ದಾವಣಗೆರೆ: ಭೂ ಸುಧಾರಣಾ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಗುರುವಾರ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಂಟಿ ಕ್ರಿಯಾ ಸಮಿತಿ ಸದಸ್ಯರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದೇಶ ಒಂದು ಕಡೆ ಆರ್ಥಿಕ ಬಿಕ್ಕಟ್ಟು, ಇನ್ನೊಂದೆಡೆ ಕೋವಿಡ್-19 ಸಂಕಷ್ಟ ಎದುರಿಸುತ್ತಿದೆ. ಸರ್ಕಾರ ಜನರ ಜೊತೆ ನಿಂತು ಜನತೆಯ ಹಾಗೂ ದೇಶದ ಆರ್ಥಿಕ ಸಂಕಷ್ಟ ಮತ್ತು ಆರೋಗ್ಯ ರಕ್ಷಣೆಗೆ ತೊಡಗಬೇಕಾದ ಸಂದರ್ಭದಲ್ಲಿ ಎಪಿಎಂಸಿ, ಭೂ ಸುಧಾರಣೆ, ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವಂತಹ ಜನ ವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಅನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾ ನಾಗರಿಕರುಗಳಿಗೆ ಉಚಿತ ಹಾಗೂ ಸುರಕ್ಷತಾ ಚಿಕಿತ್ಸೆ ದೊರೆಯುವಂತೆ ಕ್ರಮವಹಿಸಬೇಕು. ಆದರೆ, ಅದನ್ನು ಮರೆತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿದೇಶಿ ಕಂಪನಿಗಳಿಗೆ ಅನುಕೂಲ ಮಾಡಿಕೊಡುವಂತೆ ಹಲವಾರು ಕಾಯ್ದೆ ಗಳಿಗೆ ತಿದ್ದುಪಡಿ ತಂದಿರುವುದು ಪ್ರಜಾತಂತ್ರ ವಿರೋಧಿ ನಡೆ. ಕೂಡಲೇ ಸರ್ಕಾರ ಎಲ್ಲಾ ಕಾಯ್ದೆಗಳ ತಿದ್ದುಪಡಿ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕ ರಂಗದ ಕೈಗಾರಿಕೆಗಳು ಹಾಗೂ ಹಣಕಾಸು ವಲಯದ ಸಂಸ್ಥೆಗಳ ಖಾಸಗೀಕರಣವನ್ನು ಕೂಡಲೇ ನಿಲ್ಲಿಸಬೇಕು. ಭೂ ಹಾಗೂ ವ್ಯವಸಾಯ ಸಂಬಂಧಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020 ನ್ನು ವಾಪಾಸು ಪಡೆಯಬೇಕು. ಕೋವಿಡ್ ದಿಂದ ಜನಜೀವನ ದಿನದಿಂದ ದಿನಕ್ಕೆ ಅಸ್ತವ್ಯಸ್ತವಾಗುತ್ತಿದೆ. ಕೊರೊನಾದಿಂದ ಜನರ ರಕ್ಷಣೆ ಮತ್ತು ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆ ವ್ಯವಸ್ಥೆ ಮಾಡಬೇಕು. ದೇಶದ ಒಟ್ಟು ಆಂತರಿಕ ಉತ್ಪಾದನೆಯ ಶೇ. 3 ರಷ್ಠು ಅಂಶವನ್ನು ವೆಚ್ಚ ಮಾಡಲು ಕ್ರಮ ವಹಿಸಬೇಕು.ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲಾ ಕುಟುಂಬಗಳಿಗೆ ಮಾಸಿಕ 7,500 ರೂ. ನೆರವು ಘೋಷಿಸಬೇಕು. ಎಲ್ಲಾ ಕುಟುಂಬಗಳ ಸದಸ್ಯರಿಗೆ, ಮಾಸಿಕ ತಲಾ 10ಕಿಲೋ ಆಹಾರ ಸಾಮಗ್ರಿ, ಆರೋಗ್ಯ ಸುರಕ್ಷತಾ ಸಾಮಗ್ರಿಗಳ ಕಿಟ್ ಒದಗಿಸಬೇಕು. ಉದ್ಯೋಗ ಖಾತರಿ ಯೋಜನೆಯಡಿ ತಲಾ ಕುಟುಂಬಕ್ಕೆ ಕನಿಷ್ಠ 200 ದಿನಗಳ ಉದ್ಯೋಗ ನೀಡಬೇಕು. ಕೂಲಿ ಹಣವನ್ನು 600 ರೂಪಾಯಿಗೆ ಹೆಚ್ಚಿಸುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್. ಆನಂದರಾಜು ,ಇ. ಶ್ರೀನಿವಾಸ್, ಕೆ. ಗುಡ್ಡಪ್ಪ ಇತರರು ಇದ್ದರು.