ರಾಯಚೂರು: ಜಿಲ್ಲಾ ಪಂಚಾಯಿತಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಶ್ಯುಟೆಕ್, ನಿರ್ಮಿತಿ ಹಾಗೂ ಲ್ಯಾಂಡ್ ಆರ್ಮಿ ಸಂಸ್ಥೆಗಳ ನಿಷ್ಕಾಳಜಿ, ಬೇಜವಾಬ್ದಾರಿ ಕೆಲಸದ ಬಗ್ಗೆ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ನೇತೃತ್ವದಲ್ಲಿ ಸೋಮವಾರ ಮಾಸಿಕ ಕೆಡಿಪಿ ಸಭೆ ನಡೆಯಿತು. ಈ ವೇಳೆ ಲ್ಯಾಂಡ್ ಆರ್ಮಿಯವರು ಸಿಂಧನೂರಿನ ಗಾಂಧಿನಗರದಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿ ಆರು ವರ್ಷ ಕಳೆದಿದ್ದು, ಅದಕ್ಕೆ ಈವರೆಗೂ ನೀರಿನ ಸಂಪರ್ಕ ಕಲ್ಪಿಸಿಲ್ಲ ಎಂದು ಅಧ್ಯಕ್ಷೆ ದೂರಿದರು.
ಲ್ಯಾಂಡ್ ಆರ್ಮಿ ಅಧಿಕಾರಿ ಸಮಜಾಯಿಷಿ ನೀಡಲು ಮುಂದಾದಾಗ, ಅದೆಲ್ಲ ಬೇಡ ಕೆಲಸ ಯಾವಾಗ ಮುಗಿಸುವಿರಿ ಎನ್ನುವುದು ತಿಳಿಸಿ ಎಂದು ಅಧ್ಯಕ್ಷೆ ತಾಕೀತು ಮಾಡಿದರು. ಇದಕ್ಕೆ ದನಿಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಹಿರೇಗೌಡರ, ಸಿಂಧನೂರಿನಲ್ಲಿ ಕ್ಯಾಶುಟೆಕ್ ಸಂಸ್ಥೆಯಿಂದ ನಿರ್ಮಿಸಿದ ಶಾಲೆ ಕಟ್ಟಡ ಕಾಮಗಾರಿ ಕಳಪೆಯಾಗಿದ್ದು, ವರ್ಷ ಕೂಡ ಬಾಳಿಕೆ ಬರದಂತಾಗಿದೆ. ವಿದ್ಯಾರ್ಥಿಗಳ ಹಿತಕ್ಕಾದರೂ ಗುಣಮಟ್ಟದ ಕೆಲಸ ಮಾಡಿ ಎಂದು ತಾಕೀತು ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಕ್ಯಾಶುಟೆಕ್ ಅಧಿಕಾರಿ, ಥರ್ಡ್ ಪಾರ್ಟಿ ವರದಿ ಆಧರಿಸಿಯೇ ಕಾಮಗಾರಿಗೆ ಸಂಬಂಧಿಸಿದ ಹಣ ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿದರು.
ನಿರ್ಮಿತಿ ಕೇಂದ್ರದಿಂದ ಅಂಗನವಾಡಿ ಕೇಂದ್ರಗಳಲ್ಲಿ ಶೌಚಗೃಹಗಳ ನಿರ್ಮಾಣದಲ್ಲೂ ನಿರ್ಲಕ್ಷ್ಯ ಧೋರಣೆ ತಾಳಿದ್ದು ಸರಿಯಲ್ಲ. ಅನುದಾನ ಕಡಿಮೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆಯೇ ಎಂದು ಬಸವರಾಜ ಹಿರೇಗೌಡರ ಪ್ರಶ್ನಿಸಿದರು. ಜಿಪಂ ಸಿಇಒ ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಶೌಚಗೃಹ ನಿರ್ಮಾಣ ಕಾಮಗಾರಿ ಬೇಗ ಮುಗಿಸಲು ಒತ್ತು ನೀಡಲಾಗಿದೆ. ನಿವೇಶನಗಳ ಸಮಸ್ಯೆಗಳಿದ್ದಲ್ಲಿ ಕೂಡಲೇ ಪರಿಹರಿಸಲಾಗುವುದು ಎಂದರು.
ತೋಟಗಾರಿಕೆ ಇಲಾಖೆ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಇಲಾಖೆ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ಕೊಡಿ. ನೀರಿಲ್ಲದೇ ರೈತರು ಪರ್ಯಾಯ ಬೆಳೆಗಳಿಗೆ ಮೊರೆ ಹೋಗುತ್ತಿದ್ದು, ಸೂಕ್ತ ಸಲಹೆ ಸೂಚನೆ ನೀಡಿ ಎಂದು ಹಿರೇಗೌಡರ ಹೇಳಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹ್ಮದ್ ಅಲಿ ಮಾತನಾಡಿ, 10.28 ಸಸಿಗಳ ವಿತರಣೆ ಹಾಗೂ ನೆಡುವ ಗುರಿಯಿದ್ದು, ರೈತರಿಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದೇವೆ. ಹನಿ ನೀರಾವರಿ ಜಾಗೃತಿಗೂ ಒತ್ತು ನೀಡಲಾಗಿದೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ| ಚೇತನಾ ಪಾಟೀಲ ಮಾತನಾಡಿ, ಜಿಲ್ಲಾದ್ಯಂತ 2018-19ನೇ ಸಾಲಿನಲ್ಲಿ 2,041 ಕೃಷಿ ಹೊಂಡ ನಿರ್ಮಿಸಿದ್ದು, 1,391 ಕೃಷಿ ಹೊಂಡಗಳಿಗೆ ಮಾತ್ರ ಮೊದಲ ಕಂತಿನ ಹಣ ಬಂದಿದೆ. ಬಾಕಿ ಈಗ ಬಿಡುಗಡೆಯಾಗಿದ್ದು, ವಿತರಿಸಲಾಗುತ್ತಿದೆ. ಬಿತ್ತನೆಬೀಜ, ರಸಗೊಬ್ಬರ ವಿತರಣೆ ಸಮರ್ಪಕವಾಗಿ ನಡೆಯುತ್ತಿದ್ದು, ಅಗತ್ಯದಷ್ಟು ದಾಸ್ತಾನು ಇದೆ ಎಂದು ವಿವರಿಸಿದರು.