Advertisement

ಸರ್ಕಾರಿ ಶಾಲೆಯ ಶಿಕ್ಷಣಕ್ಕೆ ಫಲಿತಾಂಶ ಸಾಕ್ಷಿ

11:58 AM Jul 01, 2019 | Team Udayavani |

ಚನ್ನಪಟ್ಟಣ: ಸರ್ಕಾರಿ ಶಾಲೆಗಳು ಯಾವ ಖಾಸಗಿ ಶಾಲೆಗಳಿಗೂ ಕಡಿಮೆಯಿಲ್ಲ. ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಲಭ್ಯವಾಗುತ್ತಿದೆ ಎಂಬುದಕ್ಕೆ ಫಲಿತಾಂಶಗಳೇ ಸಾಕ್ಷಿಯಾಗಿವೆ ಎಂದು ಜಿಲ್ಲಾ ಎಸ್‌ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ಮೈಲನಾಯಕನಹಳ್ಳಿ ರವಿಕುಮಾರ್‌ ತಿಳಿಸಿದರು.

Advertisement

ಪಟ್ಟಣದ ಜೆ.ಸಿ.ರಸ್ತೆಯ ತಾಲೂಕು ಎಸ್‌ಡಿಎಂಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲೆಗಳು ದೇವಾಲಯಗಳಿದ್ದಂತೆ, ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡುವ ಮೂಲಕ ಶಾಲೆಗೆ ಹಾಗೂ ಪೋಷಕರಿಗೆ ಗೌರವ ತಂದು ಕೊಡಬೇಕು ಎಂದರು.

ತಮ್ಮ ಮೇಲೆ ಭರವಸೆ ಇಟ್ಟು ಜಿಲ್ಲಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿರುವ ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಅವರು, ಮಹತ್ತರ ಜವಾಬ್ದಾರಿ ನನ್ನ ಹೆಗಲಿಗೆ ಬಿದ್ದಿದೆ. ಎಲ್ಲರ ಸಲಹೆ ಸಹಕಾರ ಪಡೆದುಕೊಂಡು ಎಸ್‌ಡಿಎಂಸಿ ಕಾರ್ಯವೈಖರಿಯನ್ನು ಚುರುಕುಗೊಳಿಸಲಾಗವುದು ಎಂದರು.

ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರದಲ್ಲೂ ಸಾಧನೆ: ಎಸ್‌ಡಿಎಂಸಿ ಜಿಲ್ಲಾ ಉಸ್ತುವಾರಿ ರಾಜು ಮಾತನಾಡಿ, ಸರ್ಕಾರಿ ಶಾಲೆಗಳು ಎಂದರೆ ದೊಡ್ಡಮಟ್ಟದ ಕಾರ್ಖಾನೆಗಳಿದ್ದಂತೆ, ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ನೀಡುವ ಗುಣಮಟ್ಟದ ಶಿಕ್ಷಣವನ್ನು ಯಾವ ಖಾಸಗಿ ಶಾಲೆಯಲ್ಲೂ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಖಾಸಗಿ ಶಾಲೆಗಳತ್ತ ಏತಕ್ಕೆ ಹೋಗಬೇಕು ಎಂದು ಪ್ರಶ್ನಿಸಿದ ಅವರು, ಎಸ್‌ಡಿಎಂಸಿ ಹೋರಾಟದ ಪ್ರತಿಫಲವಾಗಿ ಇಂದು ಸರ್ಕಾರ ಆರ್‌ಟಿಐ ತೆಗೆದು ಹಾಕಿದೆ. ಸರ್ಕಾರಿ ಶಾಲೆಗಳಲ್ಲಿಯೂ ಅಂಗ್ಲ ಮಾಧ್ಯಮವನ್ನು ತೆರದಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

Advertisement

ಕನ್ನಡ ಭಾಷೆಗೆ ಆದ್ಯತೆ ನೀಡಿ: ಕನ್ನಡ ಭಾಷೆಗೆ ಮೊದಲು ಆದ್ಯತೆ ನೀಡಬೇಕು. ಅನಿವಾರ್ಯವಾಗಿ ಬೇಕಾಗಿರುವ ಅಂಗ್ಲ ಮಾಧ್ಯಮವನ್ನು ಭಾಷೆಯನ್ನಾಗಿ ಪಡೆದುಕೊಳ್ಳಬೇಕು. ಹಲವು ವರ್ಷಗಳ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳಿಗೂ ಇಂದಿನ ಸರ್ಕಾರಿ ಶಾಲೆಗಳ ಸ್ಥಿತಿಗತಿಗೂ ಭಾರೀ ವ್ಯಾತ್ಯಾಸವಾಗಿದ್ದು, ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಸುಧಾರಣೆಯಾಗಿದೆ ಎಂದು ಪ್ರಸಂಶೆ ವ್ಯಕ್ತಪಡಿಸಿದರು.

ಸರ್ಕಾರ ಸರ್ಕಾರಿ ಶಾಲೆಗಳ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಜೊತೆಯಲ್ಲಿಯೇ ಮಕ್ಕಳ ಅರೋಗ್ಯದ ಮೇಲೆ ನಿಗಾ ಇಟ್ಟು, ಬಿಸಿಯೂಟ, ಹಾಲು, ಮೊಟ್ಟೆ ಹಾಗೂ ವಿದ್ಯಾಭ್ಯಾಸಕ್ಕೆ ಬೇಕಾದ ಪಠ್ಯ ಪುಸ್ತಕ, ಸಮವಸ್ತ್ರ, ಶೂ, ಸೈಕಲ್ ಹಲವಾರು ರೀತಿಯ ಪರಿಕರಗಳನ್ನು ನೀಡುತ್ತಾ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೆಯ ವಿಚಾರವಾಗಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳು ಪ್ರಗತಿ: ಎಸ್‌ಡಿಎಂಸಿ ರಾಜ್ಯ ಉಪಾಧ್ಯಕ್ಷ ನಾಗವಾರ ಶಂಭುಗೌಡ ಮಾತನಾಡಿ, ರಾಜ್ಯ ಸರ್ಕಾರ ಎಸ್‌ಡಿಎಂಸಿ ಸ್ಥಾಪನೆ ಮಾಡಿದ ತರುವಾಯು, ಶಿಕ್ಷಣ ತಜ್ಞ ನಿರಂಜನಾ ಆರಾಧ್ಯ ಮಾರ್ಗದರ್ಶನದಲ್ಲಿ ಸಮಿತಿಯ ಸದಸ್ಯರ ನಿಷ್ಕಳಂಕ ಸೇವೆಯಿಂದ ಅಳಿವಿನ ಅಂಚಿನಲ್ಲಿದ್ದ ಸರ್ಕಾರಿ ಶಾಲೆಗಳು ಪ್ರಗತಿ ಕಾಣಲು ಸಾಧ್ಯವಾಗಿದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮಾಡುವ ಶಿಕ್ಷಕ ವರ್ಗ ಪ್ರತಿಭಾವಂತರಾಗಿರುವುದರ ಜೊತೆಗೆ ಪದವಿಧರರಾಗಿರುತ್ತಾರೆ ಎಂಬುದು ಬಹುಪಾಲು ಪೋಷಕರಿಗೆ ಮನವರಿಕೆಯಾಗಿಲ್ಲ. ಇದರಿಂದ ಅವರ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ. ಪೋಷಕರು ಚಿಂತನೆ ಮಾಡುವ ಪರಿಪಾಠವನ್ನು ಬೆಳಸಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಉಪಾಧ್ಯಕ್ಷ ವೆಂಕಟಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಪುಟ್ಟಸ್ವಾಮಿ, ನಿವೃತ್ತ ಆರೋಗ್ಯ ನಿರೀಕ್ಷಕ ಪುಟ್ಟಪ್ಪ, ತೋಟಗಾರಿಕೆ ನಿವೃತ್ತ ಸಹಾಯಕ ನಿರ್ದೇಶಕ ಬೆಟ್ಟೇಗೌಡ, ಸಂಘಟನಾ ಕಾರ್ಯದರ್ಶಿಗಳಾದ ಕುಮಾರ್‌, ಹೆಚ್.ಆರ್‌.ರಮೇಶ್‌, ಉಪಾಧ್ಯಕ್ಷ ಮಹಮ್ಮದ್‌ ಹಮೀದ್‌, ಮೂರ್ತಿ, ಶಿವಕುಮಾರ್‌ ಹಾಜರಿದ್ದರು.

ಸಾಧಕರು ಮಕ್ಕಳನ್ನು ಯಾವ ಶಾಲೆಗೆ ಸೇರಿದ್ದಾರೆ?:

ಕನ್ನಡ ಭಾಷೆಗಾಗಿ ಹೋರಾಟ ನಡೆಸುವ ನಮ್ಮ ಸಾಹಿತಿಗಳು, ಹೋರಾಟಗಾರರು, ಸರ್ಕಾರಿ ಶಾಲೆಯ ಶಿಕ್ಷಕರು, ತಮ್ಮ ಮಕ್ಕಳನ್ನು ಯಾವ ಸರ್ಕಾರಿ ಶಾಲೆಗೆ ದಾಖಲಿಸಿ ಶಿಕ್ಷಣ ನೀಡುತ್ತಿದ್ದಾರೆ ಎಂದು ಮೊದಲು ಬಹಿರಂಗಪಡಿಸಿದರೆ, ನಂತರ ಮಹನೀಯರ ಹೋರಾಟಗಳಿಗೆ ಅರ್ಥ ಬರುತ್ತದೆ ಎಂದು ಉದ್ಯಮಿ ಮಹೇಶ್ವರ್‌ ಹೇಳಿದರು. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ, ಆಳ ನೋಡುವುದನ್ನು ಮೊದಲು ಬಿಡಬೇಕು. ಕನ್ನಡ ನಾಡು, ನುಡಿ, ಭಾಷೆಗೆ ಹೋರಾಟದ ಕಿಚ್ಚನ್ನು ಬೆಳಸಿಕೊಂಡಿರುವ ನಾವು ನಮ್ಮ ಮಕ್ಕಳಿಗೂ ಕನ್ನಡದ ಕಂಪಿನ ಗಮಲನ್ನು ಪಸರಿಸಬೇಕು. ಕನ್ನಡ ಶಾಲೆಗಳ ಉಳಿವಿಗೆ ನಮ್ಮ ಸಹಕಾರ, ಹೋರಾಟ ನಿರಂತರವಾಗಿರಲಿ ಎಂದು ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next