಿಸಬೇಕಾದರೆ ದೊಡ್ಡ ಮೊತ್ತದ ಅನುದಾನದ ಅಗತ್ಯವಿದೆ. ಕ್ಷೇತ್ರದ ಶಾಸಕರು ಒದಗಿಸಿದರೆ ಸಮಸ್ಯೆ ಬಗೆಹರಿಯಬಹುದು.
– ಪಿ.ಪಿ. ವರ್ಗೀಸ್‌, ಜಿ.ಪಂ.
ಸದಸ್ಯರು, ಕಡಬ ಕ್ಷೇತ್ರ 

Advertisement

ಚುನಾವಣೆ  ಬಹಿಷ್ಕಾರ
ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪೇರಡ್ಕ-ಕಾಯರಡ್ಕ ರಸ್ತೆಯಲ್ಲಿ ನಿತ್ಯ ಸಂಚರಿಸುವ ಜನರು ನರಕಯಾತನೆ ಅನುಭವಿಸುವಂತಾಗಿದೆ. ಲೋಕಸಭಾ ಚುನಾವಣೆಗೆ ಮೊದಲು ಜನಪ್ರತಿನಿಧಿಗಳು ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಪರಿಸರದ ಜನರನ್ನು ಸಂಘಟಿಸಿ ಚುನಾವಣೆ ಬಹಿಷ್ಕರಿಸುವುದು ನಿಶ್ಚಿತ.
– ಸತ್ಯನ್‌ ಕಾಜರುಕಟ್ಟೆ, ಸ್ಥಳೀಯ ಮುಂದಾಳು

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next