ಕೆ.ಆರ್.ಪೇಟೆ: ತಾಲೂಕಿನ ಬೂಕನಕೆರೆ ಹೋಬಳಿಯ ಕಟ್ಟಹಳ್ಳಿ-ಕಟ್ಟೆಕ್ಯಾತನಹಳ್ಳಿ ಸೇತುವೆ ಪಿಲ್ಲರ್‌ಗಳ ಬಳಿ ಹಮಾವತಿ ನದಿ ಒಡಲಿನಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ತಡೆಯಬೇಕಾದ ಅಧಿಕಾರಿಗಳೇ ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಸುತ್ತಮುತ್ತಲ ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕಿನ ಬೂಕನಕೆರೆ ಹಾಗೂ ಅಕ್ಕಿಹೆಬ್ಟಾಳು ಹೋಬಳಿ ಮೂಲಕ ಮೈಸೂರು-ಹಾಸನ ಜಿಲ್ಲೆಗಳಿಗೆ ನೇರ ಸಂಪರ್ಕ ನೀಡುತ್ತಿರುವ ಹೇಮಾವತಿ ನದಿ ಸೇತುವೆ ಪಕ್ಕದಲ್ಲೇ ಅಕ್ರಮ ಮರಳು ದಂಧೆ ನಡೆಸುತ್ತಿರುವುದರಿಂದ ಸೇತುವೆ ಪಿಲ್ಲರ್‌ಗಳು ಶಿಥಿಲಗೊಳ್ಳುತ್ತಿದ್ದು, ಸೇತುವೆ ಕುಸಿಯುವ ಭೀತಿ ಕಾಡುತ್ತಿವೆ. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ವ್ಯಾಪ್ತಿಗೆ ಒಳಪಡುವ ಈ ಪ್ರದೇಶವು ಕೃಷ್ಣರಾಜಸಾಗರ ಜಲಾಶಯದ ಹಿನ್ನೀರು ನಿಲ್ಲುವ ಪ್ರದೇಶವಾಗಿದೆ. ಲಕ್ಷಾಂತರ ಟನ್ ಸಮೃದ್ಧವಾದ ಮರಳಿರುವ ಜಾಗವಾಗಿರುವುದರಿಂದ ದಂಧೆಕೋರರು ಕೊಪ್ಪರಿಕೆಗಳು, ಎತ್ತಿನಗಾಡಿಗಳು ಹಾಗೂ ಟ್ರ್ಯಾಕ್ಟರ್ ಮೂಲಕ ಮರಳನ್ನು ಒಂದೆಡೆ ಸಂಗ್ರಹಿಸಿ, ಮಧ್ಯರಾತ್ರಿ ವೇಳೆಯಲ್ಲಿ ಟಿಪ್ಪರ್ ಮೂಲಕ ಮರಳು ದಂಧೆ ನಡೆಸುತ್ತಿದ್ದು, ಒಂದು ಲೋಡ್ ಮರಳು ಕನಿಷ್ಠ 40ರಿಂದ 50ಸಾವಿರ ರೂ. ಮಾರಾಟವಾಗುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ರಾತ್ರಿಯೇ ಮರಳು ಸಾಗಾಟ: ರಾತ್ರಿ ಮರಳು ಸಂಗ್ರಹ ಕಾರ್ಯವು ಯಂತ್ರೋಪಕರಣಗಳ ಮೂಲಕ ನಡೆಯುತ್ತಿದೆ. ಕಟ್ಟಹಳ್ಳಿ, ಕಟ್ಟೆಕ್ಯಾತನಹಳ್ಳಿ ಸೇರಿದಂತೆ ಹೇಮಾವತಿ ನದಿ ಪಾತ್ರದ ಗ್ರಾಮಗಳ ಜನರು ಹೈರಾಣಾಗಿದ್ದಾರೆ. ಅಕ್ಕಿಹೆಬ್ಟಾಳು ಹೋಬಳಿಯ ಕಟ್ಟೆಕ್ಯಾತನಹಳ್ಳಿ ಕಡೆಯಿಂದ ಹೇಮಾವತಿ ನದಿಯೊಳಗೆ ಇಳಿಯಲು ಕಚ್ಚಾ ರಸ್ತೆ ನಿರ್ಮಿಸಿಕೊಂಡಿರುವ ದಂಧೆಕೋರರು, ರಾತ್ರಿ 10ಗಂಟೆಯಿಂದ ಆರಂಭಿಸಿ, ಬೆಳಗಿನ ಜಾವ 6ಗಂಟೆಯವರೆಗೂ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಿ, ರಾತ್ರಿಯೇ ಟಿಪ್ಪರ್ ಮೂಲಕ ಮರಳನ್ನು ಮೈಸೂರು, ಮಂಡ್ಯ, ಕೆ.ಆರ್ .ಪೇಟೆ, ಕೆ.ಆರ್.ನಗರ, ಪಾಂಡವಪುರ ಪಟ್ಟಣಗಳಿಗೆ ಸಾಗಾಟ ಮಾಡುತ್ತಿದ್ದಾರೆ ಎಂದು ಜನರು ದೂರಿದ್ದಾರೆ.
ಮರಳು ದಂಧೆಗೆ ಕಡಿವಾಣ ಹಾಕಿ: ಅಪಾಯ ಸಂಭವಿಸುವ ಮುನ್ನ ತಾಲೂಕು ಆಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸರು ಎಚ್ಚೆತ್ತುಕೊಂಡು ಹೇಮಾವತಿ ನದಿ ಒಡಲಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ದಂಧೆಗೆ ಕಡಿವಾಣ ಹಾಕಬೇಕಿದೆ. ಬರಿದಾಗುತ್ತಿರುವ ಹೇಮಾವತಿ ನದಿ ಒಡಲನ್ನು ಸಂರಕ್ಷಣೆ ಜೊತೆಗೆ, ಕುಸಿಯುವ ಭೀತಿ ಎದುರಿಸುತ್ತಿರುವ ಹೇಮಾವತಿ ನದಿ ಸೇತುವೆ ಕಾಪಾಡಬೇಕು. ಅಕ್ರಮ ದಂಧೆಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಕೆ.ಆರ್.ಪೇಟೆ ತಾಲೂಕು ಆಡಳಿತ ಕಾರ್ಯಸೌಧದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಕಟ್ಟಹಳ್ಳಿ ಹಾಗೂ ಕಟ್ಟೇಕ್ಯಾತನಹಳ್ಳಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.