ನವದೆಹಲಿ: ಭಾರತದ ವೈಮಾನಿಕ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣಕ್ಕೆ ಸಾಕ್ಷ್ಯ ಎಂಬಂತೆ, ದೇಶದಲ್ಲಿ ಒಟ್ಟಾರೆ 17,726 ನೋಂದಾಯಿತ ಪೈಲಟ್‌ಗಳ ಪೈಕಿ ಮಹಿಳಾ ಪೈಲಟ್‌ಗಳ ಸಂಖ್ಯೆಯೇ 2,764ರಷ್ಟಿದೆ.
ಈ ಮೂಲಕ ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದ ಮಹಿಳಾ ಪೈಲಟ್‌ಗಳನ್ನು ಹೊಂದಿರುವ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ.
ಮಹಿಳಾ ವಿಮಾನ ಪೈಲಟ್‌ಗಳ ಅಂತಾರಾಷ್ಟ್ರೀಯ ಸೊಸೈಟಿಯ ಅಂಕಿಅಂಶಗಳ ಪ್ರಕಾರ, ಜಾಗತಿಕವಾಗಿ ಮಹಿಳಾ ಪೈಲಟ್‌ಗಳು ಪ್ರಮಾಣ ಶೇ.5ರಷ್ಟಿದೆ. ಆದರೆ, ಭಾರತದಲ್ಲಿ ಇದು ಶೇ.15ಕ್ಕಿಂತಲೂ ಹೆಚ್ಚಿದೆ. ಈ ಮಾಹಿತಿಯನ್ನು ಸೋಮವಾರ ನಾಗರಿಕ ವಿಮಾನಯಾನ ಖಾತೆ ಸಹಾಯಕ ಸಚಿವ ವಿ.ಕೆ.ಸಿಂಗ್ ಅವರು ರಾಜ್ಯಸಭೆಗೆ ನೀಡಿದ್ದಾರೆ.
ಇದನ್ನೂ ಓದಿ:ಒಮಿಕ್ರಾನ್ ಸೋಂಕಿತರ ಸಂಪರ್ಕಿತರಿಗೆ ಸೋಂಕು ಕಂಡುಬಂದಿಲ್ಲ; ಸಚಿವ ಡಾ.ಕೆ.ಸುಧಾಕರ್
ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಬಹುತೇಕ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದ ಮಹಿಳಾ ಪೈಲಟ್‌ಗಳ ಶೇಕಡಾವಾರು ಪ್ರಮಾಣ ದುಪ್ಪಟ್ಟಿದೆ ಎಂದೂ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಏರ್‌ಇಂಡಿಯಾ ಸಂಸ್ಥೆಯು ಮಹಿಳಾ ಪೈಲಟ್‌ಗಳ ವಿರುದ್ಧ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಭಾರತೀಯ ವಾಣಿಜ್ಯ ಪೈಲಟ್‌ಗಳ ಸಂಘವು ಆರೋಪ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.