ನವದೆಹಲಿ: ಒಂದು ಪುಟ್ಟ ಗೂಡಿನ ಢಾಬಾ. ಅದರ ಮಾಲೀಕ, ಕಡುವೃದ್ಧ ಅಳುತ್ತಾ “ನೋಡಿ ಸರ್, ಮಟರ್ ಪನೀರ್… ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಹೀಗೆ ಮಾಡ್ತಾರಾ? ಆದರೂಜನಬರ್ತಿಲ್ಲ…’ಎನ್ನುತ್ತಾ ವಿಡಿಯೊದಲ್ಲಿ ದುಃಖ ತೋಡಿಕೊಂಡಿದ್ದರು.
ಕೋವಿಡ್ ಆತಂಕ, ಲಾಕ್ ಡೌನ್‌ನಿಂದಾಗಿ ವ್ಯಾಪಾರ ವಿಲ್ಲದೆ ಸಂಕಷ್ಟದಲ್ಲಿದ್ದ ದೆಹಲಿ ಬಡ ತಾತಾ ಕಾಂತಾಪ್ರಸಾದ್‌ರ ಈ ಕಣ್ಣೀರ ಕಥೆಯ ವಿಡಿಯೊ ಕೆಲವೇ
ನಿಮಿಷಗಳಲ್ಲಿ ವೈರಲ್ ಆಗಿದೆ. ಸಾಮಾನ್ಯನಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ “ಬಾಬಾ ಕಾ ಢಾಬಾ’ ಹ್ಯಾಶ್‌ಟ್ಯಾಗ್ ಸೃಷ್ಟಿಸಿ, ಗೂಡಂಗಡಿ ಆಹಾರ ಕೇಂದ್ರದ ಪರ ಒಕ್ಕೊರಲಿನಲ್ಲಿ ಟ್ವೀಟಿಸಿದ್ದಾರೆ.
ಈಗ ಬಾಬಾ ಡಾಬಾ ಮುಂದೆ ಜನರ ದೊಡ್ಡಕ್ಯೂ!
ಹೌದು! ಕಾಂತಾ ಪ್ರಸಾದ್ ಡಾಬಾ ಈಗ ಜಾಲತಾಣಗಳಲ್ಲಿ ಜನಪ್ರಿಯ. ಖ್ಯಾತ ಫುಡ್ ಬ್ಲಾಗರ್ ವಸುಂಧರಾ ಟಾಂಖಾ ಶರ್ಮಾ ಕೂಡ, “ತಾತನ ವಿಡಿಯೊ ನನ್ನ ಹೃದಯ ಕರಗಿಸಿದೆ. ದಯವಿಟ್ಟು ದೆಹಲಿಯ ಮಾಳವೀಯ ನಗರದ ಢಾಬಾಕ್ಕೆ ಭೇಟಿ ನೀಡಿ, ಆಹಾರ ಸೇವಿಸಿ’ ಎಂದು ಮನವಿ ಮಾಡಿದ್ದರು. ಸಹಸ್ರಾರು ಮಂದಿ ಇದನ್ನು ರೀಟ್ವೀಟ್ ಮಾಡಿದ್ದು, ಬಾಬಾ ಡಾಬಾದಲ್ಲಿ ವ್ಯಾಪಾರ ಜೋರಾಗಿದೆ. ಮಾಳವೀಯ ನಗರಕ್ಕೆ ಹೋದಾಗ ನಾವು ಖಂಡಿತಾ ಡಾಬಾಕ್ಕೆ ಹೋಗುತ್ತೇವೆ ಎಂದು ಹಲವರು ಟ್ವೀಟಿಸಿದ್ದಾರೆ.
ವ್ಯಾಪಾರ ಇರಲಿಲ್ಲ: “ಲಾಕ್‌ಡೌನ್ ತಿಂಗಳುಗಳಲ್ಲಿ ನಮಗೆ ಒಂದು ಪೈಸೆ ವ್ಯಾಪಾರ ಇರಲಿಲ್ಲ. ಒಪ್ಪೊತ್ತಿನ ಊಟಕ್ಕೂ ಪರದಾಡಿದ್ದೆವು. ಈಗ ಅಪಾರ ಗ್ರಾಹಕರು ನಮ್ಮ ಢಾಬಾದತ್ತ ಬರುತ್ತಿರುವುದು ಖುಷಿ ತಂದಿದೆ. ಜನರ ಬೆಂಬಲಕ್ಕೆ ನಾನು ಚಿರಋಣಿ’ ಎಂದು ಬೊಚ್ಚುಬಾಯಿ ಯಲ್ಲಿ ನಗುತ್ತಾರೆ,ಕಾಂತಪ್ರಸಾದ್.
ಈ ಕ್ಷೇತ್ರದ ಶಾಸಕ ಸೋಮನಾಥ್ ಭಾರತಿ ಶೀಘ್ರವೇ ಡಾಬಾಕ್ಕೆ ಭೇಟಿ ನೀಡಿ, ನೆರವಾಗುವ ಭರವಸೆ ನೀಡಿದ್ದಾರೆ. ಅಂದಹಾಗೆ, ಬಾಬಾ ಡಾಬಾದ ವಿಡಿಯೊವನ್ನು ಗೌರವ್ ವಾಸನ್ ಎಂಬ ಬ್ಲಾಗರ್ ಚಿತ್ರೀಕರಿಸಿದ್ದರು.
ಕೇವಲ 30 ರೂ.ಗೆ ಊಟ!
80 ವರ್ಷದ ಕಾಂತಪ್ರಸಾದ್, ಪತ್ನಿ ಬಾದಾಮಿ ದೇವಿ ದಂಪತಿ ನಿತ್ಯ ಬೆಳಗ್ಗೆ 6.30ಕ್ಕೆ ಉಪಾಹಾರ ತಯಾರಿ ಆರಂಭಿಸುತ್ತಾರೆ. 9.30ರ ನಂತರ ರುಚಿರುಚಿ ಅಡುಗೆ ಸಿದ್ಧಪಡಿಸುತ್ತಾರೆ. ದಾಲ್,ಕರಿ, ಪರಾಠ ಮತ್ತು ಅನ್ನವನ್ನೊಳಗೊಂಡ ಪ್ರತಿ ಪ್ಲೇಟ್‌ಗೆ ಪಡೆಯೋದು ಕೇವಲ 30-50 ರೂ.!