ಶ್ರೀರಂಗಪಟ್ಟಣ: ಲೋಕೋಪಯೋಗಿ ಇಲಾಖೆ ನಡೆಸಿರುವ ಬಹುತೇಕ ಕಾಮಗಾರಿಗಳು ಕಳಪೆಯಿಂದ ಕೂಡಿವೆ.
ಶ್ರೀರಂಗಪಟ್ಟಣ- ರಾಂಪುರ ಸಂಪರ್ಕ ರಸ್ತೆ ಅತಿಕ್ರಮವಾಗಿರುವ ಬಗ್ಗೆ ಹದಿನೈದು ದಿನಗಳ ಹಿಂದೆಯೇ ದೂರು ನೀಡಿದ್ದರೂ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ ಎಂದು ರೈತ ಸಂಘದ ಕಾರ್ಯಕರ್ತರು ಆರೋಪಿಸಿ ಲೋಕೋಪಯೋಗಿ ಇಲಾಖೆ ಎಇಇ ಮಹೇಶ್ ಅವರನ್ನು ತರಾಟೆ ತೆಗೆದುಕೊಂಡರು.
ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಪಾಂಡು ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆಗೆ ತೆರಳಿದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೀವು ಇಲ್ಲಿಗೆ ಬಂದ ನಂತರ ಇಲಾಖೆಯಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಕಚೇರಿಯನ್ನು ಖಾಸಗಿ ಮನೆಯಂತೆ ಮಾಡಿಕೊಂಡಿದ್ದಾರೆ. ಸರ್ಕಾರಿ ರಸ್ತೆಗೆ ಬೇಲಿ ನಿರ್ಮಿಸಿಕೊಂಡಿರುವ ಕುರಿತು ಒಂದು ವಾರದ ಹಿಂದೆಯೇ ಇಲಾಖೆ ಅಧಿಕಾರಿಗಳ ಗಮನ ಸೆಳೆದಿದ್ದೇವೆ. ಆದರೂ ಇತ್ತ ಗಮನ ಹರಿಸುತ್ತಿಲ್ಲ. ಇದರಿಂದ ಎತ್ತಿನಗಾಡಿಗಳು, ಆಟೋಗಳು, ಸಾರ್ವಜನಿಕರು ಓಡಾಡಲು ತೊಂದರೆಯಾಗಿದೆ. ಅಧಿಕಾರಿಗಳು ಖಾಸಗಿ ವ್ಯಕ್ತಿಗ ಳ ಮುಲಾಜಿನಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗಾಗಿ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಆದಷ್ಟು ಬೇಗ ಅಕ್ರಮವಾಗಿ ಅಳವಡಿಸಿರುವ ತಂತಿ ಬೇಲಿಯನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಲೋಕೋಪಯೋಗಿ ಇಲಾಖೆ ವಿರುದ್ಧ ಜಿಲ್ಲಾಧಿಕಾರಿ ಮತ್ತು ಸರ್ಕಾರಕ್ಕೆ ನಾವು ದೂರು ನೀಡುತ್ತೇವೆ ಎಂದು ಹೇಳಿದರು.
ಮನವಿ ಆಲಿಸಿ ಮಾತನಾಡಿದ ಎಂಜಿನಿಯರ್ ಮಹೇಶ್, ಸಮಸ್ಯೆ ಪರಿಶೀಲನೆಗೆ ಕಿರಿಯ ಎಂಜಿನಿಯರ್ ಅವರನ್ನು ಸ್ಥಳಕ್ಕೆ ಕಳುಹಿಸುತ್ತೇನೆ. ವರದಿ ಪಡೆದು ತಂತಿ ಬೇಲಿ ತೆರವುಗೊಳಿಸಲು ಕ್ರಮ ವಹಿಸುತ್ತೇನೆ ಎಂದರು. ಮಹದೇವಪುರ ನಾಗೇಂದ್ರ, ರೈತ ಸಂಘದ ಕಾರ್ಯಾಧ್ಯಕ್ಷ ಬಿ.ಎಸ್. ರಮೇಶ್, ಪ್ರಧಾನ ಕಾರ್ಯದರ್ಶಿ ಶಂಕರೇಗೌಡ ಇತರರಿದ್ದರು.