Advertisement

ತೆರಿಗೆ ಪಾವತಿಸದ ಸೋಲಾರ್‌ ಕಂಪನಿಗಳ ವಿರುದ್ದ ಆಕ್ರೋಶ

05:05 PM Dec 15, 2018 | Team Udayavani |

ನಾಯಕನಹಟ್ಟಿ: ತೆರಿಗೆ ಪಾವತಿಸದ ಕಾರಣ ಸಮೀಪದ ಎನ್‌. ದೇವರಹಳ್ಳಿ ಗ್ರಾಪಂ ಸದಸ್ಯರು, ಗ್ರಾಮಸ್ಥರು ಸೋಲಾರ್‌ ಕಂಪನಿಗಳ ಬಳಿ ಅಡುಗೆ ತಯಾರಿಸಿ ಅನಿರ್ದಿಷ್ಟಾವಧಿ ಧರಣಿಯನ್ನು ಶುಕ್ರವಾರದಿಂದ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ದಿವಾಕರರೆಡ್ಡಿ, ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ನಾಲ್ಕು ಸೋಲಾರ್‌ ಕಂಪನಿಗಳಿದ್ದು, ಕಳೆದ ನಾಲ್ಕು ವರ್ಷಗಳಿಂದ ಒಂದು ಪೈಸೆಯನ್ನೂ ಸಹ ಪಂಚಾಯತ್‌ಗೆ ತೆರಿಗೆ ಪಾವತಿಸಿಲ್ಲ. ಪಂಚಾಯ್ತಿಯಿಂದ ಆರು ಬಾರಿ ತಿಳಿವಳಿಕೆ ನೋಟಿಸ್‌ ನೀಡಿದರೂ ಪ್ರತಿಕ್ರಿಯಿಸದ ಕಾರಣ ಇಂದಿನಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಕಂಪನಿ ಬಳಿ ಆರಂಭಿಸಿದ್ದೇವೆ ಎಂದರು.

Advertisement

ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ತೆರಿಗೆ ತುಂಬುವವರೆಗೂ ಇಲ್ಲಿಯೇ ಇರುತ್ತೇವೆ. ಅಡುಗೆ ಮಾಡಲು ಎಲ್ಲ ಪರಿಕರಗಳನ್ನು ತಂದು ಇಲ್ಲಿಯೇ ಅಡುಗೆ ತಯಾರಿಸಿಕೊಂಡು ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.  ಇಲ್ಲಿ ಸ್ಯಾಜೆಟೆರಿ, ಗ್ರೀನ್‌ಕೋ, ಎಂಪ್ಲಸ್‌, ಪೋರ್ಟಾನ್‌ ಎಂಬ ನಾಲ್ಕು ಕಂಪನಿಗಳಿದ್ದು, ನೂರಾರು ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಿಕೊಳ್ಳುತ್ತಿವೆ. ಇವರಿಗೆ ಪಂಚಾಯ್ತಿ ನೋಟಿಸ್‌ ಕಾಲ ಕಸವಾಗಿದೆ. ಯಾವುದೇ ಉತ್ತರವನ್ನು ಇವರು ನೀಡಿಲ್ಲ. ಪ್ರತಿಬಾರಿಯೂ ನಾಲ್ಕೈದು ದಿನದಲ್ಲಿ ಪಾವತಿಸುತ್ತೇವೆ ಎಂದು ಸಬೂಬು ಹೇಳುತ್ತಾರೆ. ಈ ಬಾರಿ ಸರ್ಕಾರ ನಿಗದಿ ಪಡಿಸಿರುವ ತೆರಿಗೆಯನ್ನು ಪಂಚಾಯಿತಿಗೆ ಪಾವತಿಸುವವರೆಗೂ ಧರಣಿ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದರು.

ಎನ್‌.ದೇವರಹಳ್ಳಿ ಗ್ರಾಪಂ ವ್ಯಾಪ್ತಿಗೊಳಪಡುವ ವರವು ಕಾವಲಿನಲ್ಲಿ 993 ಎಕರೆ ವಿಸ್ತೀರ್ಣದಲ್ಲಿ ನಾಲ್ಕು ಸೋಲಾರ್‌
ಕಂಪನಿಗಳು ವಿದ್ಯುತ್‌ ಉತ್ಪಾದಿಸುತ್ತಿವೆ. ಸರ್ಕಾರದ ನಿಯಮಾವಳಿಯಂತೆ ನಿಗದಿತ ತೆರಿಗೆ ಪಾವತಿಸಿಲ್ಲ. ಕಂಪನಿಗಳು ತಮ್ಮ ಲಾಭಾಂಶದಲ್ಲಿ ಹಳ್ಳಿಗಳ ಮೂಲ ಸೌಕರ್ಯ, ಶಾಲೆಗಳ ಅಭಿವೃದ್ಧಿಗೆ ಸಹಕರಿಸಬೇಕು. ಈ ಸೋಲಾರ್‌ ಕಂಪನಿಯವರು ತೆರಿಗೆ ಪಾವತಿಸದೇ ವಂಚಿಸುತ್ತಿದ್ದಾರೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಪಂ ಉಪಾಧ್ಯಕ್ಷ ದಾದಯ್ಯ ಆರೋಪಿಸಿದರು. 

ಸ್ಯಾಜೆಟರಿ ಕಂಪನಿಯ ವ್ಯವಸ್ಥಾಪಕ ಸೂರ್ಯನಾರಾಯಣ ಮಾತನಾಡಿ, ನಾಲ್ಕು ಕಂಪನಿಗಳಿಂದ ಒಟ್ಟು ಒಂದು ದಿನಕ್ಕೆ 165 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಮೇಲಿನ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ನಾಲ್ಕೈದು ದಿನಗಳಲ್ಲಿ ಪಂಚಾಯತಿಗೆ ಕರ ಪಾವತಿಸಲಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next