ನೆಲಮಂಗಲ: ದೇಶವನ್ನು ಪರಕೀಯರ ದಬ್ಟಾಳಿಕೆಯಿಂದ ಪಾರು ಮಾಡಿದ ಮಹಾತ್ಮ ಗಾಂಧಿಯವರ ನೆನಪಿನ ಗ್ರಾಮದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲು ಮುಂದಾದ ಅಧಿಕಾರಿಗಳನ್ನು ಸ್ಥಳೀಯ ಮುಖಂಡರು ತಡೆಯುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಧರಣಿ ನಡೆಸಿದರು. ತಾಲೂಕಿನ ಯಂಟಗಾನಹಳ್ಳಿ ಗ್ರಾಪಂನ ಗಾಂಧಿಗ್ರಾಮದಲ್ಲಿ ಉತ್ತಮ ರಸ್ತೆಯಿಲ್ಲದೆ, ಮೂಲ ಸೌಕರ್ಯಗಳಿಲ್ಲದೆ ಬೇಸತ್ತು ಹೋಗಿರುವ ಜನರು ಸೌಲಭ್ಯ ನೀಡುವಂತೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದರು.
ಕಳೆದ 4 ವರ್ಷಗಳ ಹಿಂದೆ ಸರ್ಕಾರದಿಂದ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆಗೆ ಮುಂದಾದ ಅಧಿಕಾರಿಗಳು ರಸ್ತೆಗೆ ಜಲ್ಲಿ ಸುರಿದು ಹಣ ಬಿಡುಗಡೆಯಾಗಿಲ್ಲ ಎಂದು ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ್ದಾರೆ. ಪಂಚಾಯತಿ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಯವರಿಗೆ ಗ್ರಾಮದ ಜನರು ತಿಳಿಸಿದರೆ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಗ್ರಾಮದ ಜನರು ಹಾಗೂ ಮಕ್ಕಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ: ಇನ್ನೂ ಗಾಂಧಿಗ್ರಾಮಕ್ಕೆ ಉತ್ತಮ ರಸ್ತೆಯಿಲ್ಲದ ಕಾರಣ ಆ್ಯಂಬುಲೆನ್ಸ್ ವಾಹನ ಬರಲು ಸಾಧ್ಯವಾಗದೇ ಜನರು ಪರದಾಡುವಂತಾಗಿದೆ., ಇನ್ನೂ ನಗರಗಳಿಗೆ ಬರುವ ಗ್ರಾಮದ ಜನರು ಬಹಳಷ್ಠು ಸಮಸ್ಯೆ ಅನುಭಸುತಿದ್ದು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಗ್ರಾಪಂ ಸದಸ್ಯರ ನೇತೃತ್ವದಲ್ಲಿ ರಸ್ತೆ ದುರಸ್ತಿಗೆ ಮುಂದಾದರು. ಕಾಮಗಾರಿ ನಿಲ್ಲಿಸಲು ಜಿಪಂ ಮಾಜಿ ಸದಸ್ಯ ಚೆಲುವ ರಾಜು ಹಾಗೂ ಸ್ಥಳೀಯ ಮುಖಂಡರು ಮುಂದಾಗಿದ್ದಾರೆ ಎಂದು ಗ್ರಾಪಂ ಸದಸ್ಯ ಪ್ರಕಾಶ್ ಹಾಗೂ ಗ್ರಾಮದ ಜನರು ಆರೋಪಿಸಿದ್ದಾರೆ.
ಅನುಮೋದನೆಗೆ ಪ್ರಸ್ತಾವನೆ: ತಾಲೂಕಿನ ಯಂಟಗಾನಹಳ್ಳಿಯ ಗ್ರಾಪಂ ಎನ್‌ಎಚ್ 75 ಹೆದ್ದಾರಿಯಿಂದ ಗಾಂಧಿ ಗ್ರಾಮ ಮುಖಾಂತರ ಹೊನ್ನ ಸಂದ್ರ ರಸ್ತೆ ಕಾಮಗಾರಿಗೆ 1.78 ಲಕ್ಷ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಗ್ರಾಪಂ ಸದಸ್ಯ ಅಧಿಕಾರಿಗಳ ಅನುಮತಿಯಿಲ್ಲದೆ ರಸ್ತೆ ಕಾಮಗಾರಿಗೆ ಮುಂದಾಗಿದ್ದಾರೆ ಎಂದು ಜಿಪಂ ಸದಸ್ಯೆ ಪುಷ್ಪಾ ಸಂಪತ್ ತಿಳಿಸಿದರು. ಅನೇಕ ವರ್ಷಗಳಿಂದ ಉತ್ತಮ ರಸ್ತೆಯಿಲ್ಲದೆ ತೊಂದರೆ ಅನುಭಸುತ್ತಿದ್ದ ಜನರಿಗೆ ಆಶಾಕಿರಣದಂತೆ 25 ಲಕ್ಷ ಖರ್ಚಿನಲ್ಲಿ ರಸ್ತೆ ಮಾಡಲು ಮುಂದಾದರು.
ರಾಜಕೀಯದ ದುರುದ್ದೇಶದಿಂದ ಕೆಲ ಮುಖಂಡರು ಕಾಮಗಾರಿ ತಡೆಯುತ್ತಿರುವುದು ದುರಂತದ ಸಂಗತಿ ಎಂದು ಗ್ರಾಮದ ಲಕ್ಷ್ಮಮ್ಮ ಬೇಸರ ವ್ಯಕ್ತಪಡಿಸಿದರು. ಸರ್ಕಾರಿ ರಸ್ತೆಯ ಕಾಮಗಾರಿ ಮಾಡುವ ಮುಂಚೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ನಂತರ ರಸ್ತೆ ಅಭಿವೃದ್ಧಿ ಮಾಡಬೇಕು. ಆದರೆ ಗಾಂಧಿ ಗ್ರಾಮದ ರಸ್ತೆ ಮಾಡಲು ಅನುಮತಿ ನೀಡಿಲ್ಲ ಪರಿಶೀಲನೆ ಮಾಡಲಾಗುತ್ತದೆ ಎಂದು ಜಿಪಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಥನ್ ಹೇಳಿದರು.