ವಿಜಯಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಅಖೀಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಭಾರತ ರಕ್ಷಿಸಿ ಎಂಬ ಘೋಷಣೆಯೊಂದಿಗೆ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಸಿ ಕಲಾದಗಿ ಮಾತನಾಡಿ, ಕೋವಿಡ್-19 ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಪರಿಸ್ಥಿತಿ ನೆಪದಲ್ಲಿ ಕೇಂದ್ರ-ರಾಜ್ಯ ಸರಕಾರ ಸಮಾಜದ ಎಲ್ಲ ವರ್ಗಗಳ ಮೇಲೆ ವಿವಿಧ ರೀತಿಯಲ್ಲಿ ದಾಳಿ ನಡೆಸಲು ಮುಂದಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಾರಿಕರಣ, ಖಾಸಗಿಕರಣ, ಕೋಮುವಾದೀಕರಣ ಜಾರಿಗೊಳಿಸುಲು ಹೊಸ ಶಿಕ್ಷಣ ನೀತಿ ಕೇಂದ್ರ ಸರಕಾರ ಘೋಷಿಸಿದೆ. ನರೇಗಾ ಯೋಜನೆಗೆ ಬಜೆಟ್ ಅನುಧಾನ ಹೆಚ್ಚಿಸಬೇಕು. ವಾರ್ಷಿಕ 200 ದಿನ ಉದ್ಯೋಗ ನೀಡುವಂಥ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತಿದ್ದರೂ ಸರ್ಕಾರಗಳು ಕಣ್ತೆರೆಯುತ್ತಿಲ್ಲ ಎಂದು ದೂರಿದರು.
ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ಕೋವಿಡ್ ಸೋಂಕು ರೋಗದ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಕೃಷಿ ಹಾಗೂ ಕಾರ್ಮಿಕ ನೀತಿ ಹೊಸಕಿ ಹಾಕುತ್ತಿದೆ. ಕಾರ್ಖಾನೆಗಳ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆ, ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ನಿಷೇಧ) ಕಾಯ್ದೆ ಹೀಗೆ ವಿವಿಧ ಕಾಯ್ದೆಗಳನ್ನು ಬಂಡವಾಳ ಶಾಹಿ ವ್ಯವಸ್ಥೆಗೆ ಅನುಕೂಲ ಕಲ್ಪಿಸುವ ರೀತಿಯಲ್ಲಿ ತಿದ್ದುಪಡಿ ಮಾಡಿದೆ ಎಂದು ಹರಿಹಾಯ್ದರು.
ಎಐಟಿಯುಸಿ ಜಿಲ್ಲಾ ಸಂಚಾಲಕ ಸಿ.ಎ. ಗಂಟೆಪ್ಪಗೋಳ ಮಾತನಾಡಿ, ಬೃಹತ್ ಕಾರ್ಪೊರೇಟ್ ಉದ್ಯಮಿಗಳ ಪರ ವಕ್ತಾರನಾಗಿರುವ ಕೇಂದ್ರ ಸರಕಾರ ಬಿಜೆಪಿ ಆಳ್ವಿಕೆಯ ರಾಜ್ಯ ಸರಕಾರಗಳ ಮೂಲಕ ಪ್ರಜಾಪ್ರಭುತ್ವ ವಿರೋ ಧಿಯಾಗಿ ಶಾಸನ ಸಭೆ ಉಪೇಕ್ಷಿಸಿ ಸುಗ್ರಿವಾಜ್ಞೆಯಿಂದ ಕೃಷಿ ಹಾಗೂ ಕಾರ್ಮಿಕ ವಿರೋ ಧಿ ಕಾರ್ಮಿಕ ಕಾನೂನುಗಳ ಬದಲಾವಣೆಗೆ ಮುಂದಾಗಿದೆ ಎಂದು ದೂರಿದರು.
ರೈತ ಕೃಷಿ ಕಾರ್ಮಿಕ ಸಂಘಟನೆ ರಾಜ್ಯ ಉಪಾಧ್ಯಕ್ಷ ಬಿ.ಭಗವಾನರೆಡ್ಡಿ ಮಾತನಾಡಿ, ಕೇಂದ್ರ ಸರಕಾರ ಭೂ ಸಂಬಂಧಿ ಕಾನೂನಗಳು, ಎಪಿಎಂಸಿ ಕಾಯ್ದೆ, ಅಗತ್ಯ ಸಾಮಗ್ರಿ ಕಾಯ್ದೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರೀವಾಜ್ಞೆ ಹಿಂಪಡೆಯಬೇಕು. ರಕ್ಷಣಾ ವಲಯ, ರಕ್ಷಣಾ ಉಪಕರಣಗಳ ಕಾರ್ಖಾನೆಗಳು, ಸಾರಿಗೆ, ರೈಲ್ವೆ, ಜೀವ ವಿಮಾ ನಿಗಮ, ಸಾಮಾನ್ಯ ವಿಮಾ ನಿಗಮ, ಬ್ಯಾಂಕ್ ಗಳು, ಬಂದರು, ವಿಮಾನ ನಿಲ್ದಾಣಗಳು ಮತ್ತಿತರ ಸಾರ್ವಜನಿಕ ಉದ್ದಿಮೆ ಖಾಸಗೀಕರಣಕ್ಕಾಗಿ ನಿರ್ಧಾರದಿಂದ ಹಿಂದೆ ಸರಿಯಬೇಕು. ದೇಶದ ಗಂಭೀರ ಸಮಸ್ಯೆ ಕುರಿತು ಚರ್ಚಿಸಲು ಕೂಡಲೇ ಸಂಸತ್ ಅಧಿವೇಶನ ಕರೆಯುವಂತೆ ಆಗ್ರಹಿಸಿದರು.
ಸಿಐಎಫ್‌ಟಿನ ಜಿಲ್ಲಾ ಸಂಚಾಲಕ ಪ್ರಭುಗೌಡ ಪಾಟೀಲ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಜನವಾದಿ ಮಹಿಳಾ ಸಂಘಟನೆಯ ಸುರೇಖಾ ರಜಪೂತ, ಬಾಳು ಜೇವೂರ ಮಾತನಾಡಿದರು. ರಾಜು, ಶಿವಾನಂದ, ನಾಗಪ್ಪ, ಸಂಜೀವ, ಶಂಕರ, ಸುನೀಲ, ಮಂಜುನಾಥ, ಕಾಶೀಬಾಯಿ, ಮಹಾದೇವಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.