Advertisement

ನಮ್ಮದು ಕಾಯಕದಲ್ಲಿ ದೇವರನ್ನು ಕಂಡ ನಾಡು

04:11 PM Dec 06, 2021 | Shwetha M |

ಮೋರಟಗಿ: ಶರಣರು-ಸತ್ಪುರುಷರು ನಡೆದಾಡಿದ ನಾಡು ನಮ್ಮದು. ನಮ್ಮ ದೇಶದ ಸಂಸ್ಕೃತಿ ವಿಶ್ವವೇ ಮೆಚ್ಚವಂಥದ್ದು. ನಾಡಿನಲ್ಲಿ ಶರಣರು ತಮ್ಮ ಕಾಯಕದ ಮೂಲಕ ಕೈಲಾಸ ಕಂಡು ಪರಮಾತ್ಮನನ್ನೇ ಧರೆಗಿಳಿಸಿದ್ದಾರೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

Advertisement

ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಮೌನೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು.

ಪರಮಾತ್ಮ ಕಣ್ಣಿಗೆ ಕಾಣಲ್ಲ. ಆದರೆ ನಿಮ್ಮ ಕಾಯಾ-ವಾಚಾ-ಮನಸಾ ಶುದ್ಧವಿಟ್ಟುಕೊಂಡು ತನು-ಮನ-ಧನದಿಂದ ಜೀವನ ಸಾಗಿಸಿದರೆ ನಿಮ್ಮ ಕಾಯಕದಲ್ಲಿ ದೇವರು ಕಾಣಿಸುತ್ತಾನೆ. ಇತ್ತೀಚಿನ ದಿನಗಳಲ್ಲಿ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗಿ ನಡೆಯುತ್ತಿವೆ. ಯುವಕರು ಶರಣರು-ಸಂತರ ಪುರಾಣ, ಕೀರ್ತನೆ, ಸಂಸಾರಿಕ ನಾಟಕ ನೋಡಬೇಕು. ಈ ಮೂಲಕ ಉತ್ತಮ ಮೌಲಿಕ ಸಂದೇಶ ಅಳವಡಿಸಿಕೊಂಡರೆ ಸುಂದರ ಜೀವನ ಸಾಗಿಸಲು ಸಾಧ್ಯ ಎಂದರು.

ಇತ್ತೀಚಿನ ದಿನಗಳಲ್ಲಿ ನಡೆಯುವ ಹೇಯ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಹಿಂದಿನ ಅಧಿಕಾರವಧಿಯಲ್ಲಿ ವೀರಭದ್ರೇಶ್ವರ ದೇವಸ್ಥಾನದ ನವೀಕರಣಕ್ಕೆ ಸ್ಪಂದಿಸಿದ್ದೆ. ಈಗ ಭವ್ಯ ದೇಗುಲವಾಗಿ ಕಾರ್ಯಕ್ರಮ ಜರುಗುತ್ತಿರುವುದು ಸಂತೋಷ ತಂದಿದೆ. ಕಳೆದ 15 ದಿನಗಳ ಹಿಂದೆ ಸಿದ್ದರಾಮೇಶ್ವರ ಜಾತ್ರೆ ಕಾರ್ಯಕ್ರಮದಲ್ಲಿ ಭಗವಹಿಸಿದ್ದಾಗ ಅನೇಕ ಮನವಿಗಳು ಬಂದಿವೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವುದೇ ಆಶ್ವಾಸನೆ ನೀಡಿರಲಿಲ್ಲ. ಮಾರ್ಚ್‌ ತಿಂಗಳ ಅಂತ್ಯದಲ್ಲಿ ಸಿದ್ಧರಾಮೇಶ್ವರ ದೇವಸ್ಥಾನ ಅಭಿವೃದ್ಧಿಪಡಿಸುವ ಜೊತೆಗೆ ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸೊನ್ನ ದಾಸೋಹ ಮಠದ ಡಾ| ಶಿವಾನಂದ ಸ್ವಾಮೀಜಿ, ಸಿಂದಗಿ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ನಿಂಗನಗೌಡ ಪಾಟೀಲ, ಗುರುಪಾದಪ್ಪ ನೆಲ್ಲಗಿ, ಸಿದ್ದನಗೌಡ ಗುತ್ತರಗಿ, ಶಿವರಾಯ ಹಿಪ್ಪರಗಿ, ರೇವಣಸಿದ್ದ ಮಸಳಿ, ಪ್ರಕಾಶ ಅಡಗಲ್ಲ, ಡಾ| ರಾಜಶೇಖರ ಪತ್ತಾರ, ಡಾ| ಆರ್‌.ಬಿ. ಕುಲಕರ್ಣಿ, ಸಂತೋಷ ಶಾಬಾದಿ, ಶರಣು ಕೋಳಕೂರ, ಮುರುಗೇಂದ್ರ ಕೋರಿ, ಭೂತಾಳಿ ಖಾನಾಪೂರ, ವಿದ್ಯಾಧರ ಮಳಗಿ, ಶ್ರೀಶೈಲ ಅಣಬಸ್ಟಿ ಸೇರಿದಂತೆ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next