ರಾಯಚೂರು: ಸಾರ್ವಜನಿಕರು ಪಾವತಿಸಿದ ತೆರಿಗೆ ಹಣದಿಂದ ಸರ್ಕಾರ ಕಲಾಪಗಳನ್ನು ನಡೆಸಿ ಜನರ ಸಮಸ್ಯೆಗಳನ್ನೇ ಚರ್ಚಿಸದೇ ಕಾಲಹರಣ ಮಾಡುತ್ತಿರುವುದು ಖಂಡನೀಯ. ಕ್ಷುಲ್ಲಕ ಕಾರಣಗಳಿಗೆ ಕಲಾಪ ಮುಂದೂಡದೇ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲಿ ಎಂದು ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ರಾಜ್ಯದಲ್ಲಿ ಜನ ನಾನಾ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸರ್ಕಾರದಿಂದ ಏನಾದರೂ ಪರಿಹಾರ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಕ್ಷುಲ್ಲಕ ವಿಷಯಗಳನ್ನೇ ಹಗ್ಗ-ಜಗ್ಗಾಟ ಮಾಡಿಕೊಂಡು ಸದನದ ಅಮೂಲ್ಯ ಸಮಯ ಹಾಳು ಮಾಡುತ್ತಿದ್ದಾರೆ. ವಿಧಾನಸಭೆ ಎರಡೂ ಸದನಗಳ ಸಮಯ ವ್ಯರ್ಥ ಮಾಡಿ ರಾಜ್ಯದ ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ ಎಂದು ದೂರಿದರು.
ಕೊರೊನಾ ಲಾಕ್‌ಡೌನ್‌ನಿಂದ ಜನ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ನೀರಾವರಿ, ರೈತರು, ಬೆಲೆ ಏರಿಕೆ, ಮಹಿಳಾ ಸಬಲೀಕರಣ ಸಮಸ್ಯೆ ಸೇರಿ ಅನೇಕ ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸದೇ ಕೇವಲ ತಮ್ಮ ಪಕ್ಷಗಳ ವೈಯಕ್ತಿಕ ಪ್ರತಿಷ್ಠೆಗಾಗಿ ಸದನದ ಕಲಾಪಗಳ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ದೂರಿದರು.
ವಿಧಾನಮಂಡಲ ಅಧಿವೇಶನ ನಡೆಸಲು ದಿನಕ್ಕೆ ಒಂದೂವರೆ ಕೋಟಿ ರೂ. ಖರ್ಚಾಗುತ್ತದೆ. ಜನರ ತೆರಿಗೆ ಹಣದಿಂದ ವೆಚ್ಚವಾಗುತ್ತದೆ. ಜನಸಾಮಾನ್ಯರು, ರೈತರು, ಯುವಕರು ಈ ಬಗ್ಗೆ ಬೇಸರಗೊಂಡಿದ್ದಾರೆ. ಸದನದ ಕಲಾಪದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸದೇ, ತಮ್ಮ ಪಕ್ಷಗಳ ಮತ ಬ್ಯಾಂಕ್ ದೃಷ್ಟಿಯಿಂದ ಒಣ ಪ್ರತಿಷ್ಠೆಗಾಗಿ ಸದನದಲ್ಲಿ ಬಾರದ ವಿಷಯಗಳ ಬಗ್ಗೆ ಚರ್ಚಿಸಿ ಸಮಯ ವ್ಯಯಿಸುತ್ತಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ. ವಿರೂಪಾಕ್ಷಿ, ಜಿಲ್ಲಾ ಕಾರ್ಯಧ್ಯಕ್ಷ ಎನ್. ಶಿವಶಂಕರ ವಕೀಲ, ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ಸದಸ್ಯರಾದ ಎನ್.ಪವನಕುಮಾರ, ದಾನಪ್ಪ ಯಾದವ್, ಗಾಣಧಾಳ ಲಕ್ಷ್ಮೀಪತಿ, ಪಿ. ಯಲ್ಲಪ್ಪ, ತಿಮ್ಮಾರೆಡ್ಡಿ, ರಾಮಕೃಷ್ಣ, ರಾಮನಗೌಡ, ದೋತರಬಂಡಿ ಮಲ್ಲಿಕಾರ್ಜುನ, ಮಹೇಶ ತುಪ್ಪದ, ಜಂಬುನಾಥ ಯಾದವ್, ರವಿ ಮಡಿವಾಳ, ನರಸಿಂಹಲು, ಆಲಂಬಾಬು, ವಿಶ್ವನಾಥ ಪಟ್ಟಿ, ಆಂಜನೇಯ ಯಾದವ್, ಅಮ್ಜದ್, ನರಸಿಂಹಲು, ಆದಿರಾಜ್, ಈರಣ್ಣ, ಮಂಚಾಲ ಕಿರಣ್, ಅವಿಲ್, ವೆಂಕಟೇಶ್, ನರಸಿಂಹಲು ಸೇರಿದಂತೆ ಇತರರು ಇದ್ದರು.