ಕನ್ನಡ ಚಿತ್ರ ಮಾಡಿದ ಪ್ರತಿಯೊಬ್ಬರದ್ದೂ ಒಂದೇ ದೂರು. ಬುಕ್ ಮೈ ಶೋ ಕನ್ನಡ ಚಿತ್ರಗಳನ್ನು ಕೊಲ್ಲುತ್ತಿದೆ ಎಂಬುದೇ ಆ ದೂರು. ಹೌದು, ಬಹುತೇಕ ಕನ್ನಡ ಸಿನಿಮಾಗಳ ನಿರ್ಮಾಪಕ, ನಿರ್ದೇಶಕರು ಬುಕ್ ಮೈ ಶೋ ವಿರುದ್ಧ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳಿಗೆ ಕಿಂಚಿತ್ತೂ ಪ್ರೋತ್ಸಾಹ ಕೊಡದೆ, ಮನಬಂದಂತೆ ವರ್ತಿಸುತ್ತಿದೆ. ಬುಕ್ ಮೈ ಶೋ ನಿರ್ವಹಣೆ ಮಾಡುವವರ ವಿರುದ್ಧ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂಬ ಆಕ್ರೋಶ ಈಗ ಜೋರಾಗಿದೆ.
ಇತ್ತೀಚೆಗೆ “ದಿಯಾ’ ಮತ್ತು “ಜಂಟಲ್‌ಮೆನ್’ ಚಿತ್ರಗಳಿಗೂ ಇದೇ ಅನ್ಯಾಯ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಒಳ್ಳೆಯ ಚಿತ್ರಗಳಾಗಿದ್ದರೂ, ಅವುಗಳಿಗೆ ಬುಕ್ ಮೈ ಶೋ ಯಾವುದೇ ಬೆಂಬಲ ನೀಡದೆ, ಸಿನಿಮಾ ಹಾಳು ಮಾಡಲು ಕಾರಣವಾಗಿದೆ ಎಂದು ಆರೋಪಿಸಲಾಗಿತ್ತು. ಈಗ “ಸಾಗುತ ದೂರ ದೂರ’ ಚಿತ್ರದ ಸರದಿ. ರವಿತೇಜ ನಿರ್ದೇಶನದ ಅಮಿತ ಪೂಜಾರಿ ನಿರ್ಮಾಣದ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲೆಡೆಯಿಂದಲೂ ಚಿತ್ರತಂಡದ ಬಗ್ಗೆ ಮೆಚ್ಚುಗೆಯೂ ಬಂದಿದೆ. ಆದರೆ, ಬುಕ್ ಮೈ ಶೋ ಎಂಬ ಮಾಫಿಯಾದಲ್ಲಿ ಸಿಲುಕಿ ಚಿತ್ರ ಸಾಯುವ ಸ್ಥಿತಿಗೆ ಬಂದಿದೆ ಎಂಬುದು ಚಿತ್ರತಂಡದ ಆರೋಪ.
ಚಿತ್ರದ ಗೆಲುವಿನ ಕುರಿತು ಸಂಭ್ರಮ ಹಂಚಿಕೊಳ್ಳಲು ಬಂದಿದ್ದ ನಿರ್ದೇಶಕ ರವಿತೇಜ, ಬುಕ್ ಮೈ ಶೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ಎಲ್ಲಾ ಕಡೆಯಿಂದಲೂ ನಮ್ಮ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಆದರೆ, ಬುಕ್ ಮೈ ಶೋನಲ್ಲಿ 11 ಸಾವಿರಕ್ಕೂ ಹೆಚ್ಚು ಲೈಕ್ಸ್ ಇದೆ. ಆದರೆ, ಎಲ್ಲೂ ಒಂದು ವಿಮರ್ಶೆ ಇಲ್ಲ. ಯಾರಿಂದಲೂ ನಾಲ್ಕು ಲೈನ್ ಪದಗಳಿಲ್ಲ. ಬುಕ್ ಮೈ ಶೋ ಅನ್ನುವುದು ಒಂದು ಮಾಫಿಯಾ ಆಗಿದೆ. ಅದನ್ನು ನಡೆಸೋರು. ನಮ್ಮ ಕನ್ನಡಿಗರಲ್ಲ. ಕನ್ನಡದ ಒಳ್ಳೆಯ ಚಿತ್ರಗಳಿಗೆ ಅಲ್ಲಿ ಬೆಲೆಯೇ ಇಲ್ಲ. ಕಾಸು ಕೊಟ್ಟರೆ ಮಾತ್ರ ಅಲ್ಲಿ ಒಳ್ಳೆಯ ರೇಟಿಂಗ್ ಸಿಗುತ್ತೆ. ಇಲ್ಲವಾದರೆ, ಕಡೆಗಣಿಸಲಾಗುತ್ತದೆ.
ಇದು ದೊಡ್ಡ ಅನ್ಯಾಯ. ಈ ವಿರುದ್ಧ ಎಲ್ಲರೂ ಧ್ವನಿಗೂಡಿಸಬೇಕು. ವಾಣಿಜ್ಯಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಸೇರಿದಂತೆ ಚಿತ್ರರಂಗದ ಎಲ್ಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸಿ, ಇದಕ್ಕೊಂದು ಸೂಕ್ತ ಪರಿಹಾರ ಸೂಚಿಸಬೇಕು. ಕನ್ನಡದ ಆ್ಯಪ್‌ವೊಂದನ್ನು ತೆರೆದು, ಆ ಮೂಲಕ ಕನ್ನಡದ ಒಳ್ಳೆಯ ಸಿನಮಾಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಇನ್ನು, ಕನ್ನಡ ಸಿನಿಮಾಗಳಿಗೆ ಬೆಲೆ ಕೊಡದ ಬುಕ್ ಮೈ ಶೋ ವಿರುದ್ಧ ಎಲ್ಲರೂ ಹೋರಾಡಬೇಕು’ ಎಂಬುದು ಅವರ ಮಾತು.
ನಿರ್ಮಾಪಕ ಅಮಿತ್ ಪೂಜಾರಿ, ನಟಿ ಉಷಾ ಭಂಡಾರಿ, ನಟ ಮಹೇಶ್ ಸಿದ್ದು, ನವೀನ್‌ಕುಮಾರ್ ಸೇರಿದಂತೆ ಚಿತ್ರತಂಡದ ಪ್ರತಿಯೊಬ್ಬರೂ, ಬುಕ್ ಮೈ ಶೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಂಟೆಂಟ್ ಸಿನಿಮಾಗಳು ಬರುವುದು ಅಪರೂಪ. ಹೊಸ ಪ್ರತಿಭೆಗಳು ಸೇರಿ ಮಾಡಿದ ಚಿತ್ರಕ್ಕೆ ಬೆಂಬಲ ಸಿಕ್ಕರೂ ಬುಕ್ ಮೈ ಶೋನಲ್ಲಿ ಮಾತ್ರ ಕಡೆಗಣಿಸಲಾಗುತ್ತಿದೆ. ಹೀಗಾದರೆ, ಕನ್ನಡ ಚಿತ್ರಗಳು ಸಂಪೂರ್ಣ ನೆಲಕಚ್ಚುತ್ತವೆ. ಹಿಂದಿ, ತಮಿಳು, ತೆಲುಗು ಚಿತ್ರಗಳು ಇರದಿದ್ದರೂ, ಅವುಗಳಿಗೆ ರಿವೀವ್ ಕೊಡುತ್ತಾರೆ. ಕನ್ನಡ ಸಿನಿಮಾಗಳಿಗೆ ಮಾತ್ರ ಈ ಅನ್ಯಾಯ ನಡೆಯುತ್ತಿದೆ. ಈ ಕುರಿತು ಎಚ್ಚೆತ್ತುಕೊಳ್ಳಬೇಕು ಎಂದು ಒಕ್ಕೊರಲ ಮನವಿ ಮಾಡಿದರು.