ಶಿವಮೊಗ್ಗ: ಚುನಾವಣೆಯನ್ನು ಎದುರಿಗಿಟ್ಟುಕೊಂಡು ರಾಜ್ಯ ಸರ್ಕಾರ ಲಿಂಗಾಯತ ಸಮಾಜಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವ ನಿರ್ಣಯ ಕೈಗೊಂಡಿರುವುದನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಲಿಂಗಾಯತ ಸಮಾಜಕ್ಕೆ ಮೀಸಲಾತಿ ನೀಡುವ ನಿರ್ಣಯ ಕಾಂಗ್ರೆಸ್‌ನ ಒಡೆದು ಆಳುವ ನೀತಿಯಾಗಿದೆ. ಚುನಾವಣೆಯನ್ನು ಮುಂದಿಟ್ಟುಕೊಂಡು ಸರ್ಕಾರ ರಾಜ್ಯದಲ್ಲಿನ ಲಿಂಗಾಯತ ಸಮಾಜಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವ ನಿರ್ಣಯ ಕೈಗೊಂಡಿದೆ. ನಿರ್ಣಯ ಕೈಗೊಳ್ಳುವ ಅಧಿಕಾರ ರಾಜಕಾರಣಿಗಳಿಗಿಲ್ಲ. ಕಾಂಗ್ರೆಸ್ ಹಿಂದೂ ಧರ್ಮವನ್ನು ಒಡೆಯುವ ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದರು.
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ವಿಷಯವನ್ನು ವೀರಶೈವ ಧರ್ಮಗುರುಗಳು ತೀವ್ರವಾಗಿ ವಿರೋಧಿಸುತ್ತಿದ್ದಾರೆ ಹಾಗೂ ದೇಶಾದ್ಯಂತ ವೀರಶೈವ- ಲಿಂಗಾಯತ ಸಮಾಜವನ್ನು ಪ್ರತಿನಿಧಿಸುವ ಅಖೀಲ ಭಾರತೀಯ ವೀರಶೈವ ಮಹಾಸಭಾವು ಇದನ್ನು ವಿರೋಧಿಸಿದೆ. ಬಸವೇಶ್ವರರ ಹೆಸರಿನಲ್ಲಿ ಧರ್ಮ ಒಡೆಯುವುದು ಯೋಗ್ಯವಲ್ಲವೆಂದು ಅನೇಕ ಮಠಾಧಿಪತಿಗಳು ವಿರೋಧಿಸಿದ್ದಾರೆ ಎಂದರು.
2013ರಲ್ಲಿ ಅಂದಿನ ಕಾಂಗ್ರೆಸ್‌ನ ಕೇಂದ್ರ ಸರ್ಕಾರ ಇದೇ ರೀತಿಯ ಪ್ರಸ್ತಾಪವನ್ನು ತಿರಸ್ಕರಿಸಿತ್ತು. ಅದೇ ಕಾಂಗ್ರೆಸ್ ಸರ್ಕಾರ ಈಗ ಕೇವಲ ಮತ ರಾಜಕಾರಣಕ್ಕಾಗಿ ಸ್ವತಂತ್ರ ಲಿಂಗಾಯತ ಧರ್ಮದ ನಿರ್ಣಯ ತೆಗೆದುಕೊಂಡಿದೆ. ಲಿಂಗಾಯತ ಸಮಾಜಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಿದರೆ ಮುಂದೆ ಇನ್ನೂ ಹಲವು ಸಮಾಜದವರು ಸ್ವತಂತ್ರ ಧರ್ಮದ ಬೇಡಿಕೆಯನ್ನಿಟ್ಟರೂ ಆಶ್ಚರ್ಯವಿಲ್ಲ. ಆಗ ಹಿಂದೂ ಸಮಾಜದ ಐಕ್ಯತೆ ಅಪಾಯಕ್ಕೊಳಗಾಗುತ್ತದೆ. ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ಆದ್ದರಿಂದ ಸರ್ಕಾರ ತೆಗೆದುಕೊಂಡ ನಿರ್ಣಯ ರದ್ದುಪಡಿಸಬೇಕೆಂದು ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ವಿಜಯ ರೇವಣಕರ್, ಯೋಗೇಶ್, ರತನ್, ಸಂಜಯ, ದಿನೇಶ್ ಚವ್ಹಾಣ್, ಶ್ರೀಪಾದ ರೇವಣಕರ್, ಬಾಲಸುಬ್ರಹ್ಮಣ್ಯ, ರಾಜು, ದರ್ಶನ್ ಇನ್ನಿತರರು ಇದ್ದರು.