ಹುನಗುಂದ: ತಾಲೂಕಿನ್ಯಾದಂತ ಹಾಡಹಗಲೇ ರಾಜರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ನಾಮ್ ಕೆ ವಾಸ್ತೆ ಪ್ರಕರಣ ದಾಖಲಿಸಿದ್ದನ್ನು ಕೇಳಿದ ತಾಪಂ ಸದಸ್ಯರು ಗರಂ ಆಗಿ ಅಬಕಾರಿ ಸಹಾಯಕ ನಿರೀಕ್ಷಕಿ ಗೌರಿ ಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡರು. ಪಟ್ಟಣದ ತಾಪಂ ಸಭಾ ಭವನದಲ್ಲಿ ಅಧ್ಯಕ್ಷ ಅನ್ನದಾನೇಶ್ವರ ನಾಡಗೌಡ್ರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸದಸ್ಯರು ಧ್ವನಿಯೆತ್ತಿದರು.
ಪ್ರತಿದಿನ ಹಾಡಹಗಲೇ ಕೂಡಲಸಂಗಮ ಕ್ರಾಸ್ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರೂ ಅದನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಕೇಳುತ್ತಿಲ್ಲ. ಪಟ್ಟಣದ ಮದ್ಯ ಮಾರಾಟ ಮಳಿಗೆಗಳಲ್ಲಿ ಸಮಯ ಪಾಲನೆಯಿಲ್ಲದೇ ಅಬಕಾರಿ ಇಲಾಖೆ ನೀತಿ ನಿಯಮ ಉಲ್ಲಂಘಿಸಿ ರಾತ್ರಿ 11 ಗಂಟೆವರೆಗೆ ಮದ್ಯದಂಗಡಿ ತೆರೆದಿರಲಾಗುತ್ತಿದೆ. ಪ್ರಮುಖ ಡಾಬಾ ಮತ್ತು ಹೋಟೆಲ್‌ಗಳಲ್ಲಿ ಮದ್ಯ ಸರಬರಾಜು ಆಗುತ್ತಿದ್ದರೂ ಕೇಳುತ್ತಿಲ್ಲ. ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಕೇಳಿದರು. ಆಗ ಅಬಕಾರಿ ಇಲಾಖೆ ಅಧಿ ಕಾರಿ ನಾವು ಹೋದಾಗ ಇರುವುದಿಲ್ಲವೆಂದು ಪ್ರತಿಕ್ರಿಯೆ ನೀಡಿದರು. ಇದಕ್ಕೆ ಆಕ್ಷೇಪಿಸಿದ ತಾಪಂ ಸದಸ್ಯ ಚಂದಪ್ಪ ಮಾದರ ಸಂಗಮ ಕ್ರಾಸ್‌ನಲ್ಲಿ ರಾಜರೋಷವಾಗಿ ಮಾರಾಟ ಮಾಡುತ್ತಿದ್ದಾರೆ. ಬನ್ನಿ ತೋರಿಸ್ತೀನಿ ಎಂದರು. ಆಗ ಅಧಿಕಾರಿ ಶೀಘ್ರ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಕಳೆದ ಸಾಮಾನ್ಯ ಸಭೆಯಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದ್ದು, ಕೊಳಚೆ ಪ್ರದೇಶ ಮತ್ತು ಗ್ರಾಮದ ಪ್ರಮುಖ ಚರಂಡಿ ಶುಚಿಗೊಳಿಸಿ ಪೌಡರ್ ಸಿಂಪಡಿಸುವಂತೆ ಹೇಳಿದ್ದರೂ ಇಲ್ಲಿವರೆಗೆ ಯಾವುದೇ ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಪ್ರವಾಹ ಬಂದು ಹೋದ ಗ್ರಾಮಗಳಲ್ಲಿ ಸೊಳ್ಳೆ ಕಾಟ ಮಿತಿಮೀರಿದ್ದು ಅಲ್ಲಿ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಡಾ| ಪ್ರಶಾಂತ ತುಂಬಗಿ ಅವರನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಳ್ಳಲಾಯಿತು. ಇದಕ್ಕೆ ತುಂಬಗಿ ಸಮಜಾಯಿಸಲು ಮುಂದಾದಾಗ ಮೊದಲು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಚಿಕೂನ್ ಗುನ್ಯಾ, ಡೆಂಘೀ ಬರದಂತೆ ಕ್ರಮ ಕೈಗೊಳ್ಳಿ ಎಂದರು.
ಇದನ್ನೂ ಓದಿ:ಕಾಡಾ ಎಂಜಿನಿಯರ್ ಲೆಕ್ಕವೇ ಬುಡಮೇಲು; ಹಣ ಉಳಿಸಿಕೊಟ್ಟ ಗುತ್ತಿಗೆದಾರರು
ಶಿಕ್ಷಣ ಇಲಾಖೆ ಅಧಿ ಕಾರಿ ಐ.ಎಚ್. ಅಂಗಡಿ ಸಭೆಗೆ ಮಾಹಿತಿ ನೀಡುವಾಗ ಶಾಲೆಯಲ್ಲಿ ಶೌಚಾಲಯ, ಶಾಲಾ ಕಟ್ಟಡ ಶಿಥಿಲಗೊಂಡಿರುವ ಸಂಖ್ಯೆ ಹೆಚ್ಚಿರುವುದನ್ನು ಕೇಳಿದ ತಾಪಂ ಸದಸ್ಯ ಅಮೀನಪ್ಪ ಸಂ ಗವಾಡ ಮರಳಿ ಶಾಲೆ ಆರಂಭಗೊಳ್ಳುವ ಮುನ್ನವೇ ಶಾಲಾ ಕಟ್ಟಡ ದುರಸ್ತಿಗೊಳಿಸಿ. ಸಂಪೂರ್ಣ ಶಿಥಿಲಗೊಂಡ ಶಾಲಾ ಕಟ್ಟಡ ಮರು ನಿರ್ಮಾಣಕ್ಕೆ ಆದ್ಯತೆ ನೀಡಿ ಎಂದರು. ನೀವು ಬಿಇಒ ಮೂಲಕ ಪ್ರತಿಯೊಂದು ಶಾಲೆಗಳ ಮುಖ್ಯೋಪಾಧ್ಯಾಯರು, ಆಯಾ ಗ್ರಾಪಂಗಳಿಗೆ ಅರ್ಜಿ ಸಲ್ಲಿಸಿ. ಸಣ್ಣ ಪುಟ್ಟ ರಿಪೇರಿ ಇದ್ದರೆ ಅವುಗಳನ್ನು ಮಾಡಿಸಿ ಮತ್ತು ಶೌಚಾಲಯ ಸ್ವತ್ಛಗೊಳಿಸುವ ಕಾರ್ಯ ಮಾಡಿಸಿಕೊಳ್ಳಿ ಎಂದು ತಾಪಂ ಅಧ್ಯಕ್ಷ ಅನ್ನದಾನೇಶ್ವರ ನಾಡಗೌಡ್ರ ಹೇಳಿದರು.
ನಂತರ ಕೃಷಿ, ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಗೆ ವರದಿ ನೀಡಿದರು. ಈ ವೇಳೆ ಇಒ ಎಂ.ಎಂ ತುಂಬರಮಟ್ಟಿ, ಉಪಾಧ್ಯಕ್ಷೆ ಉಮಾದೇವಿ ಗೌಡರ, ಸದಸ್ಯರಾದ ಶೋಭಾ ಭದ್ರಣ್ಣವರ, ಸಹನಾ ಗದ್ದಿ, ಲತಾ ಕಾಶಪ್ಪನವರ, ರಾಚಮ್ಮ ಬಡ್ಡಿ, ಯಲ್ಲಕ್ಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.