Advertisement

ಮುನಿರತ್ನಗೆ ಓಟರ್‌ ಐಡಿ ಕೇಸ್‌ ಸಂಕಷ್ಟ?

11:38 AM May 27, 2018 | Team Udayavani |

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರ ಗುರುತಿನ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪ ಸಂಬಂಧ ರಾಕೇಶ್‌ ನೀಡಿರುವ ದೂರಿನ ಕುರಿತು ಪ್ರತ್ಯೇಕ ತನಿಖೆ ನಡೆಸಬೇಕು ಎಂದು 7ನೇ ಎಸಿಎಂಎಂ ನ್ಯಾಯಾಲಯ ಜಾಲಹಳ್ಳಿ ಠಾಣೆ ಪೊಲೀಸರಿಗೆ ಸೂಚಿಸಿದೆ. ಹೀಗಾಗಿ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ.

Advertisement

ಘಟನೆ ಸಂಬಂಧ ಚುನಾವಣಾಧಿಕಾರಿಗಳು ನೀಡಿದ ದೂರಿನ ಅನ್ವಯ ಈಗಾಗಲೇ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿಯೇ, ರಾಕೇಶ್‌ ನೀಡಿರುವ ದೂರನ್ನು ತನಿಖೆ ನಡೆಸಲು ಅನುಮತಿ ನೀಡುವಂತೆ ಕೋರಿ ಜಾಲಹಳ್ಳಿ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯ, ಎರಡೂ ಪ್ರಕರಣಗಳನ್ನು ಪ್ರತ್ಯೇಕವಾಗಿಯೇ ನಡೆಸಿ ಎಂದು ತಾಕೀತು ಮಾಡಿದೆ.

ಪ್ರಕರಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಅವರನ್ನು ಆರೋಪಿಯನ್ನಾಗಿ ಪರಿಗಣಿಸುವಂತೆ ನಿರ್ದೇಶಿಸುವಂತೆ ಕೋರಿ ರಾಕೇಶ್‌ ಸಲ್ಲಿಸಿದ್ದ ದೂರಿನ ವಿಚಾರಣೆಯನ್ನು ಶನಿವಾರ ನಡೆಸಿದ ನ್ಯಾಯಾಲಯ, ಈ  ಸೂಚನೆ ನೀಡಿ ಮುಂದಿನ ವಿಚಾರಣೆ ವೇಳೆಗೆ ವರದಿ ನೀಡುವಂತೆ  ಹೇಳಿದೆ.

ಬಂಧನ ಭೀತಿ: ನ್ಯಾಯಾಲಯದ ಸೂಚನೆ ಮೇರೆಗೆ ಇದೀಗ ಪ್ರತ್ಯೇಕ ತನಿಖೆ ನಡೆಸಬೇಕಿರುವುದರಿಂದ, ಐಪಿಸಿ ಕಲಂ 506,  420, 465, 468 ಕಲಂಗಳು ಸೇರಿ ಇನ್ನಿತರೆ ಗಂಭೀರ ಸ್ವರೂಪದ ಅಪರಾಧಿಕ ಸೆಕ್ಷನ್‌ಗಳ ಅಡಿಯಲ್ಲಿ ತನಿಖೆ ನಡೆಸಬೇಕಾಗಿದೆ. ಹೀಗಾಗಿ ಬಂಧನ ಭೀತಿಯಲ್ಲಿ ಶಾಸಕ ಮುನಿರತ್ನ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆಹೋಗುವ ಸಾಧ್ಯತೆಯಿದೆ.

ಇನ್ನು ಚುನಾವಣಾಧಿಕಾರಿಗಳು ನೀಡಿದ್ದ ದೂರಿನ ಕುರಿತ ಪ್ರಕರಣದಲ್ಲಿ 14 ನೇ ಆರೋಪಿಯಾಗಿರುವ ಶಾಸಕ ಮುನಿರತ್ನ ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ ಅಕ್ರಮವಾಗಿ 9564 ಮತದಾರ ಚೀಟಿಗಳನ್ನು ಸಂಗ್ರಹಿಸಿರುವುದು ಮೇ 8ರಂದು ಬೆಳಕಿಗೆ ಬಂದಿತ್ತು.

Advertisement

ಕಾಂಗ್ರೆಸ್‌ ಪಕ್ಷ ದೊಡ್ಡ ತ್ಯಾಗ ಮಾಡಿದೆ. ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಜೆಡಿಎಸ್‌ ನಾಯಕರಿಗೆ ಮನವಿ ಮಾಡಿದ್ದೇವೆ. ಈಗ ಅಭ್ಯರ್ಥಿ ಹಿಂಪಡೆಯುವುದು ಕಷ್ಟ ಎಂದಿದ್ದಾರೆ. ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡುತ್ತೇನೆ.
-ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ ನಾಯಕ

ಬಿಜೆಪಿಯನ್ನು ದೂರ ಇಡಲು ಒಳ್ಳೆಯ ಅವಕಾಶ ಎಂದು ಬಹಳ ಗೌರವದಿಂದ ಜೆಡಿಎಸ್‌ಗೆ ಹೇಳಿದ್ದೇವೆ. ನಾವು ಉದಾರತೆಯಿಂದ ತ್ಯಾಗ ಮಾಡಿ ಜೆಡಿಎಸ್‌ಗೆ ಸಹಾಯ ಮಾಡಿದ್ದೇವೆ. ಹೀಗಾಗಿ ನಮ್ಮ ಹಾಲಿ ಶಾಸಕರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದೇವೆ.
-ಡಾ.ಜಿ. ಪರಮೇಶ್ವರ್‌, ಉಪ ಮುಖ್ಯಮಂತ್ರಿ

ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಜೆಡಿಎಸ್‌ ಬೆಂಬಲಿಸಿ ಎಂದು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರಾಮಚಮದ್ರ ಮತ ಕೇಳುತ್ತಿದ್ದರು. ಈಗ ಕಾಂಗ್ರೆಸ್‌ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆ. ಹೀಗಾಗಿ ಜೆಡಿಎಸ್‌ ಬೆಂಬಲಿಸುವವರು ಕಾಂಗ್ರೆಸ್‌ಗೆ ಮತ ನೀಡಬೇಕು.
-ಮುನಿರತ್ನ, ಆರ್‌.ಆರ್‌.ನಗರ ಕಾಂಗ್ರೆಸ್‌ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next