Advertisement

Politics: ನಮ್ಮದು ಜಾತ್ಯತೀತ ಸರಕಾರ: ಸಿದ್ದರಾಮಯ್ಯ

10:27 PM Oct 01, 2023 | Team Udayavani |

ಬೆಂಗಳೂರು: ನಮ್ಮದು ಜಾತ್ಯತೀತ ಸರಕಾರ. ಎಲ್ಲ ಜಾತಿಗಳನ್ನೂ ಸಮಾನವಾಗಿ ಕಾಣುತ್ತೇವೆ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯತರ ಕಡೆಗಣನೆ ಆಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

Advertisement

ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಕಾಂಗ್ರೆಸ್‌ನಲ್ಲಿ ಪರ-ವಿರೋಧದ ಚರ್ಚೆಗೆ ವಿಪಕ್ಷ ಬಿಜೆಪಿಯೂ ಧ್ವನಿಗೂಡಿಸಿದ್ದು, ಶಾಮನೂರು ಹೇಳಿಕೆಯನ್ನು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸಹಿತ ಹಲವು ನಾಯಕರು ಸಮರ್ಥಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಮುಂತಾದ ಕಾಂಗ್ರೆಸ್‌ ನಾಯಕರು, ಶಿವಶಂಕರಪ್ಪ ಅವರ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಸರಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂದಿದ್ದ ಶಿವಶಂಕರಪ್ಪ, ನಾವು ಮನಸ್ಸು ಮಾಡಿದರೆ ವೀರಶೈವರ ಸರಕಾರವನ್ನು ಅಧಿಕಾರಕ್ಕೆ ತರುವುದು ಕಷ್ಟವೇನಲ್ಲ. ನಮ್ಮಲ್ಲಿ ಒಗ್ಗಟ್ಟು ಇರಬೇಕಷ್ಟೇ ಎಂದಿದ್ದರು. ಇಲ್ಲಿಂದ ಶುರುವಾದ ಚರ್ಚೆ, ರಾಜ್ಯ ರಾಜಕಾರಣದ ಗತಿಯನ್ನು ಬೇರೆಡೆಗೆ ಕೊಂಡೊಯ್ಯುತ್ತಿದೆ. ಎಲ್ಲಕ್ಕೂ ಒಂದೇ ಮಾತಿನಲ್ಲಿ ಉತ್ತರಿಸಿರುವ ಸಿಎಂ, ನಮ್ಮದು ಜಾತ್ಯತೀತ ಸರಕಾರ, ಎಲ್ಲ ಜಾತಿಗಳನ್ನೂ ಸಮಾನವಾಗಿ ಕಾಣಲಾಗುತ್ತಿದೆ ಎಂದಷ್ಟೇ ಹೇಳಿದ್ದಾರೆ.

ಅನ್ಯಾಯ ಮಾಡಿದವರು ಹೇಳಿಕೊಳ್ಳುತ್ತಾರೆಯೇ?
ತನ್ನ ಮಾತನ್ನು ಸಮರ್ಥಿಸಿಕೊಳ್ಳುತ್ತಲೇ ಬಂದಿರುವ ಶಾಮನೂರು, ನನ್ನ ಮಾತಿಗೆ ಬದ್ಧನಾಗಿದ್ದೇನೆ. ಚರ್ಚೆ ಆಗಲಿ ಎಂದು ನಾನು ಈ ಮಾತು ಹೇಳಿರಲಿಲ್ಲ. ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗಲಿ ಎಂಬುದಷ್ಟೇ ಆಶಯ. ಎಷ್ಟು ಜನರಿಗೆ ಸ್ಥಾನಮಾನ ಸಿಕ್ಕಿದೆ, ಇಲ್ಲ ಎಂಬ ಅಂಕಿ-ಸಂಖ್ಯೆ ನಮ್ಮ ಬಳಿಯೂ ಇದೆ. ಸಮಯ ಬಂದಾಗ ನಾನೂ ಪೂರ್ಣ ವಿವರ ಕೊಡುತ್ತೇವೆ. ಅನ್ಯಾಯ ಮಾಡಿದವರು ಅನ್ಯಾಯ ಮಾಡಿದ್ದೇನೆ ಎಂದು ಹೇಳುತ್ತಾರೆಯೇ? ಒಗ್ಗಟ್ಟಿದ್ದರೆ ಶಕ್ತಿ ಇರುತ್ತದೆ. ಅದಿನ್ನೂ ಬಂದಿಲ್ಲ. ಹೀಗಾಗಿ ಹೇಳಿದ್ದೇನೆ. ಎಲ್ಲ ಪಕ್ಷ ಸೇರಿ 76 ಲಿಂಗಾಯತ ಶಾಸಕರು ಗೆದ್ದಿದ್ದೇವೆ. ಯಡಿಯೂರಪ್ಪ ಅವರೊಂದಿಗೆ ಸೇರಿ ಒಗ್ಗಟ್ಟು ಪ್ರದರ್ಶಿಸುವ ಮಟ್ಟಕ್ಕೆ ಬಂದಿಲ್ಲ ಎಂದಿದ್ದರು.

ವೀರಶೈವರು ಒಂದಾಗಬೇಕು-ಬಿಎಸ್‌ವೈ
ಇದಕ್ಕೆ ದನಿಗೂಡಿಸಿರುವ ಯಡಿಯೂರಪ್ಪ, ಶಾಮನೂರು ಅವರು ವೀರಶೈವ ಸಮಾಜದ ರಾಷ್ಟ್ರೀಯ ಅಧ್ಯಕ್ಷರು. ಅವರು ವ್ಯಕ್ತಪಡಿಸಿರುವ ಭಾವನೆಗಳಿಗೆ ನನ್ನ ಸಂಪೂರ್ಣ ಸಹಮತ ಇದೆ. ದೊಡ್ಡ ಪ್ರಮಾಣದಲ್ಲಿ ವೀರಶೈವ ಸಮಾಜ ಇದ್ದರೂ ಕಡೆಗಣಿಸುತ್ತಿರುವ ಬಗ್ಗೆ ಅವರ ಕಳಕಳಿ ಸರಿಯಾಗಿದೆ ಎಂದು ಹೇಳಿದರು.
ಶಾಸಕ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿ, ಒಂದು ಜಾತಿಗೆ ಸೀಮಿತವಾಗಿ ಅಧಿಕಾರಿಗಳ ಆಯ್ಕೆ ಮತ್ತು ಇನ್ನೊಂದು ಜಾತಿಯವರಿಗೆ ಅನ್ಯಾಯ ಆಗುತ್ತಿರುವ ಕುರಿತು ಶಾಮನೂರು ಮಾತನಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಅಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಒಂದು ಜಾತಿಗೆ ಆದ್ಯತೆ, ಇನ್ಯಾರಿಗೋ ಅನ್ಯಾಯ ಮಾಡುತ್ತಾರೆಂದರೆ, ಇದು ಸಂವಿಧಾನ ವಿರೋಧಿ ಸರಕಾರವಾಗಿದೆ ಎಂದರು.

Advertisement

ಜಾತಿ ಆಧಾರದ ಮೇಲೆ ಹುದ್ದೆ ನೀಡಲಾಗದು
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿ, ಶಾಮನೂರು ಶಿವಶಂಕರಪ್ಪ ಅವರು ಒಂದು ಸಮಾಜದ ಅಧ್ಯಕ್ಷರು. ಆ ಸಮಾಜಕ್ಕೆ ಎಷ್ಟು ಸ್ಥಾನ ಸಿಕ್ಕಿದೆ ಎಂಬ ಮಾಹಿತಿ ಅವರಿಗಿದೆ. ಅಧಿಕಾರಿಗಳು ಸಹಜವಾಗಿ ತಮಗೆ ಉತ್ತಮ ಹುದ್ದೆ ನೀಡಬೇಕೆಂದು ನಿರೀಕ್ಷಿಸುತ್ತಾರೆ. ಆದರೆ, ಸರಕಾರ ಜಾತಿ ಆಧಾರದ ಮೇಲೆ ಹುದ್ದೆ ನೀಡಲು ಆಗುವುದಿಲ್ಲ. ನಾವು ಎಲ್ಲರನ್ನೂ ಗಮನಿಸಬೇಕು. ಮುಖ್ಯಮಂತ್ರಿಗಳು ಎಲ್ಲವನ್ನೂ ಸಮತೋಲನ ಮಾಡಿಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರಿಂದಲೇ ಲಿಂಗಾಯತರು ಗೆದ್ದಿದ್ದು. ಹೀಗಾಗಿ ಅನವಶ್ಯಕವಾಗಿ ಏನೇನೋ ಮಾತನಾಡಬೇಡಿ. ಇದಕ್ಕೆ ಖಾರ ವಾಗಿ ಪ್ರತಿಕ್ರಿಯೆ ನೀಡುತ್ತೇನೆ. ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದರಿಂದ ಹೆಚ್ಚು ಜನ ಗೆದ್ದಿದ್ದಾರೆ . ರಾಜ್ಯ ಸರಕಾರದಲ್ಲಿ ಲಿಂಗಾ ಯತ ನಾಯಕರ ಕಡೆಗಣನೆ ಕುರಿತು ಶಾಮನೂರು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಾಮನೂರು ಶಿವಶಂಕರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಬೇಕಿತ್ತು ಎಂದರೆ ನಾಯಕತ್ವ ತೆಗೆದುಕೊಳ್ಳಿ. ನಿಮ್ಮ ಲಿಂಗಾಯತ ಜನಾಂಗದವರ ಕೈಯಲ್ಲಿ ಹೆಚ್ಚು ವೋಟ್‌ ಹಾಕಿಸಿಕೊಳ್ಳಿ. ಗೆದ್ದು ಬಂದು ಮುಖ್ಯಮಂತ್ರಿ ಆಗಿ, ಅದರಲ್ಲಿ ನಿಮ್ಮ ಆಸಕ್ತಿ ತೋರಿಸಿ. ನಮ್ಮ ರಾಜ್ಯದಲ್ಲಿ ಇರುವ ಲಿಂಗಾಯತ ಸಹಿತ ಎಲ್ಲ ಧರ್ಮದವರು ಆಶೀರ್ವಾದ ಮಾಡಿದ್ದಾರೆ. ಹೆಚ್ಚಾಗಿ ಕುರುಬ ಸಮುದಾಯದ್ದೂ ಇದೆ . ಒಂದು ಜಾತಿಯ ಪಕ್ಷದ ಪ್ರತಿನಿಧಿ  ಅಂತ ಮಾತಾಡುವುದನ್ನು ನಾನು ಖಂಡಿಸುತ್ತೇನೆ. ನಿಮಗೆ ಕಾಂಗ್ರೆಸ್‌ನಲ್ಲಿ ಹಲವು ಅವಕಾಶಗಳು ಸಿಕ್ಕಿವೆ. ಲಿಂಗಾಯತರಿಗೆ ಏಳು ಸಚಿವ ಸ್ಥಾನ ನೀಡಲಾಗಿದೆ. ಇನ್ನೂ ಎಷ್ಟು ಜನ ಬೇಕಿತ್ತು. ಜಾತಿಯ ಮೇಲೆ ಯಾರಿಗೂ ಸ್ಥಾನಮಾನ ಸಿಗುವುದಿಲ್ಲ. ಬೇರೆ ಬೇರೆ ಜಾತಿಯವರಿಗೆ ಎಲ್ಲೆಲ್ಲಿ ಅವಕಾಶ ನೀಡಬೇಕೋ ಅದನ್ನು ಮಾಡಿಕೊಟ್ಟಿದ್ದಾರೆ. ಜಾತಿ ಆಧಾರದ ಮೇಲೆ ಅ ಧಿಕಾರಿಗಳ ಆಯ್ಕೆ ಆಗುತ್ತಿದ್ದರೆ ಸರಿ ಮಾಡಲು ಹೇಳಿ.
– ಎಚ್‌.ವಿಶ್ವನಾಥ್‌ , ಮಾಜಿ ಸಚಿವ

ಕೆಲವು ಅಧಿ ಕಾರಿಗಳ ಮಾತು ಕೇಳಿ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿರಬಹುದು. ಕಾಂಗ್ರೆಸ್‌ನಲ್ಲಿ ಅವರು ಶಾಸಕರಾಗಿ, ಸಚಿವರಾಗಿ ಮತ್ತು ಸಂಸದರಾಗಿ ಕೆಲಸ ಮಾಡಿದವರು. ಈಗಿನ ಸರಕಾರದಲ್ಲೂ ಅವರ ಪುತ್ರ ಮಂತ್ರಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಅವರಿಗೆ ಗೌರವವಿದೆ. ಅವರು ಕೂಡ ಪಕ್ಷಕ್ಕೆ ನಿಷ್ಠರಾಗಿದ್ದಾರೆ. ನಮ್ಮ ಪಕ್ಷದಲ್ಲಿ 44 ಲಿಂಗಾಯತ ಶಾಸಕರಿದ್ದು, ಅವರಲ್ಲಿ 7 ಮಂದಿ ಸಚಿವರಾಗಿದ್ದಾರೆ. ಕಾಂಗ್ರೆಸ್‌ ಎಲ್ಲರನ್ನೂ ಸಮಾನವಾಗಿ ಪರಿಗಣಿಸುತ್ತದೆ. ಹಾಗೇನಾದರೂ ಅಸಮತೋಲನವಾದರೆ ಅದನ್ನು ಹೈಕಮಾಂಡ್‌ ಸರಿ ಮಾಡುತ್ತದೆ .
-ಎನ್‌.ಎಸ್‌.ಬೋಸರಾಜು , ಸಣ್ಣ ನೀರಾವರಿ ಸಚಿವ

ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್‌ನ ಹಿರಿಯ ಶಾಸಕರು. ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು. ಅವರ ಹೇಳಿಕೆಯನ್ನು ಜನ ಗಂಭೀರವಾಗಿ ಪರಿಗಣಿಸುತ್ತಾರೆ. ಮುಖ್ಯಮಂತ್ರಿಗಳು ಅವರಿಗೆ ಸ್ಪಷ್ಟ ಉತ್ತರ ಕೊಡಬೇಕು. ಮುಖ್ಯಮಂತ್ರಿಗಳ ಹೇಳಿಕೆ ಬಳಿಕವೂ ನಮ್ಮ ಹೇಳಿಕೆಗೆ ಬದ್ಧ ಅನ್ನುವುದನ್ನು ನೋಡಿದರೆ ಶಾಮನೂರು ಶಿವಶಂಕರಪ್ಪ ಹೇಳಿಕೆ ಬಹಳ ಗಂಭೀರವಾಗಿದೆ.

-ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next