ಚನ್ನಪಟ್ಟಣ: ಗಂಗಾಮಾತೆ ಹಾಗೂ ರಾಷ್ಟ್ರಗೀತೆಯ ಬಗ್ಗೆ ತಮ್ಮ ಕೃತಿಯಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಬಹಿರಂಗವಾಗಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಮಾಜಿ ಉಪಾಧ್ಯಕ್ಷ ಎಲೆಕೇರಿ ಈಶ್ವರಪ್ಪ ಆಗ್ರಹಿಸಿದರು.
ನಗರದಲ್ಲಿ ನಡೆದ ಜಿಲ್ಲಾ ಗಂಗಾಮತಸ್ಥರ ಸಭೆಯಲ್ಲಿ ಮಾತನಾಡಿ, ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ತಮ್ಮ ಭರತನಗರಿ ಎಂಬ ಪುಸ್ತಕದಲ್ಲಿ ನಮ್ಮ ಸಮುದಾಯದ ಕುಲದೇವತೆ ಗಂಗಾಮಾತೆ ಹಾಗೂ ರಾಷ್ಟ್ರಗೀತೆಯ ಬಗ್ಗೆ ಅವ ಹೇಳನಕಾರಿಯಾಗಿ ಬರೆದಿದ್ದಾರೆ. ನಮ್ಮ ಸಮು ದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷಮೆಯಾಚಿಸಿ: ಜಿಲ್ಲಾ ಗಂಗಾಮತಸ್ಥರ ಸಂಘದ ಸಹ ಕಾರ್ಯದರ್ಶಿ, ನಿವೃತ್ತ ಶಿಕ್ಷಕ ಸೋಗಾಲ ರಾಮು ಮಾತನಾಡಿ, ಬರಗೂರು ರಾಮಚಂದ್ರಪ್ಪ ಅವರು ಒಂದು ಸಮುದಾಯ ಹಾಗೂ ರಾಷ್ಟ್ರ ಗೀತೆ ವಿಚಾರದಲ್ಲಿ ಅವಹೇಳನಕಾರಿಯಾಗಿ ಬರೆ ದಿರುವುದು ದುರದೃಷ್ಟಕರ ಹಾಗೂ ಕಳವಳಕಾರಿ ಯಾಗಿದೆ. ಈ ದಿಕ್ಕಿನಲ್ಲಿ ಅವರು ಕೂಡಲೇ ಸರ್ವ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಬರಗೂರು ರಾಮಚಂದ್ರಪ್ಪ ಬಹಿರಂಗವಾಗಿ ಮಾಧ್ಯಮಗಳ ಸಮ್ಮುಖದಲ್ಲಿ ನಮ್ಮ ಸಮಾಜದ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಹೋರಾಟ ಹಾಗೂ ರೂಪುರೇಷೆ ಸಿದ್ಧಪಡಿಸಿ, ರಾಮಚಂದ್ರಪ್ಪ ಎಲ್ಲೆಲ್ಲಿ ಕಾಣುತ್ತಾರೋ ಅಲ್ಲಿ ಪ್ರತಿಭಟನೆ ಹಾಗೂ ಘೇರಾವ್ ಮಾಡಲಾಗುವುದು ಎಂದು ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.
ಸಂಘದ ಚನ್ನಪಟ್ಟಣ ತಾಲೂಕು ಅಧ್ಯಕ್ಷ ಹನುಮಂತು, ಖಜಾಂಚಿ ವೆಂಕಟಪ್ಪ, ಸಹ ಕಾರ್ಯದರ್ಶಿ ಗಂಗರಾಜು, ಕನಕಪುರ ತಾಲೂಕು ಅಧ್ಯಕ್ಷ ಚಿಕ್ಕಣ್ಣ, ಪದಾಧಿಕಾರಿಗಳಾದ ಮಹದೇವು, ಪುಟ್ಟರಾಜು, ಗೋಪಾಲ್, ನಾಗೇಂದ್ರ, ಕುಮಾರ ಸ್ವಾಮಿ, ಮಲ್ಲಿಕಾರ್ಜುನ, ನಾಗರಾಜು ಮುನಿ ಸ್ವಾಮಿ, ಮಲ್ಲಯ್ಯ ಗಂಗರಾಜು, ಪುಟ್ಟಸ್ವಾಮಿ ಹಾಗೂ ಮುಖಂಡರು ಉಪಸ್ಥಿತರಿದ್ದರು.