ಹಾವೇರಿ: ಕಿಸಾನ್ ಸಮ್ಮಾನ್ ಯೋಜನೆಯಲ್ಲಿನ ತಾರತಮ್ಯ ಸರಿಪಡಿಸಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸಾವಿರಾರು ರೈತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಕಾಗಿನೆಲೆ ಕ್ರಾಸ್‌ನಲ್ಲಿರುವ ಪುರಸಿದ್ಧೇಶ್ವರ ದೇವಸ್ಥಾನದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ರೈತರು, ಪಿಬಿ ರಸ್ತೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಎದುರು ಧರಣಿ ನಡೆಸಿ ಬೇಡಿಕೆ ಈಡೇರಿಸಲು ಆಗ್ರಹಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಕಿಸಾನ್ ಸಮ್ಮಾನ್ ಯೋಜನೆಯಡಿ ಒಂದು ವರ್ಷವಾದರೂ ಜಿಲ್ಲೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ಸರಿಯಾಗಿ ಮುಟ್ಟಿಲ್ಲ. ಜಿಲ್ಲೆಯ 86 ಸಾವಿರ ರೈತರಿಗೆ ಯೋಜನೆ ಲಾಭ ಸಿಕ್ಕಿಲ್ಲ. ಪರಿಣಾಮ ಅವರೆಲ್ಲ ವಿವಿಧ ಇಲಾಖೆ, ಬ್ಯಾಂಕ್‌ಗೆ ಅಲೆದಾಡಿ ಸುಸ್ತುಹೊಡೆದಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದು, ಜಿಲ್ಲೆಯ ರೈತರಿಗೆ ಸಾಲಮನ್ನಾದಡಿ 2050ಕೋಟಿ ರೂ. ಘೋಷಣೆ ಮಾಡಿ ಅದರಲ್ಲಿ 450ಕೋಟಿ ರೂ. ಸಾಲ ಖಾತೆಗೆ ಜಮೆ ಮಾಡಿದೆ. ಇನ್ನುಳಿದ 160ಕೋಟಿ ರೂ. ಕೊಡಬೇಕಾದ ಹಣವನ್ನು ರೈತರಿಗೆ ಜಮೆ ಆಗಿಲ್ಲ. ರೈತರು ಕಾದು ಕುಳಿತು ಈಗ ಅಸಲಿನಷ್ಟೇ ಬಡ್ಡಿ ಕಟ್ಟಬೇಕಾಗಿದೆ. ಈ ವರ್ಷದ ಅಕಾಲಿಕ ಮಳೆಗೆ ಬೆಳೆ ಕಳೆದುಕೊಂಡ ರೈತರಿಗೆ ಸಾಲ ಮರುಪಾವತಿ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಸಾಲಮನ್ನಾ ಮಾಡಬೇಕು. ಕೃಷಿ ಸಾಲವನ್ನು ವಸೂಲಿ ಮಾಡಲು ಕಟ್ಟುನಿಟ್ಟಿನ ಆದೇಶ ಮಾಡಿರುವುದನ್ನು ಹಿಂಪಡೆಯಬೇಕು ಎಂದು ರೈತರು ಮನವಿ ಮೂಲಕ ಒತ್ತಾಯಿಸಿದರು.
ರೈತರು ಬರಗಾಲ, ಅತಿವೃಷ್ಟಿಗೆ ತುತ್ತಾಗಿ ಸಾಕಷ್ಟು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೂ 2016-17, 2018-19ಮೇ ಸಾಲಿನ ಸುಮಾರು 15ಕೋಟಿ ರೂ., ಬೆಳೆವಿಮೆ ಪರಿಹಾರದ ಬ್ಯಾಂಕಿನಲ್ಲಿದ್ದರೂ ರೈತರ ಖಾತೆಗೆ ಜಮೆ ಮಾಡದೇ ಅಧಿ ಕಾರಿಗಳು ಮೊಂಡುತನ ಪ್ರದರ್ಶಿಸುತ್ತಿದ್ದಾರೆ. 2019-20ನೇ ಸಾಲಿನಲ್ಲಿ ಅತಿವೃಷ್ಟಿಯಾದಾಗ ಬೆಳೆವಿಮೆ ತುಂಬಿದ ಎಲ್ಲ ರೈತರಿಗೂ ಶೇ. 25ರಷ್ಟು ವಿಮಾ ಪರಿಹಾರ ಕೊಡಬೇಕೆಂಬ ಸರ್ಕಾರದ ನಿರ್ದೇಶನದಂತೆ 48ಕೋಟಿ ರೂ., ಬಿಡುಗಡೆಯಾಗಿದ್ದು, ವಿಳಂಬ ಮಾಡದೇ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
ಅತಿವೃಷ್ಟಿ ಪರಿಹಾರದ ನೀತಿನಿಯಮ ಗಾಳಿಗೆ ತೂರಿ ಬೇಕಾದವರಿಗೆ ಬೇಕಾಬಿಟ್ಟಿ ಪರಿಹಾರ ಕೊಟ್ಟಿದ್ದಾರೆ. ಅಧಿಕಾರಿಗಳು ಉಳ್ಳವರೊಂದಿಗೆ ಶಾಮಿಲಾಗಿ ಅನರ್ಹ ಫಲಾನುಭವಿಗಳಿಗೆ ಪರಿಹಾರ ಕೊಟ್ಟಿದ್ದರೆ. ಹಾನಿಗೊಳಗಾದ ರೈತರಿಗೆ ಬಿಡಿಗಾಸೂ ಸಿಕ್ಕಿಲ್ಲ. ತೋಟಗಾರಿಕೆ ಬೆಳೆನಾಶ ಹೊಂದಿದ್ದರೂ ರೈತರಿಗೆ ಪರಿಹಾರ ನೀಡಿಲ್ಲ, ಜಿಲ್ಲೆಯ ಇನ್ನೂ 48 ಸಾವಿರ ರೈತರಿಗೆ ಪರಿಹಾರ ಮುಟ್ಟಿಲ್ಲ, ಸೂರು ಕಳೆದುಕೊಂಡು ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಪ್ರಮುಖರಾದ ಶಿವಬಸಪ್ಪ ಗೋವಿ, ಶಂಕ್ರಣ್ಣ ಶಿರಗಂಬಿ, ಸುರೇಶ ಚಲವಾದಿ, ಗಂಗನಗೌಡ ಮುದಿಗೌಡ್ರ, ಚಂದ್ರಗೌಡ ಪಾಟೀಲ ಇತರರಿದ್ದರು.