Advertisement

ಕೇರಳದಲ್ಲಿ ಹೆಚ್ಚುತ್ತಿರುವ ಹೊರರಾಜ್ಯ ಕಾರ್ಮಿಕರು

01:00 AM Mar 06, 2019 | Harsha Rao |

ಕಾಸರಗೋಡು: ಕೇರಳ ರಾಜ್ಯದ ವಿವಿಧ ವಲಯಗಳಲ್ಲಿ ದುಡಿಯುತ್ತಿರುವ ಹೊರರಾಜ್ಯ (ಅನ್ಯರಾಜ್ಯ) ಕಾರ್ಮಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಇದು ಆತಂಕಕಾರಿ ವಿಷಯ ಎಂಬುದಾಗಿ ರಾಜ್ಯ ಗುಪ್ತಚರ ವಿಭಾಗವು ಎಚ್ಚರಿಕೆ ನೀಡಿದೆ. ಆದರೆ ಈ ಕಾರ್ಮಿಕರೆಲ್ಲ ಬಂಗಾಲಿಗಳಲ್ಲ. ಕಾಶ್ಮೀರದಿಂದ ತೊಡಗಿ ತಮಿಳುನಾಡಿನ ತನಕ ಹೆಚ್ಚಿನ ಎಲ್ಲ ರಾಜ್ಯಗಳ ಕಾರ್ಮಿಕರು ಕೇರಳದಲ್ಲಿ ದುಡಿಯುತ್ತಿದ್ದಾರೆಂಬ ಸ್ಪಷ್ಟ ಮಾಹಿತಿ ಲಭ್ಯವಾಗಿದೆ. 

Advertisement

ಈ ಮಧ್ಯೆ ಕೇರಳದಲ್ಲಿನ ಹೊರ ರಾಜ್ಯಗಳ ಕಾರ್ಮಿಕರನ್ನೆಲ್ಲ ಬಂಗಾಲಿಗಳೆಂದು ಕರೆಯಲಾಗುತ್ತದೆ. ಇತರ ರಾಜ್ಯಗಳ ಕಾರ್ಮಿಕರೂ ಇದರಲ್ಲಿ ಸೇರಿದ್ದಾರೆ. ಇನ್ನೊಂದೆಡೆ ಹೆಚ್ಚಿನವರು ಪಶ್ಚಿಮ ಬಂಗಾಲದಿಂದ ಬಂದ ಬಂಗಾಲಿಗಳೆಂದು ಕೇರಳ ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಲ್ಪಟ್ಟ ಹೊರರಾಜ್ಯ ಕಾರ್ಮಿಕರ ಪಟ್ಟಿ ಸೂಚಿಸುತ್ತಿದೆ. 

ಬಾಗ್ಲಾ ದೇಶೀಯರೇ| 
ಪಶ್ಚಿಮ ಬಂಗಾಳದವರೆಂಬ ಸೋಗಿನಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಗ್ಗಿ ಕೇರಳದಲ್ಲಿ ದುಡಿಯುತ್ತಿರುವ ಸಾವಿರಾರು ಮಂದಿ ಕಾರ್ಮಿಕರೂ ಇದ್ದಾರೆ. ಇವರು ಇಲ್ಲಿ ಹೆಸರು ನೋಂದಾಯಿಸುತ್ತಿಲ್ಲ. ತಾವು ಸಿಕ್ಕಿಬೀಳಬಹುದೆಂಬ ಭಯದಿಂದ ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸದಿರಲು ಪ್ರಮುಖ ಕಾರಣವೆಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

ನಕಲಿ ಗುರುತುಪತ್ರ ಹೊಂದಿದವರು?
ಆದರೆ ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ಕೇರಳದಲ್ಲಿ ನೆಲೆಸಿರುವವರಲ್ಲಿ ಹಲವರು ನಕಲಿ ಗುರುತುಪತ್ರ, ಆಧಾರ್‌ ಕಾರ್ಡ್‌ ಇತ್ಯಾದಿಗಳನ್ನು ಪಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ನಕಲಿ ದಾಖಲೆಪತ್ರಗಳನ್ನು ತಯಾರಿಸಿ ಅವರಿಗೆ ಸಹಾಯ ಒದಗಿಸುವ ತಂಡಗಳೂ ಕೇರಳದಲ್ಲಿ ಗುಪ್ತವಾಗಿ ಕಾರ್ಯವೆಸಗುತ್ತಿರುವುದಾಗಿ ಗುಪ್ತಚರ ವಿಭಾಗವು ಸರಕಾರಕ್ಕೆ ತಿಳಿಸಿದೆ. ಅಂತಹ ಕೇಂದ್ರಗಳನ್ನು ಪತ್ತೆಹಚ್ಚುವ ರಹಸ್ಯ ಕಾರ್ಯಾಚರಣೆಯಲ್ಲೂ ಪೊಲೀಸರು ತೊಡಗಿದ್ದಾರೆ. ಹೀಗೆ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾ ದೇಶದವರ ಪೈಕಿ ಉಗ್ರಗಾಮಿಗಳೂ ಒಳಗೊಂಡಿದ್ದಾರೆಂದು ತಿಳಿದುಬಂದಿದೆ. 

ವಿವಿಧ ರಾಜ್ಯಗಳ ಕಾರ್ಮಿಕರ ವಿವರ 
ಕೇರಳದಲ್ಲಿ ದುಡಿಯುತ್ತಿರುವ ಹೊರ ರಾಜ್ಯಗಳ ಕಾರ್ಮಿಕರ ಪೈಕಿ ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿದ ವಿವರ ಈ ರೀತಿಯಿದೆ: ಪಶ್ಚಿಮ ಬಂಗಾಲ – 1,49,743, ಅಸ್ಸಾಂ – 52,646, ಒಡಿಸ್ಸಾ – 39,036, ಬಿಹಾರ – 35,031, ತಮಿಳುನಾಡು- 28,733, ಝಾರ್ಖಂಡ್‌ – 18,028, ಉತ್ತರ ಪ್ರದೇಶ – 13,563, ಗೋವಾ – 26, ಮಿಜೋರಾಂ – 52, ಸಿಕ್ಕಿಂ – 68, ಹಿಮಾಚಲಪ್ರದೇಶ – 90, ಹರಿಯಾಣ – 118, ಗುಜರಾತ್‌ – 170, ತೆಲಂಗಾಣ – 183 ಮತ್ತು ಕರ್ನಾಟಕದ ಕಾರ್ಮಿಕರೂ ಕೇರಳದಲ್ಲಿ ದುಡಿಯುತ್ತಿದ್ದಾರೆಂದು ಅಂಕಿ ಅಂಶಗಳು ತಿಳಿಸುತ್ತವೆ. ಇದು ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಅಧಿಕೃತವಾಗಿ ಹೆಸರು ನೋಂದಾಯಿಸಿದ ಹೊರರಾಜ್ಯ ಕಾರ್ಮಿಕರ ಸಂಖ್ಯೆಯಾಗಿದೆ. ಆದರೆ ಹೆಸರು ನೋಂದಾಯಿಸದ ಇನ್ನೂ ಸಹಸ್ರಾರು ಮಂದಿ ಹೊರರಾಜ್ಯ ಕಾರ್ಮಿಕರು ಕೇರಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ನಿಖರ ಸಂಖ್ಯೆ ಇನ್ನೂ ರಾಜ್ಯ ಸರಕಾರಕ್ಕೆ ದೊರಕದಿರುವುದು ವಿಪರ್ಯಾಸವಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next