ಮಹಾಲಿಂಗಪುರ: ಕಾರ್ಖಾನೆಗೆ ಕಬ್ಬು ಪೂರೈಸಿದ 15 ದಿನಗಳೊಳಗಾಗಿ ಕಬ್ಬಿನ ಬಿಲ್ ಕೊಡುತ್ತೇನೆ ಎಂದು ಒಪ್ಪಿಕೊಂಡ ಗೋದಾವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸುಮಾರು ನಾಲ್ಕು ತಿಂಗಳ ನಂತರ ಬಿಲ್ ಕೊಡುತ್ತಿದ್ದು ಖಂಡನೀಯ ಎಂದು ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ರಂಗನಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಜಿಎಲ್‌ಬಿಸಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ತಿಂಗಳ ಹಿಂದೆ ಬಾಗಲಕೋಟೆ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಫ್ ಆರ್‌ಪಿ ಮತ್ತು ಶುಗರ್ ಕಂಟ್ರೋಲ್ ಕಾಯ್ದೆ ಪ್ರಕಾರ ರೈತರು ಕಬ್ಬು ಪೂರೈಸಿದ 15 ದಿನದೊಳಗಾಗಿ ಕಬ್ಬಿನ ಬಿಲ್ ಕೊಡುತ್ತೇನೆ ಮತ್ತು ಎಫ್‌ಆರ್‌ಪಿ ಪ್ರಕಾರ 2700 ರೂ. ಬದಲಾಗಿ 2500 ರೂ. ಕೊಡುತ್ತೇವೆ. ಏಕೆಂದರೆ 2700 ರೂ ಕೊಡುವುದಾದರೆ ತಡವಾಗುತ್ತದೆ. 2500 ರೂ. ಆದರೆ 15 ದಿನಗಳೊಳಗಾಗಿ ಕೊಡುತ್ತೇವೆ. ತಡವಾದರೆ ಅದಕ್ಕೆ ಬಡ್ಡಿ ಸೇರಿಸಿ ಕೊಡುತ್ತೇವೆ ಎಂದು ಆಡಳಿತ ಮಂಡಳಿಯವರು ಒಪ್ಪಿಕೊಂಡಿದ್ದರು.
ಆದರೆ ಸುಮಾರು ನಾಲ್ಕು ತಿಂಗಳ ನಂತರ ಈಗ ಕಬ್ಬಿನ ಬಿಲ್ ಪಾವತಿಸುತ್ತಿದ್ದಾರೆ. ಆದರೆ ಅದಕ್ಕೆ ಬಡ್ಡಿ ಕೂಡ ನೀಡುತ್ತಿಲ್ಲ. ಬಿಲ್ ಪಾವತಿಗೆ ತಡ ಮಾಡುತ್ತಿರುವುದಕ್ಕಾಗಿ ನಾವು ಕಾರ್ಖಾನೆಯವರಿಗೆ ನೋಟೀಸ್ ನೀಡುತ್ತ ಬಂದಿದ್ದೇವೆ. ಒಟ್ಟು 4 ಬಾರಿ ನೋಟೀಸ್ ನೀಡಿದ್ದೇವೆ. ಜಿಲ್ಲೆಯಲ್ಲಿ ಇಐಡಿ ಪ್ಯಾರಿ ಹೊರತು ಪಡಿಸಿ ಯಾವ ಕಾರ್ಖಾನೆಯವರೂ 15 ದಿನದೊಳಗಾಗಿ ಬಿಲ್ ನೀಡಿಲ್ಲ ಎಂದರು.
ಕಾರ್ಖಾನೆ ಆಡಳಿತ ಮಂಡಳಿ ರೈತರ ಹಣೆ ಬರಹದೊಂದಿಗೆ ಚೆಲ್ಲಾಟವಾಡುತ್ತಿದ್ದು ಅದನ್ನು ಸಹಿಸಲು ಸಾಧ್ಯವಿಲ್ಲ. ಕಳೆದ ಹಂಗಾಮಿನ ಬಾಕಿ 111 ರೂ. ಮತ್ತು ಈ ಹಂಗಾಮಿಗೆ ನೀಡುತ್ತಿರುವ 2500 ರೂ. ಗಳಿಗೆ ಬಡ್ಡಿ ಹಾಕಬೇಕು. ಬಾಕಿ ಉಳಿದ 200 ರೂ. ಕೂಡಲೇ ಪಾವತಿಸಬೇಕೆಂದು ಒತ್ತಾಯಿಸಿದರು. ಬೆಳೆಸಾಲ ಮನ್ನಾಗೆ ಆಗ್ರಹ: ಕೊರೊನಾ ರೈತರ ಬದುಕಿಗೆ ಹೊಡೆತ ನೀಡಿದ್ದು ಈಗ ಬಿತ್ತಲು ಬೀಜ, ಗೊಬ್ಬರ ಮತ್ತು ಮಕ್ಕಳ ಶಾಲೆ ಫೀಜ್ ಗಳಿಗಾಗಿ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಬ್ಯಾಂಕ್ ಸಾಲ ತುಂಬುವ ಪರಿಸ್ಥಿತಿಯಲ್ಲಿ ಇಲ್ಲ. ಕಾರಣ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿಯ ರೈತರ ಕಬ್ಬಿನ ಬೆಳೆ ಸಾಲ ಮನ್ನಾ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಬಿ. ಪಾಟೀಲ, ಬಿ.ಜಿ. ಹೊಸೂರ, ಈರಣ್ಣ ಕನಕರಡ್ಡಿ, ಎಲ್.ಟಿ. ಹುಚರಡ್ಡಿ, ಎಂ.ಬಿ. ನಾಡಗೌಡ, ರಾಮಕೃಷ್ಣ ಬುದ್ನಿ. ಕೆ.ಟಿ ಸಾರವಾಡ, ಕಲ್ಲಪ್ಪ ಕಂಕಣವಾಡಿ, ಶೇಖರ ಮುತ್ತಪ್ಪಗೋಳ, ಸದಾಶಿವ ಕಂಬಳಿ ಇದ್ದರು.