Advertisement

2ನೇ ಹಂತದ ಕಾಮಗಾರಿಗೆ ಶೀಘ್ರ ಟೆಂಡರ್‌ ನಿರೀಕ್ಷೆ

08:08 PM Oct 17, 2021 | Team Udayavani |

ಕುಂದಾಪುರ: ಮರವಂತೆಯ ಹೊರ ಬಂದರು ಪ್ರದೇಶದಲ್ಲಿ ಎರಡನೇ ಹಂತದ ಬ್ರೇಕ್‌ವಾಟರ್‌ ವಿಸ್ತರಣೆ ಕಾಮಗಾರಿಗೆ ರಾಜ್ಯ ಮಟ್ಟದ ಅಂದಾಜು ಪಟ್ಟಿ ಮತ್ತು ಸಲಹಾ ಸಮಿತಿಯ ಅನುಮೋದನೆ ಸಿಕ್ಕಿದ್ದು, ಇನ್ನು ತಾಂತ್ರಿಕ ಒಪ್ಪಿಗೆ ಬಳಿಕ ಟೆಂಡರ್‌ ಪ್ರಕ್ರಿಯೆ ಆರಂಭವಾಗಲಿದೆ.

Advertisement

ಮೀನುಗಾರಿಕೆ ವಿಳಂಬ…
ಇದರೊಂದಿಗೆ ಈ ಎರಡನೇ ಹಂತದ ಕಾಮಗಾರಿಗೆ ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗಿ 2 ವರ್ಷ ಕಳೆದರೂ, ಕಾಮಗಾರಿ ಆರಂಭ ವಿಳಂಬಗೊಂಡಿತ್ತು. ಇದು ಇಲ್ಲಿನ ಮೀನುಗಾರರಿಗೆ ಅಸಮಾಧಾನ ಮೂಡುವಂತೆ ಮಾಡಿತ್ತು. ಮಾತ್ರವಲ್ಲದೆ ಬ್ರೇಕ್‌ ವಾಟರ್‌ ಸಮಸ್ಯೆ ಯಿಂದಾಗಿ ದೋಣಿಗಳು ಬಂದರು ಒಳಗೆ ಪ್ರವೇಶಕ್ಕೆ ತೊಂದರೆಯಾಗಿದ್ದರಿಂದ, ಒಂದು ತಿಂಗಳ ಕಾಲ ವಿಳಂಬವಾಗಿ ಮೀನುಗಾರಿಕೆ ಆರಂಭಗೊಂಡಿತ್ತು. ಈಗಲೂ ಕಡಲಬ್ಬರ ಹೆಚ್ಚಾಗಿರುವ ಸಮಯದಲ್ಲಿ ದೋಣಿಗಳು ಸುಲಭವಾಗಿ ಬಂದರಿನ ಒಳ ಪ್ರವೇಶಿಸಲು ಕಷ್ಟವಾಗುತ್ತಿದೆ.
ಆದರೆ ಬೆಂಗಳೂರಿನಲ್ಲಿ ಕಳೆದ ವಾರ ರಾಜ್ಯ ಮಟ್ಟದ ಅಂದಾಜು ಪಟ್ಟಿ ಮತ್ತು ಸಲಹಾ ಸಮಿತಿಯ ಸಭೆ ನಡೆದಿದ್ದು, ಸಭೆಯಲ್ಲಿ ಈ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. 10 ಕೋ.ರೂ.ಗಿಂತ ಹೆಚ್ಚಿನ ಅನುದಾನದ ಕಾಮಗಾರಿಗೆ ಈ ಸಮಿತಿಯ ಅನುಮೋದನೆ ಅಗತ್ಯವಾಗಿದೆ. ಇನ್ನು ತಾಂತ್ರಿಕ ಸಮಿತಿಯ ಅನುಮೋದನೆ ಬಾಕಿ ಇದ್ದು, ಅದು 10-15 ದಿನದೊಳಗೆ ಸಿಗಲಿದ್ದು, ಆ ಬಳಿಕ ಟೆಂಡರ್‌ ಕರೆಯಲಿದ್ದಾರೆ. ಒಟ್ಟಾರೆ ಇನ್ನು 20-25 ದಿನದೊಳಗೆ ಟೆಂಡರ್‌ ಕರೆಯುವ ಸಾಧ್ಯತೆಗಳಿವೆ ಎಂದು ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ಇದನ್ನೂ ಓದಿ:ತುಮಕೂರು ಬಳಿ ಖಾಸಗಿ ಬಸ್‌ ಮತ್ತು ಸರಕು ಸಾಗಣೆ ವಾಹನ ಅಪಘಾತ : ನಾಲ್ವರ ದುರ್ಮರಣ

85 ಕೋ.ರೂ. ವೆಚ್ಚದ ಕಾಮಗಾರಿ
ಈ ಎರಡನೇ ಹಂತದ ಕಾಮಗಾರಿಗೆ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ, ಆಗಿನ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈಗಿನ ಸಚಿವ ಎಸ್‌. ಅಂಗಾರ ಮುತುವರ್ಜಿಯಿಂದಾಗಿ ಬಜೆಟ್‌ನಲ್ಲಿ 85 ಕೋ.ರೂ. ಅನುದಾನ ಘೋಷಿಸಲಾಗಿತ್ತು. ಉತ್ತರ ಭಾಗದಲ್ಲಿ 560 ಮೀ. ಹಾಗೂ ದಕ್ಷಿಣ ಭಾಗದಲ್ಲಿ 60 ಮೀ. ಸೇರಿ ಒಟ್ಟು 620 ಮೀ. ತಡೆಗೋಡೆ ನಿರ್ಮಾಣಗೊಳ್ಳಲಿದ್ದು, ದಕ್ಷಿಣ ಭಾಗದಲ್ಲಿ ದೋಣಿಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಸುದಿನ ವರದಿ
ಎರಡನೇ ಹಂತದ ಬ್ರೇಕ್‌ ವಾಟರ್‌ ಕಾಮಗಾರಿ ಕುರಿತಂತೆ “ಉದಯವಾಣಿ ಸುದಿನ’ವು ಅನೇಕ ಬಾರಿ ವಿಶೇಷ ವರದಿ ಪ್ರಕಟಿಸಿ, ಗಮನಸೆಳೆದಿತ್ತು. ಇದಲ್ಲದೆ ಅ.8 ರಂದು “ಉದಯವಾಣಿ ಸುದಿನ’ವು “ಇನ್ನು ಆರಂಭಗೊಳ್ಳದ ಎರಡನೇ ಹಂತದ ಕಾಮಗಾರಿ’ ಎನ್ನುವುದಾಗಿ ವಿಶೇಷ ವರದಿ ಪ್ರಕಟಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next