Advertisement

TB ಬೋರ್ಡ್‌ ರದ್ಧತಿಗೆ ಭುಗಿಲೆದ್ದ ಕೂಗು; ಮಂಡಳಿಯಲ್ಲಿ ಕರ್ನಾಟಕಕ್ಕೆ ಯಾವುದೇ ಆದ್ಯತೆ ಇಲ್ಲ

12:26 AM Aug 14, 2024 | Team Udayavani |

ಗಂಗಾವತಿ:ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್‌ಗೇಟ್‌ ಮುರಿದು ಬಿದ್ದು ಅನಾಹುತ ಸಂಭವಿಸಿದ ಬೆನ್ನಲ್ಲೇ ಟಿಬಿ ಬೋರ್ಡ್‌ ರದ್ದತಿ ಮಾಡಿ ಇಲ್ಲವೇ ಅಮೂಲಾಗ್ರ ಬದಲಾವಣೆ ಮಾಡಬೇಕೆಂಬ ಕೂಗು ಜೋರಾಗಿದೆ.

Advertisement

ತುಂಗಭದ್ರಾ ಜಲಾಶಯ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಯೋಜನೆಯಾಗಿದ್ದು ಕುಡಿಯುವ ನೀರು ಹಾಗೂ ಕೃಷಿಗಾಗಿ ಈ ಡ್ಯಾಂ ನಿರ್ಮಿಸಲಾಗಿದೆ. ಡ್ಯಾಂನಲ್ಲಿ ಶೇ.65ರಷ್ಟು ಕರ್ನಾಟಕದ್ದು, ಶೇ.35 ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಪಾಲಿದೆ. ಆದ್ದರಿಂದ 1953, ಸೆ.29ರಂದು ಡ್ಯಾಂ ಹಾಗೂ ನೀರಿನ ನಿರ್ವಹಣೆಗಾಗಿ ತುಂಗಭದ್ರಾ ಬೋರ್ಡ್‌ನ್ನು ಕೇಂದ್ರ ಸರ್ಕಾರದ ಸಿಡಬ್ಲ್ಯುಸಿ(ಕೇಂದ್ರ ನೀರು ಹಂಚಿಕೆ ಕಮಿಟಿ) ರಚನೆ ಮಾಡಿದೆ. ಈ ಬೋರ್ಡ್‌ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ನೀರು ಗೇಜ್‌ ಲೆಕ್ಕ ಹಾಕುವ ಅಭಿಯಂತರರನ್ನು ಕೇಂದ್ರ ಸರ್ಕಾರ ನೇಮಕ ಮಾಡುತ್ತದೆ. ಜತೆಗೆ ಮೂರು ರಾಜ್ಯಗಳ ಜಲಸಂಪನ್ಮೂಲ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಬೋರ್ಡ್‌ ಸದಸ್ಯರಾಗಿರುತ್ತಾರೆ.

ನಿರ್ವಹಣೆ ಶೂನ್ಯ:
ಜಲಾಶಯ, ಬಲದಂಡೆ ಮತ್ತು ಅದರ ವ್ಯಾಪ್ತಿಯ ಕಾಲುವೆಗಳ ನಿರ್ವಹಣೆ ಜವಾಬ್ದಾರಿ ಬೋರ್ಡ್‌ ಮೇಲಿದೆ. ಶೇ.60 ಆಂಧ್ರಪ್ರದೇಶ, ತೆಲಂಗಾಣ ಅಧಿಕಾರಿಗಳು ಹಾಗೂ ಶೇ.40 ಕರ್ನಾಟಕ ಅಧಿಕಾರಿಗಳು ಇದರ ನಿರ್ವಹಣೆ ಮಾಡುತ್ತಾರೆ. ಉಸ್ತುವಾರಿಯನ್ನು ಸ್ವತಃ ಬೋರ್ಡ್‌ ನೋಡಿಕೊಳ್ಳುತ್ತದೆ. ಆದರೆ ಬಲದಂಡೆ ಕಾಲುವೆ ಮತ್ತು ನದಿ ಮೂಲಕ ಆಂಧ್ರಪ್ರದೇಶದ ನೀರಿನ ಪಾಲನ್ನು ಕಡ್ಡಾಯವಾಗಿ ಪಡೆದುಕೊಳ್ಳಲು ತೋರುವ ಆಸಕ್ತಿಯನ್ನು ಬೋರ್ಡ್‌ ಹಾಗೂ ನಿರ್ವಹಣೆ ಮಾಡುವ ಅಧಿಕಾರಿಗಳು ಡ್ಯಾಂ ಹಾಗೂ ನೀರಿನ ನಿರ್ವಹಣೆಯಲ್ಲಿ ತೋರುತ್ತಿಲ್ಲ ಎಂಬ ಅಪವಾದವೂ ಇದೆ.

ಮೊದಲಿನಿಂದಲೂ ಗೊಂದಲ:
ಟಿಬಿ ಬೋರ್ಡ್‌ ಅಧಿಕಾರಿಗಳು ಕೇಂದ್ರ ಸರ್ಕಾರದಿಂದ ನೇಮಕಗೊಂಡರೂ ಹೆಚ್ಚಾಗಿ ಆಂಧ್ರಪ್ರದೇಶದ ಮೂಲದವರಾಗಿದ್ದು ನೀರಿನ ಲೆಕ್ಕಾಚಾರ ಮತ್ತು ಡ್ಯಾಂ, ಕಾಲುವೆಗಳ ಸಂಪೂರ್ಣ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಕರ್ನಾಟಕದ ಪಾಲಿನ ನೀರನ್ನು ಆಂಧ್ರಪ್ರದೇಶಕ್ಕೆ ರಾತ್ರೋರಾತ್ರಿ ಬಿಡಲಾಗುತ್ತದೆ ಎನ್ನುವ ವಾದ ರೈತರ ಸಂಘಟನೆಗಳ ಮುಖಂಡರಾದ್ದಾಗಿದೆ. ಕಳೆದ ಹಲವು ದಶಕಗಳಿಂದ ಬೋರ್ಡ್‌ ಅಧ್ಯಕ್ಷ-ಕಾರ್ಯದರ್ಶಿ ಹುದ್ದೆಗೆ ಕರ್ನಾಟಕ ಮೂಲದ ಅಧಿಕಾರಿಗಳನ್ನು ನೇಮಕ ಮಾಡಲು ಆದ್ಯತೆ ನೀಡುವ ಜತೆಗೆ ನೀರಿನ ಗೇಜ್‌ ಲೆಕ್ಕ ಮಾಡುವ ಓರ್ವ ಎಂಜಿನಿಯರ್‌ ಬದಲಿಗೆ ಮೂರು ರಾಜ್ಯಗಳ ಪ್ರತಿನಿಧಿ ಸುವ ಮೂವರು ಎಂಜಿನಿಯರ್‌ಗಳನ್ನು ನೇಮಕ ಮಾಡುವಂತೆ ಕೇಂದ್ರದ ಸಿಡಬ್ಲ್ಯೂ ಸಿಯ ನಿಯಮಗಳ ಬದಲಾವಣೆಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.

ತುಂಗಭದ್ರಾ ಡ್ಯಾಂ ಹಾಗೂ ನೀರಿನ ನಿರ್ವಹಣೆಯಲ್ಲಿ ಟಿಬಿ ಬೋರ್ಡ್‌ ಸಂಪೂರ್ಣವಾಗಿ ವಿಫಲವಾಗಿದೆ. 1953ರ ನಿಯಮಗಳಂತೆ ಬೋರ್ಡ್‌ ಹಾಗೂ ನೀರಿನ ಗೇಜ್‌ ಲೆಕ್ಕಹಾಕುವ ಅಧಿಕಾರಿಗಳ ನೇಮಕ ನಡೆಯುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಸಿಡಬ್ಲ್ಯುಸಿ ನಿಯಮಗಳನ್ನು ಬದಲಿಸಿ ಕರ್ನಾಟಕಕ್ಕೂ ಆದ್ಯತೆ ನೀಡಬೇಕು. ಗೇಜ್‌ ಲೆಕ್ಕ ಹಾಕುವ ಅಧಿ ಕಾರವನ್ನು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೂ ಕೊಡಬೇಕು. ಗೇಜ್‌ ಲೆಕ್ಕವನ್ನು ನದಿ ಹಾಗೂ ಕಾಲುವೆಗಳ ಕರ್ನಾಟಕದ ಕೊನೆಯ ಬಾರ್ಡರ್‌ನ ಬದಲಿಗೆ ಡ್ಯಾಂ ಹತ್ತಿರದಲ್ಲಿ ಮಾಡಬೇಕು. ಈ ಕುರಿತು ಹಲವು ದಶಕಗಳಿಂದಲೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
– ಹಂಪನಗೌಡ ಬಾದರ್ಲಿ, ಶಾಸಕರು, ಸಿಂಧನೂರು

Advertisement

ಟಿಬಿ ಬೋರ್ಡ್‌ ಡ್ಯಾಂ ಹಾಗೂ ನೀರಿನ ನಿರ್ವಹಣೆ ವಿಫಲವಾಗಿರುವ ಜತೆಗೆ ರಾಜ್ಯ ಸರ್ಕಾರವೂ ಪೂರ್ಣ ಪ್ರಮಾಣದಲ್ಲಿ ಅವಶ್ಯಕ ಎಂಜಿನಿಯರ್‌ಗಳು ಹಾಗೂ ಸಿಬ್ಬಂದಿ ನೇಮಕ ಮಾಡಬೇಕು. ಪ್ರತಿ ವರ್ಷ ಬಜೆಟ್‌ನಲ್ಲಿ ತುಂಗಭದ್ರಾ ಸೇರಿ ರಾಜ್ಯದ ಎಲ್ಲಾ ಡ್ಯಾಂಗಳ ನಿರ್ವಹಣೆಗೆ ಅಗತ್ಯ ಅನುದಾನ ಮೀಸಲಿಡಬೇಕು. ಅಚ್ಚುಕಟ್ಟು ರೈತರ ಜತೆಗೆ ಡ್ಯಾಂ, ಕಾಲುವೆ ನಿರ್ವಹಣೆ, ಬೆಳೆ ಪದ್ಧತಿ ಬಗ್ಗೆ ಕಾಲಕಾಲಕ್ಕೆ ಸಲಹೆ, ಸೂಚನೆ ಪಡೆಯಬೇಕು. ಹೂಳಿನ ಸಮಸ್ಯೆ ಇತ್ಯರ್ಥಕ್ಕೆ ನವಲಿ ಬಳಿ ಸಮಾನಾಂತರ ಡ್ಯಾಂ ಜತೆಗೆ ಕೆರೆಗಳ ಭರ್ತಿ ಮಾಡುವ ಯೋಜನೆ ಅನುಷ್ಠಾನ ಮಾಡಬೇಕು.
– ತಿಪ್ಪೇರುದ್ರಸ್ವಾಮಿ, ಬಿಜೆಪಿ ರೈತ ಮುಖಂಡ

-ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next