ಮರವೂರು: ಪ್ರಾಮಾಣಿಕ ಕಾರ್ಯಕ್ಕೆ ಯಶಸ್ಸು ಖಚಿತ. ಜಿಲ್ಲೆಯಲ್ಲಿ ಹೆಚ್ಚು ದೈವ ದೇವರ ನೆಲೆಗಳು ಇರುವುದರಿಂದ ಇಲ್ಲಿನ ಮಣ್ಣು ಶೇಷ್ಠತೆಯನ್ನು ಪಡೆದಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ಪಾದಯಾತ್ರೆಯೇ ಶ್ರೇಷ್ಠ ಪೂಜೆಯಾಗಿದ್ದು, ಕಳೆದ ಬಾರಿ 30 ಸಾವಿರ ಭಕ್ತರು ಪಾಲ್ಗೊಂಡದ್ದು ಇದಕ್ಕೆ ಸಾಕ್ಷಿ. ಈ ಬಾರಿ ಜ.28ರಂದು ಪಾದಯಾತ್ರೆ ನಡೆಯಲಿದೆ ಎಂದು ಅಮ್ಮನೆಡೆಗೆ ನಮ್ಮನಡೆ ಪಾದಯಾತ್ರೆಯ ಅಧ್ಯಕ್ಷ ಸಂದೀಪ್ ಶೆಟ್ಟಿ ಮರವೂರು ಹೇಳಿದರು.
ಅವರು ರವಿವಾರದಂದು ಕಾವೂರು ನವರತ್ನ ಸಭಾಭವನದಲ್ಲಿ ಜರಗಿದ ಅಮ್ಮನೆಡೆಗೆ ನಮ್ಮ ನಡೆ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಐದನೇ ವರ್ಷದ ಪಾದಯಾತ್ರೆಯ ಜತೆ ಸಮಾಜ ಕಾರ್ಯಕ್ಕೂ ಮುಂದಾಗಿದ್ದು, ಇದರಿಂದ ಹೆಚ್ಚಿನ ತೃಪ್ತಿ ಸಿಗಲಿದೆ. ಗ್ರಾಮೀಣ ಭಾಗದಲ್ಲಿ ದುಡಿಯುವ ರಿಕ್ಷಾ ಚಾಲಕರ ಕಷ್ಟವನ್ನು ಕಂಡು ಈ ಬಾರಿ ಅವರಿಗೆ ಸಹಾಯ ಹಸ್ತ ನೀಡಲಿದ್ದೇವೆ. ಇದಕ್ಕಾಗಿ ಜಿಲ್ಲೆಯಲ್ಲಿ 8 ಕ್ಷೇತ್ರ ಸಮಿತಿ ಮಾಡಲಾಗುವುದು ಎಂದು ಅವರು ಹೇಳಿದರು.
ಮೂಲ್ಕಿ-ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಈಶ್ವರ್ ಕಟೀಲು ಮಾತನಾಡಿ, ಪಾದಯಾತ್ರೆಯ ಮೂಲಕ
ಕಟೀಲು ಕ್ಷೇತ್ರಕ್ಕೆ ವಿಶೇಷತೆ ಬಂದಿದ್ದು, ಅತ್ಯಧಿಕ ಭಕ್ತರು ಇಲ್ಲಿಗೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಇಲ್ಲಿ ಜಾತಿ, ಮತ ಭೇದವಿಲ್ಲದೆ ಇಲ್ಲಿ ಪಾದ ಯಾತ್ರೆ ಮಾಡುವುದು ಕಂಡುಬರುತ್ತದೆ. ಜತೆಗೆ ಈ ಬಾರಿ ಸಮಾಜ ಕಾರ್ಯದಿಂದಾಗಿ ಹೆಚ್ಚು ಮಹತ್ವ ಪಡೆದಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ದಯಾನಂದ ಕತ್ತಲ್‌ಸಾರ್ ಹೇಳಿದರು.
ಚಲನಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಪ್ರಾಧ್ಯಾಪಕ ಸಾಯಿನಾಥ ಶೆಟ್ಟಿ, ಉದ್ಯಮಿಗಳಾದ ದೇವಿಚರಣ್ ಶೆಟ್ಟಿ, ರಮಾನಾಥ ಭಂಡಾರಿ, ಪ್ರೀತಂ ಶೆಟ್ಟಿ, ಸತೀಶ್ ಆಳ್ವ ಮೂಡಾರೆ ವೇದಿಕೆಯಲ್ಲಿದ್ದರು.ಸಂಚಾಲಕ ಭಾಸ್ಕರ್ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತನಾಡಿ, ಈ ಪಾದಯಾತ್ರೆ ಸನಾತನ ಧರ್ಮ ಉಳಿಯಲು ಹಾಗೂ ಎಲ್ಲರೂ ಒಟ್ಟಾಗಿ ದೇವರ ಕಡೆಗೆ ಹೋಗುವ ಕಾರ್ಯಕ್ರಮವಾಗಿದೆ. ಯಾರಿಗೂ ತೊಂದರೆಯಾಗದೆ, ಎಲ್ಲರ ಸಹಕಾರದಿಂದ ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿದೆ ಎಂದು ಹೇಳಿದರು. ರಾಜೇಂದ್ರ ಪ್ರಸಾದ್ ಎಕ್ಕಾರು ನಿರೂಪಿಸಿದರು.