ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಾಮಪತ್ರ ಸಲ್ಲಿಸಲಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಚುನಾವಣೆಯಲ್ಲಿ ತಮ್ಮ ಸ್ಪರ್ಧಿ ಶಶಿ ತರೂರ್ ಅವರನ್ನು ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.
ಚುನಾವಣೆಗೆ ನಾಮಪತ್ರಗಳನ್ನು ಸಂಗ್ರಹಿಸಿದ ನಂತರ ಮಧ್ಯಪ್ರದೇಶದ ಮಾಜಿ ಸಿಎಂ ಸಿಂಗ್ ತಿರುವನಂತಪುರಂ ಸಂಸದ ತರೂರ್ ಅವರನ್ನು ಭೇಟಿಯಾದರು. ತಮ್ಮದು “ಪ್ರತಿಸ್ಪರ್ಧಿಗಳ ನಡುವಿನ ಯುದ್ಧವಲ್ಲ ಆದರೆ ಸಹೋದ್ಯೋಗಿಗಳ ನಡುವಿನ ಸೌಹಾರ್ದ ಸ್ಪರ್ಧೆ” ಎಂದು ಒಪ್ಪಿಕೊಂಡಿದ್ದಾರೆ ಎಂದು ಶಶಿ ತರೂರ್ ಹೇಳಿದ್ದಾರೆ.
ಇದನ್ನೂ ಓದಿ: 5.20 ಕೋಟಿ ರೂ. ದಂಡ ಕಟ್ಟಿ: ಪಿಎಫ್‌ಐ ಗೆ ಕೇರಳ ಹೈಕೋರ್ಟ್ ಚಾಟಿ
“ಇಂದು ಮಧ್ಯಾಹ್ನ ದಿಗ್ವಿಜಯ ಸಿಂಗ್ ಅವರನ್ನು ಭೇಟಿಯಾದೆ. ನಮ್ಮ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅವರ ಉಮೇದುವಾರಿಕೆಯನ್ನು ನಾನು ಸ್ವಾಗತಿಸುತ್ತೇನೆ ನಮ್ಮದು ಪ್ರತಿಸ್ಪರ್ಧಿಗಳ ನಡುವಿನ ಯುದ್ಧವಲ್ಲ, ಆದರೆ ಸಹೋದ್ಯೋಗಿಗಳ ನಡುವಿನ ಸೌಹಾರ್ದ ಸ್ಪರ್ಧೆ ಎಂದು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ. ಯಾರು ಮೇಲುಗೈ ಸಾಧಿಸಿದರೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ನಾವಿಬ್ಬರೂ ಬಯಸುವುದು” ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ನಾಮಪತ್ರ ಪ್ರಕ್ರಿಯೆಯ ಕೊನೆಯ ದಿನವಾದ ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವುದಾಗಿ ತರೂರ್ ಈಗಾಗಲೇ ಘೋಷಿಸಿದ್ದಾರೆ. ಈ ಹುದ್ದೆಗೆ ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ.