Advertisement

ಹೊರ ರಾಜ್ಯದ ವಿದ್ಯಾರ್ಥಿಗಳ ಉಪಟಳ: ಹೈಕೋರ್ಟ್‌ ಕಳವಳ

11:20 AM Dec 07, 2018 | Team Udayavani |

ಬೆಂಗಳೂರು: ಕಾನೂನು ವಿದ್ಯಾರ್ಥಿನಿಗೆ ಇಬ್ಬರು ಸಹಪಾಠಿಗಳು ಕಿರುಕುಳ ನೀಡಿದ ಪ್ರಕರಣ ಸಂಬಂಧ ಖಾಸಗಿ ಶಿಕ್ಷಣ ಸಂಸ್ಥೆಗಳು, ಡೀಮ್ಡ್ (ಸ್ವಾಯತ್ತ) ವಿವಿಗಳನ್ನು ಗುರುವಾರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ಶಿಕ್ಷಣ ಸಂಸ್ಥೆಗಳಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು. ಹದ್ದು ಮೀರಿ ವರ್ತಿಸುವ ವಿದ್ಯಾರ್ಥಿಗಳನ್ನು “ಮಿಲಿಟರಿ ಶಿಸ್ತಿ’ನ ಮೂಲಕ ನಿಯಂತ್ರಿಸಬೇಕೆಂದು ಕಿವಿಮಾತು ಹೇಳಿದೆ.

Advertisement

ನಗರದ ಪ್ರತಿಷ್ಠಿತ ಡೀಮ್ಡ… ವಿವಿಯಲ್ಲಿ ಕಾನೂನು ಪದವಿ ಪಡೆಯುತ್ತಿರುವ ವಿದ್ಯಾರ್ಥಿನಿಗೆ ಸಹಪಾಠಿಗಳು ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂಬ ಆರೋಪ ಕುರಿತ ಅರ್ಜಿಯು ನ್ಯಾ.ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆಗ ಖಾಸಗಿ ಶಿಕ್ಷಣ ಸಂಸ್ಥೆಗಳು, ಡೀಮ್ಡ್ ವಿವಿಗಳಲ್ಲಿ ಅಧ್ಯಯನ ಮಾಡುವ ಹೊರ ರಾಜ್ಯದ ವಿದ್ಯಾರ್ಥಿಗಳ ಉಪಟಳ ರಾಜ್ಯದಲ್ಲಿ ಹೆಚ್ಚುತ್ತಿರುವ ಬಗ್ಗೆ ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.

ವಿಚಾರಣೆ ವೇಳೆ, ವಿದ್ಯಾರ್ಥಿನಿ ಪರವಾದ ಮಂಡಿಸಿದ ಹಿರಿಯ ವಕೀಲೆ ಜಯ್ನಾ ಕೊಠಾರಿ, ಅರ್ಜಿದಾರ ವಿದ್ಯಾರ್ಥಿನಿಗೆ ದೆಹಲಿಯಿಂದ ಇಲ್ಲಿಗೆ ಬಂದು ಕಲಿಯುತ್ತಿರುವ ಇಬ್ಬರು ಸಹಪಾಠಿಗಳು ಮೊಬೈಲ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಆಡಳಿತ
ಮಂಡಳಿಗೆ ದೂರು ನೀಡಿದರೆ ಯಾವುದೇ  ಯೋಜನವಾಗಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿವಿ ಪರ ವಕೀಲರು, “ಆಕಸ್ಮಾತ್‌ ಆಗಿ ಅಶ್ಲೀಲ ಸಂದೇಶಗಳು ವಿದ್ಯಾರ್ಥಿ  ನಿಯ ಮೊಬೈಲ್‌ ಫೋನ್‌ಗೆ ರವಾನೆಯಾಗಿದೆ ಎಂದು ನ್ಯಾಯಪೀಠಕ್ಕೆ ಹೇಳಿದರು.

ಲಾಭದ ಆಸೆಗೆ ಮೌನ: ಇದರಿಂದ ಕೋಪಗೊಂಡ ನ್ಯಾಯಮೂರ್ತಿಗಳು, ಕಾಲೇಜು ಕ್ಯಾಂಪಸ್‌ಗಳಲ್ಲಿ ಈ ರೀತಿಯ ಚಟುವಟಿಕೆ ನಿಯಂತ್ರಿಸುವ ಬದಲು, ಡೊನೇಷನ್‌ ಮರ್ಜಿಗೆ ಬಿದ್ದು ಸುಮ್ಮನಿದ್ದೀರ ಅನಿಸುತ್ತಿದೆ. 19ರ ಹರೆಯದ ವಿದ್ಯಾರ್ಥಿಗಳು ಸಮಾಜಘಾತುಕ ಶಕ್ತಿಗಳಾಗಿ ಬೆಳೆಯುತ್ತಿದ್ದಾರೆ.

ರಾಜ್ಯಕ್ಕೆ, ದೇಶಕ್ಕೆ ಕೆಟ್ಟ ಹೆಸರು ತರುವಂತೆ ವರ್ತಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳು ಇವರನ್ನು ಕಠಿಣ ಶಿಕ್ಷೆಗೆ ಒಳಪಡಿಸದೆ ಲಾಭದ ಆಸೆಗಾಗಿ ಮೌನ ವಹಿಸುತ್ತಿರುವುದು ಸರಿಯಲ್ಲ. ಶಿಕ್ಷಣ ಸಂಸ್ಥೆಗಳಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು. ಉಪಟಳ ಮಾಡುವ ವಿದ್ಯಾರ್ಥಿಗಳನ್ನು “ಮಿಲಿಟರಿ ಶಿಸ್ತಿ’ನ
ಮೂಲಕ ಹತೋಟಿಯಲ್ಲಿಡಬೇಕೆಂದು ಕಟು ಮಾತುಗಳಲ್ಲಿ ಹೇಳಿದರು.

Advertisement

ಅಲ್ಲದೇ ಇದು ಎರಡು ಕಡೆ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ. ಹಾಗಾಗಿ ಅರ್ಜಿದಾರ ವಿದ್ಯಾರ್ಥಿನಿ ಪರ ವಕೀಲರು ಹಾಗೂ ಪ್ರತಿವಾದಿ ವಿದ್ಯಾರ್ಥಿಗಳ ಪರ ವಕೀಲರು ಪರಸ್ಪರ ಕುಳಿತು ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ನೀಡಿದ ನ್ಯಾಯಪೀಠ ವಿಚಾರಣೆಯನ್ನು
ಡಿ.14ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next