ಇಂಡಿ: ನಗರದಲ್ಲಿ ನಿರ್ಮಿಸಿದ ಫುಟ್ ಪಾತ್ ಕಾಮಗಾರಿ ಕಳಪೆ ಮಟ್ಟದ್ದಾಗಿದ್ದು, ಪುರಸಭೆಯಿಂದ ಮೂರನೇ ಪಾರ್ಟಿ ಇನ್ಸ್‌ಪೆಕ್ಷನ್ ಮಾಡಿಸಬೇಕು ಮತ್ತು ಫುಟ್‌ಪಾತ್ ಮರು ನಿರ್ಮಾಣ ಮಾಡಬೇಕು ಎಂದು ಪುರಸಭೆ ಸದಸ್ಯ ಅನಿಲಗೌಡ ಬಿರಾದಾರ ಆಕ್ರೋಶ ಭರಿತವಾಗಿ ಹೇಳಿದರು.
ಶುಕ್ರವಾರ ಪುರಸಭೆ ಸಭಾ ಭವನದಲ್ಲಿ ಪುರಸಭೆ ಅಧ್ಯಕ್ಷೆ ಶೈಲಜಾ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಫುಟ್‌ಪಾತ್ ನಿರ್ಮಾಣದ ಕುರಿತು ಚರ್ಚಿಸಲಾಯಿತು. ಪುರಸಭೆಯಿಂದ ಟೆಂಡರ್ ಪಡೆದುಕೊಂಡಿರುವ ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅ ಧಿಕಾರಿಗಳು ಗುತ್ತಿಗೆದಾರರ ಮೇಲೆ ಒತ್ತಡ ಹೇರಬೇಕು. ಗುಣಮಟ್ಟದ ಕಾಮಗಾರಿ ಮಾಡಿಸಬೇಕು. ನಗರದಲ್ಲಿ ಫುಟ್ ಪಾತ್ ಕಾಮಗಾರಿ ಆರಂಭವಾಗಿದೆ.
ಗುತ್ತಿಗೆದಾರರು ತಮ್ಮ ಮನಬಂದ ಹಾಗೆ ಕಾಮಗಾರಿ ಮಾಡುತ್ತಿದ್ದಾರೆ. ಮುಂದೆ ಕಾಮಗಾರಿ ನಡೆಯುತ್ತಿದೆ. ಹಿಂದೆ ಫುಟ್‌ಪಾತ್ ಮೇಲೆ ಸಣ್ಣ ಗಾಡಿ ಹಾಯ್ದರೂ ಫುಟ್‌ಪಾತ್ ಮೇಲಿನ ಕಾಂಕ್ರೀಟ್ ಕುಸಿದು ಬೀಳುತ್ತಿದೆ. ಕಾಮಗಾರಿ ಮಾಡಿದ ನಂತರ ಕನಿಷ್ಠ 25-30 ವರ್ಷವಾದರೂ ಸುಸಜ್ಜಿತ ಸ್ಥಿತಿಯಲ್ಲಿರಬೇಕು.ಆದರೆ ಫುಟ್ ಪಾತ್ ಕಾಮಗಾರಿ ಮಾಡಿದ ಎರಡೇ ವರ್ಷದಲ್ಲಿ ಹಾಳಾಗುತ್ತಿದೆ. ಪುರಸಭೆ ಅಧಿ ಕಾರಿಗಳು ಮತ್ತು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಈ ಕುರಿತು ಹೇಳಿದರೂ ಪ್ರಯೋಜನವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ವಿಜಯಕುಮಾರ ಮೂರಮನ್ ಪಂಚಶೀಲ ನಗರದಲ್ಲಿ ಚರಂಡಿ ನೀರು ಮನೆಗಳ ಪಕ್ಕದಲ್ಲಿಯೇ ನಿಂತುಕೊಂಡು ಸಮಸ್ಯೆಯಾಗುತ್ತಿದೆ.
ಸೊಳ್ಳೆಗಳು ಹೆಚ್ಚಾಗಿವೆ. ದುರ್ವಾಸನೆ ಹೆಚ್ಚಿದ್ದು, ಸುತ್ತಮುತ್ತಲಿನ ಕುಟುಂಬಗಳಿಗೆ ತೊಂದರೆಯಾಗಿದೆ. ಕೂಡಲೆ ಚರಂಡಿ ನೀರು ಬೇರೆಡೆಗೆ ಹರಿದು ಹೋಗುವಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್. ಪೂಜಾರಿ ಮಧ್ಯ ಪ್ರವೇಶಿಸಿ ಪಂಚಶೀಲ ನಗರದಲ್ಲಿ ಕೆಲ ಪ್ರದೇಶದಲ್ಲಿ ನಿಲ್ಲುವ ಚರಂಡಿ ನೀರು ಬೇರೆಡೆ ಸಾಗಿಸಲು ಕಾಮಗಾರಿ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲಿ ಚರಂಡಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷ ಇಸ್ಮಾಯಿಲ್ ಅರಬ, ಲೆಕ್ಕಾ ಧಿಕಾರಿ ಅಸ್ಲಮ ಖಾದಿಮ, ಅಶೋಕ ಚಂದನ್, ಶಬ್ಬಿರ್ ರೇವೂರಕರ, ಸದಸ್ಯರಾದ ಅಯೂಬ ಭಾಗವಾಬ, ಶಬ್ಬಿರ್ ಖಾಜಿ, ದೇವೇಂದ್ರ ಕುಂಬಾರ, ಭೀಮನಗೌಡ ಪಾಟೀಲ, ಅಸ್ಲಮ ಕಡಣಿ, ಮುಸ್ತಾಕ್ ಇಂಡಿಕರ, ಉಮೇಶ ದೇಗಿನಾಳ, ಪಿಂಟು ರಾಠೊಡ, ಲಿಂಬಾಜಿ ರಾಠೊಡ, ಜಹಾಂಗಿರ ಸೌದಾಗರ, ಬನ್ನೆಮ್ಮ ಹದರಿ, ರೇಣುಕಾ ಉಟಗಿ, ಸೈಫನ್ ಪವಾರ, ಭಾಗೀರಥಿ ಕುಂಬಾರ, ಸಂಗೀತಾ ಕರಕಟ್ಟಿ, ಜ್ಯೋತಿ ರಾಠೊಡ, ಕವಿತಾ ರಾಠೊಡ ಸಭೆಯಲ್ಲಿ ಇದ್ದರು.