Advertisement

ಕೈ ವಿರುದ್ಧ ಗುರುಕಹಳೆ

06:00 AM Mar 26, 2018 | |

ವಿಜಯಪುರ: ಪ್ರತ್ಯೇಕ ಧರ್ಮ ಮಾನ್ಯತೆಗೆ ಶಿಫಾರಸು ಮಾಡುವ ನಿರ್ಧಾರ ಕೈಗೊಂಡ ಕಾಂಗ್ರೆಸ್‌ ವಿರುದ್ಧ ವೀರಶೈವ ಮಠಾಧೀಶರು ಬಹಿರಂಗವಾಗಿ ರಣಕಹಳೆ ಮೊಳಗಿಸಿದ್ದಾರೆ.

Advertisement

ರಾಜಕೀಯ ಸ್ವಾರ್ಥಕ್ಕಾಗಿ, ತಮ್ಮ ಶಿಕ್ಷಣ ಸಂಸ್ಥೆಗಳ ಅಭ್ಯುದಯಕ್ಕಾಗಿ ಲಿಂಗಾಯತರಿಗೆ ಅಲ್ಪಸಂಖ್ಯಾತರ ಮಾನ್ಯತೆ ಎಂದು ಸುಳ್ಳು ಹೇಳಿ ಧರ್ಮ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಏಕಪಕ್ಷೀಯ ನಿರ್ಧಾರ ಕೈಗೊಂಡ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ. ಪಾಟೀಲ ಸೇರಿದಂತೆ ಅವರ ಸಂಪುಟದ ಐವರು ಕಾಂಗ್ರೆಸ್‌ ಸಚಿವರನ್ನು  ಚುನಾವಣೆಯಲ್ಲಿ ಸೋಲಿಸಿ, ಬಿಜೆಪಿಗೆ ಮತ ನೀಡಿ ಗೆಲ್ಲಿಸಲೇಬೇಕು ಎಂದು ಕರೆ ನೀಡಿದ್ದಾರೆ.

ರಂಭಾಪುರಿ ಪೀಠದ ಜಗದ್ಗುರು ಡಾ.ಪ್ರಸನ್ನ ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು, ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಹೊಸಪೇಟೆ- ಹಾಲಕೇರಿಯ ಹಾಗೂ ಶ್ರೀ ಶಿವಯೋಗ ಮಂದಿರದ ಅಧ್ಯಕ್ಷರೂ ಆದ ಡಾ.ಸಂಗನಬಸವ ಮಹಾಸ್ವಾಮಿಗಳ ಸಾರಥ್ಯದಲ್ಲಿ ಭಾನುವಾರ ನಗರದ ದರ್ಬಾರ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಸಮಾವೇಶದಲ್ಲಿ ವಿವಿಧ ಮಠಾಧೀಶರು, ಧರ್ಮ ಒಡೆಯುವ ಕೆಲಸ ಮಾಡುತ್ತಿರುವ ರಾಜಕೀಯ ನಾಯಕರಿಗೆ ತಕ್ಕ ಪಾಠ ಕಲಿಸಬೇಕೆಂದು ಕರೆ ನೀಡಿದರು. ಇಂತಹ ಸಂದರ್ಭದಲ್ಲಿ ಮಠಾಧಿಧೀಶರೂ ರಾಜಕೀಯ ಮಾಡುವುದು ಅನಿವಾರ್ಯವಾಗಿದೆ ಎಂದರು.

ಶಿಕ್ಷಣ ಸಂಸ್ಥೆ ಲಾಭಕ್ಕೆ ಧರ್ಮ ಇಬ್ಭಾಗ:
ರಂಭಾಪುರಿ ಪೀಠದ ಜಗದ್ಗುರು ಡಾ.ಪ್ರಸನ್ನ ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಮಾನ್ಯತೆ ನೀಡುವುದಾಗಿ ಲಕ್ಷ ಲಕ್ಷ ಅಮಾಯಕ ಜನರನ್ನು ಸಮಾವೇಶಕ್ಕೆ ಕರೆ ತಂದ ಕಾಂಗ್ರೆಸ್‌ನ ಎಂ.ಬಿ. ಪಾಟೀಲ ಹಾಗೂ ಕೆಲವು ಸಚಿವರು ಪ್ರತ್ಯೇಕ ಧರ್ಮ ಮಾಡುವುದಾಗಿ ಹೇಳಿದರು. ಆದರೆ ಇದೀಗ ಲಿಂಗಾಯತರಿಗೆ ಮೀಸಲು ಸೌಲಭ್ಯ ಕೊಡಿಸದೇ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಮೀಸಲು ಸೌಲಭ್ಯ ಪಡೆದು ಧರ್ಮದ ಜನರಿಗೆ ವಂಚನೆ ಮಾಡಿದ್ದಾರೆ. ನಾವು ನೀಡಿದ ಐತಿಹಾಸಿಕ ದಾಖಲೆಗಳನ್ನು ಪರಿಗಣಿಸದೆ ನ್ಯಾ.ನಾಗಮೋಹನದಾಸ ಸಮಿತಿ ಏಕಪಕ್ಷೀಯವಾಗಿ ಸರ್ಕಾರಿ ಪ್ರಾಯೋಜಿತ ವರದಿ ನೀಡಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಂಪುಟ ಐದಾರು ಸಚಿವರು ಪಂಚಪೀಠಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದರು.

ಸಚಿವ ಪಾಟೀಲರನ್ನು ಸೋಲಿಸಿ
ವೀರಶೈವ ಲಿಂಗಾಯತ ಧರ್ಮದಲ್ಲಿ “ಹಸ್ತ’ಕ್ಷೇಪ ಮಾಡಿರುವ ಕಾಂಗ್ರೆಸ್‌ ಸೋಲಿಸಿ ಬಿಜೆಪಿಗೆ ಮತ ಹಾಕುವ ಮೂಲಕ ತಕ್ಕ ಪಾಠ ಕಲಿಸಬೇಕಿದೆ. ಬಂಥನಾಳ ಶ್ರೀಗಳು ಹುಟ್ಟದಿದ್ದರೆ ವಿಜಯಪುರ ಜಿಲ್ಲೆ ಬಿಹಾರ ಆಗುತ್ತಿತ್ತು. ಇದೀಗ ಅವರು ನೆಟ್ಟು ಬೆಳೆಸಿದ ಬಿಎಲ್‌ಡಿಇ ಸಂಸ್ಥೆಯಿಂದ ಬೆಳೆದು ಸಮಾಜ ಹಾಳು ಮಾಡುವ ಕೆಲಸ ನಡೆಯುತ್ತಿದೆ. ಹೀಗಾಗಿ ಸಚಿವ ಎಂ.ಬಿ. ಪಾಟೀಲ ಸೇರಿ ಧರ್ಮ ಒಡೆಯಲು ಮುಂದಾಗಿರುವ ಸಚಿವರನ್ನು ಸೋಲಿಸಿ ಎಂದು ಎಮ್ಮಿಗನೂರಿನ ವಾಮದೇವ ಮಹಾಂತ ಶ್ರೀಗಳು ಬಹಿರಂಗ ಕರೆ ನೀಡಿದರು.

Advertisement

ಧರ್ಮ ವಿಭಜಕರಿಗೆ ತಟ್ಟಲಿದೆ ಶಾಪ
ಲಿಂಗಾಯತ ಧರ್ಮ ಒಡೆಯಲು ಮುಂದಾಗಿರುವ ಸಚಿವ ಎಂ.ಬಿ. ಪಾಟೀಲ ಶಾಪಕ್ಕೆ ಗುರಿಯಾಗಲಿದ್ದು, ಬಬಲೇಶ್ವರದ ಜನರು ರಾಜಕೀಯವಾಗಿ ತಕ್ಕ ಪಾಠ ಕಲಿಸಲಿದ್ದಾರೆ. ಬಿಎಲ್‌ಡಿಇ ಸಂಸ್ಥೆ ಕಟ್ಟುವಲ್ಲಿ ಶಾಂತವೀರ ಶ್ರೀಗಳ ಕೊಡುಗೆ ಇದ್ದರೂ ಸ್ಮರಿಸುವ ಕೆಲಸ ಮಾಡದೇ ಕೃತಘ್ನರಾಗಿರುವ ಜನರಿಗೆ ತಕ್ಕಪಾಠ ಕಲಿಸಲು ಪಣ ತೊಡಿ ಎಂದು ಬಬಲೇಶ್ವರದ ಡಾ.ಮಹದೇವ ಶಿವಾಚಾರ್ಯ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.

ಜಾಮದಾರ ವಿರುದ್ಧ ಮೊಕದ್ದಮೆ
ಪಂಚಪೀಠಗಳ ಅವಹೇಳನ ಮಾಡುತ್ತಿರುವ ನಿವೃತ್ತ ಐಎಎಸ್‌ ಅಧಿಕಾರಿ ಡಾ.ಎಸ್‌.ಎಂ. ಜಾಮದಾರ ಹಾಗೂ ಇತರರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ರಂಭಾಪುರಿ ಪೀಠದ ಜಗದ್ಗುರುಗಳು ಎಚ್ಚರಿಕೆ ನೀಡಿದರು.

ವೀರಶೈವರ ಹೋರಾಟ ಅವರ ಹಕ್ಕು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಆ ಹಕ್ಕಿದೆ. ಆ ಬಗ್ಗೆ ಯಾವುದೇ ಪ್ರಶ್ನೆ ಮಾಡುವುದಿಲ್ಲ. ನಾವು ಲಿಂಗಾಯತ ಮಹಾಸಭಾದವರು ನಮ್ಮ ಕೆಲಸ ನಾವು ಮಾಡುತ್ತೇವೆ ಅವರ ಕೆಲಸ ಅವರು ಮಾಡಲಿ.
– ಡಾ.ಎಂ.ಬಿ.ಪಾಟೀಲ, ಜಲ ಸಂಪನ್ಮೂಲ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next